ಬೆಂಗಳೂರು ಕಟ್ಟಿದ ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌.ಭೋಸರಾಜು ತಿಳಿಸಿದ್ದಾರೆ.

ಮಡಿಕೇರಿ (ಜೂ.27) : ಬೆಂಗಳೂರು ಕಟ್ಟಿದ ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌.ಭೋಸರಾಜು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಕೊಡಗು ಗೌಡ ಸಮಾಜಗಳ ಸಹಕಾರದಲ್ಲಿ ನಗರದ ಕೊಡಗು ಗೌಡ ಸಮಾಜದಲ್ಲಿ ಮಂಗಳವಾರ ನಡೆದ ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಕೆರೆ-ಕಟ್ಟೆಗಳು, ದೇವಸ್ಥಾನಗಳು, ಸ್ಮಾರಕಗಳನ್ನು ನಿರ್ಮಾಣ ಮಾಡಿ ಬೆಂಗಳೂರನ್ನು ಇಡೀ ವಿಶ್ವದಲ್ಲೇ ಮಾದರಿ ನಗರವಾಗಿ ನಿರ್ಮಿಸಿದರು. ಕೆಂಪೇಗೌಡರ ಆಡಳಿತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಎಲ್ಲರಿಗೂ ಮಾದರಿಯಾದ ಆಡಳಿತವನ್ನು ನೀಡಿದ್ದಾರೆ. ಕೆಂಪೇಗೌಡರ ಆಡಳಿತ ಮತ್ತು ದೂರದೃಷ್ಟಿಯ ಬಗ್ಗೆ ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದರು.

'ರಾಜ್ಯದಲ್ಲಿ ಎಮೆರ್ಜೆನ್ಸಿ ಶೀಘ್ರ' ಬೊಮ್ಮಾಯಿ ಹೇಳಿಕೆಗೆ ಸಚಿವ ಎನ್‌.ಎಸ್‌ ಬೋಸರಾಜು ತಿರುಗೇಟು

ಬಜೆಟ್‌ ಅಧಿವೇಶನ ನಂತರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಲಾಗುವುದು ಎಂದು ಹೇಳಿದರು.

ಶಾಸಕ ಡಾ.ಮಂಥರ್‌ ಗೌಡ ಮಾತನಾಡಿ, ಕನ್ನಡ ನಾಡಿಗೆ ಅದರಲ್ಲೂ ಬೆಂಗಳೂರಿಗೆ ಕೆಂಪೇಗೌಡ ಅವರು ಮಾದರಿ ಆಡಳಿತ ನೀಡಿದ್ದಾರೆ. ಕುಶಾಲನಗರದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಜಾಗ ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಆದರ್ಶ ಆಡಳಿತಗಾರ ಕೆಂಪೇಗೌಡರ ಮಾದರಿ ಆಡಳಿತ ಬಗ್ಗೆ ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ಇಡೀ ಭಾರತ ದೇಶದಲ್ಲಿಯೇ ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡಲು ಶ್ರಮಿಸಿದ್ದಾರೆ ಎಂದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಮಾತನಾಡಿ, ಕೆಂಪೇಗೌಡರ ಜನ್ಮ ದಿನಾಚರಣೆ ಸಂದರ್ಭ ಅವರ ಅಧಿಕಾರ ಅವಧಿಯಲ್ಲಿನ ಕೆಲಸಗಳನ್ನು ಸದಾ ಸ್ಮರಿಸಬೇಕು. ಕೆಂಪೇಗೌಡರ ಕನಸು ನನಸು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷ ಎಸ್‌.ಎನ್‌.ಚಂಗಪ್ಪ ಮಾತನಾಡಿ, ಬೆಂಗಳೂರಿನ ಒಂದೊಂದು ಬಡಾವಣೆಗೂ ಒಂದೊಂದು ಹೆಸರು ಇಟ್ಟು ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರು ಶ್ರಮಿಸಿದ್ದಾರೆ. ಆದರ್ಶ ಆಡಳಿತಗಾರ ಕೆಂಪೇಗೌಡರನ್ನು ಸದಾ ಸ್ಮರಿಸಬೇಕು ಎಂದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್‌.ಸೋಮಣ್ಣ ಮಾತನಾಡಿ, ಒತ್ತುವರಿಯಾಗಿರುವ ಕೆರೆ ಕಟ್ಟೆಗಳು, ರಾಜ ಕಾಲುವೆಗಳನ್ನು ತೆರವುಗೊಳಿಸಬೇಕು. ಇದರಿಂದ ಸುಗಮ ಸಂಚಾರ ಹಾಗೂ ಕೆರೆ ಕಟ್ಟೆಗಳ ಉಳಿವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ವಕೀಲ ಕೆ.ಆರ್‌.ವಿದ್ಯಾಧರ ಮಾತನಾಡಿ, ಕೆಂಪೇಗೌಡರು ವಿಜಯ ನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನವರಾಗಿದ್ದರು. ಹಂಪಿಯ ವೈಭವವನ್ನು ಕಂಡು ದೂರದೃಷ್ಟಿಯಿಂದ ಬೆಂಗಳೂರನ್ನು ನಿರ್ಮಾಣ ಮಾಡಿದರು ಎಂದರು.

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಕೊಡಗು ಗೌಡ ಸಮಾಜದ ಮಡಿಕೇರಿ ಅಧ್ಯಕ್ಷ ಪೇರಿಯನ ಜಯಾನಂದ, ಜಿ.ಪಂ. ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ, ಹೈಕೋರ್ಚ್‌ ವಕೀಲ ಎಚ್‌.ಎಸ್‌.ಚಂದ್ರಮೌಳಿ, ಒಕ್ಕಲಿಗ ಸಮಾಜದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ.ಆರ್‌.ಮುತ್ತಣ್ಣ, ಜಿ.ಪಂ. ಸಿಇಒ ಡಾ.ಎಸ್‌.ಆಕಾಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರರಾಜ್‌ ಇತರರು ಇದ್ದರು.

ಕೆಂಪೇಗೌಡ, ನಾಲ್ವಡಿ ಸಾಧನೆ ಯಾರೂ ಮಾಡಲಾಗದು: ಕೃಷಿ ಸಚಿವ ಚೆಲುವರಾಯಸ್ವಾಮಿ

ಕೊಡಗು ಗೌಡ ಮಹಿಳಾ ಒಕ್ಕೂಟದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಶಿಕ್ಷಕರಾದ ಕುಮಾರ ನಿರೂಪಿಸಿದರು. ಮಣಜೂರು ಮಂಜುನಾಥ್‌ ವಂದಿಸಿದರು.