'ಆನೆ ದಾಳಿಯಿಂದ ರಾಜ್ಯದ ವ್ಯಕ್ತಿ ಸತ್ರೆ 5 ಲಕ್ಷ, ಕೇರಳ ವ್ಯಕ್ತಿ ಸತ್ತರೆ 15 ಲಕ್ಷ..' ರಾಜ್ಯ ಸರ್ಕಾರದ ವಿರುದ್ಧ ನಾಯಕರ ಕಿಡಿ!
ಆನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿರುವ ವಿಚಾರಕ್ಕೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು (ಫೆ.20): ಕಾಡಾನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ರಾಜ್ಯ ಸರ್ಕಾರ 15 ಲಕ್ಷ ಪರಿಹಾರ ನೀಡಿರುವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ವಯನಾಡ್ ಸಂಸದ ರಾಹುಲ್ ಗಾಂಧಿ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬವನ್ನು ಭೇಟಿ ಮಾಡಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರ ಈ ಪರಿಹಾರ ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಕಳೆದ ಮೂರು ವರ್ಷದಲ್ಲಿ ಕೊಡಗು ಜಿಲ್ಲೆಯೊಂದರಲ್ಲೇ 18ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ಅವರಿಗೆ ಇಲ್ಲದ ಇಷ್ಟು ದೊಡ್ಡ ಮೊತ್ತದ ಪರಿಹಾರ, ಕೇರಳದ ವ್ಯಕ್ತಿಗೆ ನೀಡಿರುವ ಬಗ್ಗೆ ಪ್ರಶ್ನೆ ಎದ್ದಿದೆ. ಇನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕರ್ನಾಟಕದ ಬಂಡಿಪುರದ ಕಾಡಾನೆ ತುಳಿದು ಸಾವು ಕಂಡಿದ್ದಕ್ಕೆ ಪರಿಹಾರ ನೀಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ' ಸಿದ್ದರಾಮಯ್ಯ ಅವರ ರಾಷ್ಟ್ರೀಯ ನಾಯಕರು. ಅವರಿಗೆ ಸಲಹೆ ನೀಡುವ ರಾಷ್ಟ್ರೀಯ ನಾಯಕ. ಅವರ ಸಲಹೆ ಮೇರೆಗೆ 15ಲಕ್ಷ ಕೊಟ್ಟಿದ್ದಾರೆ. ನಾನೆಲ್ಲೂ ಸರ್ಕಾರ ಗ್ಯಾರಂಟಿ ಇಂದ ದಿವಾಳಿ ಆಗಿದೆ ಅಂತಾ ಹೇಳಿಲ್ಲ. ನಮ್ಮ ರೈತರಿಗೆ ಎರಡು ಸಾವಿರ ಕೊಡ್ತಾರೆ. ಅವರಿಗೆ 15ಲಕ್ಷ ಕೊಡ್ತಾರೆ. ಕೇಂದ್ರದಿಂದ ಪರಿಹಾರವೇ ಬಂದಿಲ್ಲ ಅಂತ ಹೇಳ್ತಾರೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಅಂತಾರೆ. ಸಾವಿರ ಸಾರಿ ಸುಳ್ಳು ಹೇಳಿ ನಿಜ ಮಾಡುವ ರೀತಿ ಮಾಡಲು ಹೊರಟಿದ್ದಾರೆ ನಮ್ಮ ಮುಖ್ಯಮಂತ್ರಿ' ಎಂದು ಟೀಕಿಸಿದ್ದಾರೆ.
ರಾಷ್ಟ್ರದ ಹಲವು ಆರ್ಥಿಕ ತಜ್ಞರ ಜೊತೆ ಓಪನ್ ಡಿಬೆಟ್ ಮಾಡೋಣ. ಕೇಂದ್ರದಿಂದ ಅನ್ಯಾಯ ಆಗ್ತಿದೆ ಅಂತ ಹೇಳಿದ್ದೀರಿ.. ಅನ್ಯಾಯ ಆಗಿದೆ ಅಂತ ಒಬ್ಬರು ಹೇಳಿದ್ರೆ ಅವರು ಹೇಳಿದ ಹಾಗೆ ಕೇಳೋಕೆ ಸಿದ್ದ. ಅಲ್ಲಿ ಆನೆ ತುಳಿದರೆ, 15 ಲಕ್ಷ ಕೊಡ್ತೀರಿ. ಇಲ್ಲಿ ಆನೆ ತುಳಿದ್ರೆ 5ಲಕ್ಷ ಕೊಡ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು. ವೀರಾವೇಷದಿಂದ ಒಳಗೆ ಭಾಷಣ ಮಾಡ್ತಿರಬಹುದು. ಕನ್ನಡಿಗರಿಗೆ ಅನ್ಯಾಯ ಆಯ್ತು ಅಂತಾರೆ. ನಿಮ್ಮ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ. ತಮಟೆ ಹೊಡೆದು ಪ್ರತಿಭಟನೆ ಮಾಡಿದ್ರಲ್ಲ. ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರಲ್ಲ. ಇಲ್ಲಿ ಅನ್ಯಾಯ ಆಗಿದ್ರೆ ಅವರು ಬಾಯಿ ತೆಗೆಯಬೇಕಿತ್ತಲ್ಲ. ಕೇಂದ್ರದ ಸಮಿತಿ ಕೊಡುವ ಶಿಫಾರಸು ಮೇರೆಗೆ ರಾಜ್ಯಗಳಿಗೆ ಹಣ ಕೊಡೋದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಪೊಲೀಸರಿಗೆ 20 ವರ್ಷಗಳಿಂದ ಬೇಕಾಗಿದ್ದ ನಕ್ಸಲ್‌ನನ್ನು ಹಿಡಿದುಕೊಟ್ಟ ಕೇರಳದ ಕಾಡಾನೆ!
ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆನೆ ದಾಳಿಯಿಂದ ಮೃತಪಟ್ಟ ಕೇರಳ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ಪರಿಹಾರ ಘೋಷಣೆ ಮಾಡಿದೆ.. ಕೇರಳದ ವ್ಯಕ್ತಿಗೆ ಪರಿಹಾರ ನಿಡೀರೋದು ಕಾಂಗ್ರೆಸ್ ಪಕ್ಷದ ಮುಖಂಡ ಕೇರಳ ರಾಜ್ಯದ ಸಂಸದ ರಾಹುಲ್‌ಗಾಂಧಿ ಆದೇಶದ ಮೇರೆಗೆ 15 ಲಕ್ಷ ಕೊಟ್ಟಿದ್ದಾರೆ. ಬಿಜೆಪಿ ಇದನ್ನ ಖಂಡಿಸುತ್ತೆ. ಬರದ ಸಂಧರ್ಭದಲ್ಲಿ ರೈತರಿಗೆ ಹೆಕ್ಟೇರ್ ಗೆ ಎರಡು ಸಾವಿರ ಮಾತ್ರ ಕೊಡ್ತಿದ್ದಾರೆ. ರಾಹುಲ್ ಗಾಂಧಿ ಹೇಳಿದ್ರು ಅಂತ 15 ಲಕ್ಷ ಕೊಟ್ಟಿದ್ದಾರೆ. ನಿಮ್ಮ ನಾಯಕರ ಖುಷಿ ಪಡಿಸಲು ಈ ನಿರ್ಧಾರ ಮಾಡಿದ್ದಾರೆ. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮಾಡಬೇಕು ಅಂತ ಹಿಂದಿನಿಂದಲೂ ಹೇಳಿದ್ದಾರೆ. ಹಿಂದಿನ ಸಿಎಂ ಯಡಿಯೂರಪ್ಪ ಅವರು ಹಾಗೂ ಅಂದಿನ ಕೇರಳ ಸಿಎಂ ಚರ್ಚೆ ಮಾಡಿದ್ದರು. ಆದರೂ ಸಂಚಾರ ಲಿಫ್ಟ್ ಮಾಡಿರಲಿಲ್ಲ. ಅದು ಮೀಸಲು ಅರಣ್ಯ ಪ್ರದೇಶವಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ರಾತ್ತಿ ಸಂಚಾರ ಅನುಮತಿ ಕೊಡದಿರಲು ಯಡಿಯೂರಪ್ಪ ನಿರ್ಧಾರ ಮಾಡಿದ್ದರು. ಈಗ ಖಂಡ್ರೆ ಅವರು ಹೇಳಿಕೆ ಕೊಟ್ಟಿದ್ದಾರೆ. ಎಮರ್ಜೆನ್ಸಿ ವಾಹನ ಓಡಾಡಲು ಅನುಮತಿ ಕೊಡ್ತೀವಿ ಅಂತ. ಕಾಂಗ್ರೆಸ್ ತಮ್ಮ ಹೈಕಮಾಂಡ್ ಮೆಚ್ಚಿಸಲು, ಜನ ವಿರೋಧಿ ನೀತಿ ಅನುಸರಿಸಿದೆ. ಅರಣ್ಯ ಪ್ರಾಣಿಗಳ ವಿರೋಧಿ ನೀತಿ ತೆಗೆದುಕೊಂಡಿದ್ದಾರೆ. ರಾಜ್ಯದ ಹಿತಾಸಕ್ತಿ ವಿರುದ್ಧ ನಡೆದುಕೊಳ್ತಿದೆ. ಇದನ್ನ ಬಿಜೆಪಿ ಖಂಡಿಸಲಿದೆ ಎಂದಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿಕೆಶಿವಕುಮಾರ್, ಈ ಬಗ್ಗೆ ನನಗೆ ತಿಳಿದಿಲ್ಲ. ಈ ವಿಚಾರವಾಗಿ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.