ವಿದ್ಯುತ್‌ ದರ ಒಂದು ಯೂನಿಟ್‌ಗೆ 1.46 ಪೈಸೆ ವಿದ್ಯುತ್ ದರ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾಪ ಮಾಡಿದ್ದು, ಇದರ ಜತೆಗೆ ಹೆಸ್ಕಾಂ,ಮೆಸ್ಕಾಂ ,ಜೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ಸಹ ದರ ಏರಿಕೆ ಮಾಡುವಂತೆ ಪ್ರಸ್ತಾಪ ಮಾಡಿದೆ.

ಬೆಂಗಳೂರು (ಫೆಬ್ರವರಿ 14, 2023): ರಾಜ್ಯದ ಜನತೆಗೆ ಮತ್ತೆ ಕರೆಂಟ್‌ ಶಾಕ್‌ ಕಾದಿದ್ಯಾ ಎಂಬ ಬಗ್ಗೆ ಅನುಮಾನ ಮೂಡ್ತಿದೆ. ಏಕೆಂದರೆ, ವಿದ್ಯುತ್ ದರ ಪರಿಷ್ಕರಣೆ ಮಾಡುವ ಪ್ರಸ್ತಾಪದ ಬಗ್ಗೆ ಕೆಇಆರ್‌ಸಿ ಮಂಗಳವಾರ ಸಾರ್ವಜನಿಕ ಸಭೆ ನಡೆಸುತ್ತಿದೆ. ರಾಜ್ಯದ ಪ್ರಮುಖ ಎಸ್ಕಾಂಗಳು ವಿದ್ಯುತ್ ದರ ಏರಿಕೆ ಮಾಡಲು ಅರ್ಜಿಗಳನ್ನು ಸಲ್ಲಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕೆಇಆರ್‌ಸಿ ಸಭೆ ನಡೆಸುತ್ತಿದೆ. ಕಳೆದ ಬಾರಿ ವಿದ್ಯುತ್‌ ದರ ಇಳಿಕೆ ಮಾಡಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಈ ಬಾರಿ ಮತ್ತೆ ಬೆಲೆ ಏರಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ವಿದ್ಯುತ್‌ ದರ ಒಂದು ಯೂನಿಟ್‌ಗೆ 1.46 ಪೈಸೆ ವಿದ್ಯುತ್ ದರ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾಪ ಮಾಡಿದ್ದು, ಇದರ ಜತೆಗೆ ಹೆಸ್ಕಾಂ,ಮೆಸ್ಕಾಂ ,ಜೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ಸಹ ದರ ಏರಿಕೆ ಮಾಡುವಂತೆ ಪ್ರಸ್ತಾಪ ಮಾಡಿದೆ. ಹೀಗಾಗಿ ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆ ಸಲಹೆಗಳನ್ನು ಕ್ರೋಡೀಕರಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಭೆ ನಡೆಸುತ್ತಿದೆ.

ಇದನ್ನು ಓದಿ: ವಿದ್ಯುತ್‌ ದರ ಏರಿಕೆ ಶಾಕ್‌: ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ

ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಇಂದು ಬೆಸ್ಕಾಂ ಸಲ್ಲಿಸಿರೋ ದರ ಏರಿಕೆ ಅರ್ಜಿಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಈ
ಸಭೆಯಲ್ಲಿ ಬೆಸ್ಕಾಂ ಎಂ‌ಡಿ ಮಹಾಂತೇಶ್ ಬೀಳಗಿ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದಾರೆ. ನಷ್ಟದ ನೆಪವೊಡ್ಡಿ ವಿದ್ಯುತ್ ದರ ಏರಿಕೆಗೆ ಬೆಂಗಳೂರು, ತುಮಕೂರು ಮುಂತಾದ ಜಿಲ್ಲೆಗಳ ಬೆಸ್ಕಾಂ ಕಂಪನಿ ವಿದ್ಯುತ್‌ ದರ ಏರಿಕೆಗೆ ಪ್ರಸ್ತಾಪ ಇಟ್ಟಿದೆ. ಕಲ್ಲಿದ್ದಲು, ಉತ್ಪಾದನೆ ವೆಚ್ಚ, ಕಚ್ಚಾ ಸಾಮಾಗ್ರಿಗಳ ದರ ಪ್ರಸ್ತಾಪಿಸಿ ಇತರೆ ಎಸ್ಕಾಂಗಳು ಸಹ ದರ ಏರಿಕೆ ಪ್ರಸ್ತಾಪ ಇಟ್ಟಿವೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ 35 ಪೈಸೆ, ಸೆಪ್ಟೆಂಬರ್‌ನಲ್ಲಿ 43 ಪೈಸೆ ಹೆಚ್ಚಳ ಮಾಡಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ. ಇದೀಗ ಎಸ್ಕಾಂಗಳ ವಿದ್ಯುತ್ ಏರಿಕೆ ಅರ್ಜಿ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ವಿದ್ಯುತ್ ಏರಿಕೆಗೆ ಕೆಇಆರ್‌ಸಿ ಮುಂದಾಗಿದೆ. ಆದರೆ, ಈ ಸಭೆಯಲ್ಲಿ ವಿದ್ಯುತ್‌ ದರ ಏರಿಕೆ ಮಾಡುವುದು ಬೇಡ ಅಂತ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಶನಿವಾರದಿಂದಲೇ ವಿದ್ಯುತ್‌ ದರ ಮತ್ತೆ ಏರಿಕೆ: 6 ತಿಂಗಳಲ್ಲಿ 2ನೇ ಬಾರಿ ದುಬಾರಿ

2022 ರ ವರ್ಷದ ಕೊನೆಯಲ್ಲಿ ಬೆಲೆ ಇಳಿಕೆಯಾಗಿತ್ತು
ವರ್ಷದ ಕೊನೆಯಲ್ಲಿ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿನ ಜನರಿಗೆ ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರ ತೆಗದುಕೊಳ್ಳಲಾಗಿದೆ ಅಂತ ತಿಳಿಸಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 39 ಪೈಸೆ ಕಡಿತ ಮಾಡಲಾಗಿದ್ದು, ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಲಭಿಸಲಿದೆ ಅಂತ ಸಚಿವ ಸುನಿಲ್‌ ಕುಮಾರ್‌ ಟ್ವೀಟ್ ಮಾಡಿದ್ದರು. ಈ ಮೂಲಕ ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದ್ದರು. ಆದರೆ, ಈಗ ಮತ್ತೆ ಬೆಲೆ ಏರಿಕೆ ಪ್ರಸ್ತಾಪ ಸಂಬಂಧಸಾರ್ವಜನಿಕ ಸಭೆ ನಡೆಸುತ್ತಿದ್ದು, ರಾಜ್ಯದ ಜನತೆಗೆ ಬೇಸಿಗೆಗೆ ವಿದ್ಯುತ್ ಬೆಲೆ ಏರಿಕೆ ಶಾಕ್‌ ತಗುಲುವ ಸಾಧ್ಯತೆ ಇದೆ.