ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ತವರಿಂದಲೇ ಕೆಇಎ ಪ್ರಶ್ನೆಪತ್ರಿಕೆ ಸೋರಿಕೆ?

ಬ್ಲೂಟೂತ್‌ ಬಳಸಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಹಿಂದಿನ ಮಾಸ್ಟರ್‌ ಮೈಂಡ್‌ ಆರ್‌.ಡಿ.ಪಾಟೀಲ್‌ ತವರೂರು ಅಫಜಲ್ಪುರದಿಂದಲೇ ಕೆಇಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಲವಾದ ಗುಮಾನಿ ತನಿಖಾಧಿಕಾರಿಗಳ ಮನದಲ್ಲಿ ಮೂಡಿದೆ. 

KEA Question Paper Leaked by Kingpin RD Patil Native Kalaburagi gvd

ಶೇಷಮೂರ್ತಿ ಅವಧಾನಿ

ಕಲಬುರಗಿ (ನ.14): ಬ್ಲೂಟೂತ್‌ ಬಳಸಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಹಿಂದಿನ ಮಾಸ್ಟರ್‌ ಮೈಂಡ್‌ ಆರ್‌.ಡಿ.ಪಾಟೀಲ್‌ ತವರೂರು ಅಫಜಲ್ಪುರದಿಂದಲೇ ಕೆಇಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಲವಾದ ಗುಮಾನಿ ತನಿಖಾಧಿಕಾರಿಗಳ ಮನದಲ್ಲಿ ಮೂಡಿದೆ. ಹಗರಣದಲ್ಲಿ ಬ್ಲೂಟೂತ್‌ (ಏಕಮುಖ ಕಾರ್ಯನಿರ್ವಹಿಸುವ)ಗಳ ಬಳಕೆಯಾಗಿರೋದರಿಂದ ಪರೀಕ್ಷೆಗೂ ಮುಂಚೆ ಅಥವಾ ಪರೀಕ್ಷೆ ಶುರುವಾಗುತ್ತಿದ್ದಂತೆಯೇ ಪ್ರಶ್ನೆ ಪತ್ರಿಕೆ ಸರಿ ಉತ್ತರ ನೀಡಲು ಹೊರಗಡೆ ಸನ್ನದ್ಧವಾಗಿದ್ದ ಪರಿಣಿತರ ತಂಡದ ಕೈ ಸೇರಲೇಬೇಕು ತಾನೆ?

ಹೀಗಾಗಿ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಹೊರಗಡೆ ಕಾರ್‌ನಲ್ಲೋ, ಲಾಡ್ಜ್‌ ರೂಮ್‌ನಲ್ಲೋ ತಂಗಿದ್ದವರ ಕೈ ಸೇರಿತು ಹೇಗೆ? ಪರೀಕ್ಷೆ ಶುರುವಾಗುತ್ತ್ಗಿದ್ದಂತೆಯೇ ಸರಿ ಉತ್ತರ ಪೂರೈಸುವ ತಂಡವನ್ನ ತಲುಪಿತಾದರೂ ಹೇಗೆ? ಎಂಬ ಪ್ರಶ್ನೆಗಳೊಂದಿಗೆ ತನಿಖೆಯನ್ನು ಮುಂದುವರಿಸಿದ್ದ ತನಿಖಾಧಿಕಾರಿಗಳ ಮನದಲ್ಲಿ ಅಫಜಲ್ಪುರದಿಂದಲೇ ಯಾಕೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗರಬಾರದು? ಎಂಬ ಪ್ರಶ್ನೆ ಮೂಡಿದೆ. ಈ ಶಂಕೆಗೆ ಪೂರಕ ಎಂಬಂತೆ ಅ.28ರ ಕೆಇಎ ಪರೀಕ್ಷೆಯ ಮೊದಲ ದಿನವೇ ಇಲ್ಲಿನ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಿಂದ ಬ್ಲೂಟೂತ್‌ ಸಮೇತ ಅಭ್ಯರ್ಥಿಗಳು, ಸರಿ ಉತ್ತರ ಹೇಳುವವರು ಸೇರಿದಂತೆ ಹಲವರನ್ನು ಬಂಧಿಸಿದ್ದ ಬೆಳವಣಿಗೆಯೂ ನಡೆದಿರೋದು ಗುಟ್ಟೇನಲ್ಲ.

ಕೆಇಎ ಪರೀಕ್ಷಾ ಅಕ್ರಮ: ಮೊಬೈಲ್‌ ಬದಲಿಸುತ್ತ ಯಾಮಾರಿಸುತ್ತಿರುವ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌

ಇಲ್ಲಿ ಬಂಧಿತರಾದವರಲ್ಲಿ ಮೂವರು ಅಭ್ಯರ್ಥಿಗಳೇ ತಾವು ಆರ್‌ಡಿಪಿ ಜೊತೆ ಡೀಲ್‌ ಮಾಡಿಕೊಂಡ ಬಗೆಯನ್ನೆಲ್ಲ ಬಾಯಿಬಿಟ್ಟಿದ್ದಲ್ಲದೆ ತಮಗೆ ಅನಾಮಧೇಯರು ಬ್ಲೂಟೂತ್‌ ಪೂರೈಸಿರೋದು, ತಾವು ಪರೀಕ್ಷೆ ಬರೆಯಲು ಸಿದ್ಧರಾಗಿರೋದನ್ನೆಲ್ಲ ವಿವರಿಸಿದ್ದಾರೆ. ಅಫಜಲ್ಪುರ ಪರೀಕ್ಷಾ ಕೇಂದ್ರದಲ್ಲಿ ಹೊರಗಡೆ ಬ್ಲೂಟೂತ್‌ ಇದ್ದವರು ಸಿಕ್ಕಿಬಿದ್ದಾಗ ಅಲ್ಲಿಂದ ಆಸೀಫ್‌ ಎಂಬ ವ್ಯಕ್ತಿಯೋಬ್ಬ ಆ ದಿನ ತಪ್ಪಿಸಿಕೊಂಡು ಓಡಿದ್ದ. ನಂತರದಲ್ಲಿ ಅಸೀಫ್‌ ಪೊಲೀಸ್‌ ಸೆರೆ ಸಿಕ್ಕಿದ್ದಾನೆ. ಈತನೂ ಕೂಡಾ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ, ಬ್ಲೂಟೂತ್‌ ಪೂರೈಕೆ ಹಲವು ರಹಸ್ಯಗಳನ್ನು ಪೊಲೀಸರಿಗೆ ಬಾಯಿ ಬಿಟ್ಟಿದ್ದಾನೆಂದು ಹೇಳಲಾಗುತ್ತಿದೆ.

ಸೆರೆ ಸಿಕ್ಕವರ ಹೇಳಿಕೆ ತಾಳೆ ಹಾಕಿ ನೋಡಿದಾಗ ಪ್ರಶ್ನೆ ಪತ್ರಿಕೆ ಅಫಜಲ್ಪುರದಿಂದಲೇ ಸೋರಿಕೆಯಾಗಿರುವ ಗುಮಾನಿಗೆ ಪುಷ್ಟಿ ದೊರಕುತ್ತಿದೆ ಎಂಬ ಮಾತುಗಳು ತನಿಖಾಧಿಕಾರಿ ಹಂತದಲ್ಲಿ ಕೇಳಿ ಬರುತ್ತಿವೆ. ಅಫಜಲ್ಪುರದಲ್ಲಿ ಬ್ಲೂಟೂತ್‌ ಹೊಂದಿದವರನ್ನು ಪರೀಕ್ಷೆಗೆ ಹೋಗುವ ಮುನ್ನವೇ ಬಂಧಿಸಲಾಗಿತ್ತು. ಕಲಬುರಗಿಯಲ್ಲಿ ಕೇಂದ್ರದೊಳಗಿದ್ದು ಬರೆಯುತ್ತಿರೋರನ್ನ ಬಂಧಿಸಲಾಗಿತ್ತು. ಇವೆಲ್ಲ ಗಮನಿಸಿದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಅದಾಗಲೇ ನೇಮಕಗೊಂಡಿದ್ದ ತಂಡಗಳಿಂದ ಅಭ್ಯರ್ಥಿಗಳಿಗೆ ಸರಿ ಉತ್ತರಗಳ ರವಾನೆ ಆಗಿಬಿಟ್ಟಿತ್ತೆಂದು ಹೇಳಲಾಗುತ್ತಿದೆ.

KEA ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್‌ ಖರ್ಗೆ

ತನ್ನ ತವರಲ್ಲೇ ಪರೀಕ್ಷಾ ಕೇಂದ್ರವಿರೋದರಿಂದ ಹಾಗೂ ತನ್ನ ಜಾಲ ಅಲ್ಲೇ ತುಂಬಾ ಕ್ರೀಯಾಶೀಲವಾಗಿರೋದರಿಂದ ಆರ್‌ಡಿಪಿ ಇದೇ ಪತ್ರಿಕೆ ಹೊರಗೆ ಎಳೆದು ತರಲು ಸೂಕ್ತ ಸ್ಥಳವೆಂದು ಕಾರ್ಯೋನ್ಮುಖನಾಗಿರುವ ಶಂಕೆಗಳು ಮೂಡಿದ್ದು ಸದ್ಯ ಈ ದಿಶೆಯಲ್ಲಿ ತನಿಖೆ ನಡೆಯಬೇಕಿದೆ. ಇದೀಗ ಸರಕಾರ ಸದರಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದೆ. ಸಿಐಡಿಯವರು ಈ ಸಂಗತಿಯನ್ನು ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ರಹಸ್ಯ ಭೇದಿಸುವರೆ? ಎಂಬುದನ್ನು ಕಾದು ನೋಡಬೇಕಿದೆ. ಅಫಜಲ್ಪುರ ಮಹಾಂತೇಶ್ವರ ಕಾಲೇಜು ಪರೀಕ್ಷಾ ಕೇಂದ್ರದ ಪ್ರಕರಣದಲ್ಲಿ ಆರ್‌.ಡಿ. ಪಾಟೀಲ್‌ ಪ್ರಮುಖ ಆರೋಪಿಯಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದ್ದಾನೆ. ಹೀಗಾಗಿ ಸಿಐಡಿ ತನಿಖೆ ಈ ಕೇಂದ್ರದಲ್ಲಿನ ಪರೀಕ್ಷಾ ಅಕ್ರಮಗಳನ್ನು ಬಗೆದು ಹಾಕುವ ಸಾಧ್ಯತೆಗಳು ಹೆಚ್ಚಾಗಿವೆ.

Latest Videos
Follow Us:
Download App:
  • android
  • ios