Asianet Suvarna News Asianet Suvarna News

ನಾಗಮಂಗಲ ಗಲಭೆಗೆ ಕೇರಳ ಪಿಎಫ್‌ಐ ನಂಟು? ಎನ್‌ಐಎ ತನಿಖೆಗೆ ಆರ್‌ ಅಶೋಕ್ ಒತ್ತಾಯ

ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಕೋಮು ಗಲಭೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಗಲಾಟೆ ಹಿಂದೆ ಕೇರಳ ಮೂಲದ ನಿಷೇಧಿತ ಪಿಎಫ್‌ಐ ಸಂಘಟನೆಯ ಲಿಂಕ್‌ ಇರುವ ಆರೋಪ ಕೇಳಿಬಂದಿದೆ.

kerala pfi in involved innagamangala riot karnataka bjp seeks NIA probe rav
Author
First Published Sep 16, 2024, 4:41 AM IST | Last Updated Sep 16, 2024, 11:48 AM IST

ನಾಗಮಂಗಲ(ಮಂಡ್ಯ) (ಸೆ.16): ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಕೋಮು ಗಲಭೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಗಲಾಟೆ ಹಿಂದೆ ಕೇರಳ ಮೂಲದ ನಿಷೇಧಿತ ಪಿಎಫ್‌ಐ ಸಂಘಟನೆಯ ಲಿಂಕ್‌ ಇರುವ ಆರೋಪ ಕೇಳಿಬಂದಿದೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ 44ನೇ ಆರೋಪಿ ಯೂಸೂಫ್ ಮತ್ತು 61ನೇ ಆರೋಪಿ ನಾಸೀರ್‌ ಎಂಬವರನ್ನು ಬಂಧಿಸಲಾಗಿದ್ದು, ಇವರು ಕೇರಳದ ಮಲ್ಲಪ್ಪುರಂ ಮೂಲದವರಾಗಿದ್ದಾರೆ. ಗಲಭೆ ಸಮಯದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇವರನ್ನು ಬಂಧಿಸಲಾಗಿದ್ದು, ಇವರು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

 

ಕತ್ತೆ ಕಾಯ್ತಿದ್ರಾ ಪೊಲೀಸರು?: ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದಿದ್ಯಾಕೆ ಆರ್.ಅಶೋಕ್

ಗಲಭೆಯಲ್ಲಿ ಹೊರಗಿನವರ ಕೈವಾಡ ಇದೆ ಎಂಬ ಆರೋಪ ಆರಂಭದಿಂದಲೂ ಕೇಳಿಬರುತ್ತಿತ್ತು. ಸದ್ಯ ಪ್ರಕರಣದ ಎಫ್‌ಐಆರ್‌ನಲ್ಲಿರುವ 74 ಆರೋಪಿಗಳ ಪೈಕಿ ಈ ಇಬ್ಬರು ಹಲವು ವರ್ಷಗಳಿಂದ ಪಟ್ಟಣದಲ್ಲಿ ನೆಲೆಸಿಕೊಂಡು ಪಾತ್ರೆ ಮತ್ತು ಬೇಕರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಕೇರಳ ಮೂಲದವರಾದ ಇವರಿಬ್ಬರು ಪಿಎಫ್‌ಐ ಸಂಘಟನೆಗೆ ಸೇರಿದವರು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಪೂರ್ವ ತಯಾರಿ:

ಪಟ್ಟಣದಲ್ಲಿ ಕೋಮು ಗಲಭೆ ನಡೆಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪವೂ ಇದೆ. ಇದಕ್ಕೆ ಪೂರಕವಾಗಿ ಪಟ್ಟಣದ ಮೆಡಿಕಲ್ ಶಾಪ್‌ವೊಂದರಲ್ಲಿ ಗಲಭೆಗೂ ಮೊದಲೇ 200 ಮಾಸ್ಕ್‌ಗಳನ್ನು ಖರೀದಿಸಲಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮೂಲದವರ ಕೈವಾಡವಿದೆ. ಹಾಗಾಗಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಕೇರಳ ಮೂಲದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪಿಎಫ್‌ಐ ಸಂಘಟನೆಗೆ ಸೇರಿದವರೋ, ಅಲ್ಲವೋ ಎಂಬ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಬಯಲಾಗಲಿದೆ. ಗಲಭೆ ಹಿಂದೆ ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರಬೇಕಿದೆ. ಈಗ ಪಟ್ಟಣ ಸಹಜ ಸ್ಥಿತಿಗೆ ಮರಳಿದೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು.
- ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ

ಎನ್‌ಐಎ ತನಿಖೆಗೆ ಆರ್ ಅಶೋಕ್ ಆಗ್ರಹ

ನಾಗಮಂಗಲದಲ್ಲಿ ನಡೆದ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳು ಮತ್ತು ಮತೀಯ ಮೂಲಭೂತವಾದಿಗಳ ಕೈವಾಡವಿರುವ ಶಂಕೆಯಿರುವುದರಿಂದ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಪಿಎಫ್‌ಐ, ಕೆಎಫ್‌ಡಿಗಳಂಥ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ದುರುಳರು ಗಲಭೆಗೊ ಮುನ್ನ 150 ಮಾಸ್ಕ್‌ ಖರೀದಿಸಿದ್ದಾರೆ. ಸಿಸಿಟಿವಿಗಳನ್ನು ನಾಶ ಮಾಡಿದ್ದಾರೆ. ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ ಮತ್ತು ಪೂರ್ವನಿಯೋಜಿತವಾಗಿದೆ ಎಂಬುದು ಸ್ಥಳೀಯರ ಅನುಮಾನವಾಗಿದೆ. ಅಷ್ಟೇ ಅಲ್ಲದೆ ಸರ್ಕಾರ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೊದಲ 23 ಆರೋಪಿಗಳು ಹಿಂದೂಗಳೇ ಆಗಿರುವುದರಿಂದ ಪೋಲಿಸರು ನಿಷೇಧಿತ ಸಂಘಟನೆಗಳ ಒತ್ತಡದಲ್ಲಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ ಎಂದು ಹೇಳಿದ್ದಾರೆ.

 

ಕಾಂಗ್ರೆಸ್‌ ಅಂದ್ರೇನೆ ಮುಸ್ಲಿಂ ಪಾರ್ಟಿ, ಉಚಿತ ಆಸೆಗೆ ಬಿದ್ದ ಹಿಂದೂಗಳಿಗೆ ಇದು ಅರ್ಥವಾಗ್ತಿಲ್ಲ: ಯತ್ನಾಳ್

ಈ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳು ಮತ್ತು ಮತೀಯ ಮೂಲಭೂತವಾದಿಗಳ ಕೈವಾಡವಿರುವ ಬಲವಾದ ಸಂದೇಹವಿರುವುದರಿಂದ ಸ್ಥಳೀಯ ಪೋಲಿಸರು ಈ ಪ್ರಕರಣವನ್ನ ಭೇದಿಸುವುದು ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios