ಕೆಇಎ ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್ ಖರ್ಗೆ
ಸರ್ಕಾರದ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಪ್ರಕರಣ ಕಂಡುಬಂದಿವೆ.ಕೆಲವು ಕಡೆ ಬ್ಲೂಟೂಥ್ ಬಳಕೆಯಾಗಿದೆ. ಕಲಬುರಗಿ ಮಾತ್ರ ಅಲ್ಲದೇ ಯಾದಗಿರಿ, ವಿಜಯಪುರದಲ್ಲಿ, ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರಿನಲ್ಲಿಯೂ ಕೂಡಾ ಘಟನೆ ನಡೆದಿವೆ. ಇದರ ಲೋಪಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ನ.09): ರಾಜ್ಯದ ವಿವಿಧ ನಿಗಮ, ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಲಿಖಿತ ಪರೀಕ್ಷೆಗಳಲ್ಲಿನ ಅಕ್ರಮ ಬರೀ ಕಲಬುರಗಿ, ಯಾದಗಿರಿಗೆ ಸೀಮಿತವಾಗಿರದೆ ರಾಜ್ಯದಾದ್ಯಂತ ವ್ಯಾಪಿಸಿದೆ ಎಂದಿರುವ ಆರ್‌ಡಿಪಿಆರ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಅಮೂಲಾಗ್ರ ಪರಿಶೀಲನೆ ಸಾಗಿದೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಪ್ರಕರಣ ಕಂಡುಬಂದಿವೆ.ಕೆಲವು ಕಡೆ ಬ್ಲೂಟೂಥ್ ಬಳಕೆಯಾಗಿದೆ. ಕಲಬುರಗಿ ಮಾತ್ರ ಅಲ್ಲದೇ ಯಾದಗಿರಿ, ವಿಜಯಪುರದಲ್ಲಿ, ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರಿನಲ್ಲಿಯೂ ಕೂಡಾ ಘಟನೆ ನಡೆದಿವೆ. ಇದರ ಲೋಪಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
KEA ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್ ಖರ್ಗೆ
ಯಾವುದೇ ಪ್ರಕರಣ ಆದರೂ ಅದರ ಗಾಂಭೀರ್ಯತೆ ತಿಳಿದುಕೊಂಡು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಓಎಂಆರ್ ನಮ್ಮ ಜಿಲ್ಲೆಯಲ್ಲಿ ನಡೆದಿಲ್ಲ ಬೇರೆ ಕಡೆ ನಡೆದಿದೆ. ಓಎಂಆರ್ ಹೊರಗಡೆ ಬಂದಿದೆ ಎಂದರೆ ಯಾರಾದರೂ ಮೊಬೈಲ್ ಬಳಸಿರಬಹುದು. ಇದು ರಾಜ್ಯದ ಬೇರೆ ಬೇರೆ ಕಡೆ ನಡೆದಿದೆ. ಹಾಗಾಗಿ ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದೆ ಅದರ ವರದಿ ಆಧರಿಸಿ ಪ್ರಕರಣವನ್ನು ಸಿಓಡಿಗೆ ಅಥವಾ ಸಿಬಿಐ ಗೆ ಕೊಡುವ ಕುರಿತು ಗೃಹ ಸಚಿವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಆ ಬಗ್ಗೆ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದರು.
ಆರ್‌ಡಿ ಪಾಟೀಲ್ ಬಂಧನಕ್ಕೆ ಕ್ರಮ:
ಕೆಇಎ ಪರೀಕ್ಷೆ ಹಗರಣದ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಬಂಧನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಮೊಬೈಲ್ ಸಿಕ್ಕಿದೆ ಅದನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳಿಸಲಾಗಿದೆ ತನಿಖೆ ನಡೆಯುತ್ತಿದೆ, ವರದಿ ಬರಲಿ. ಈ ಹಂತದಲ್ಲಿ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕೆಲವೊಮ್ಮೆ ಮಾಹಿತಿ ಸಿಗಲ್ಲ. ಕೆಲವೊಮ್ಮೆ ಮಾಹಿತಿ ಕೊಟ್ಟರೂ ಕೂಡ ಕಾರಣಾಂತರಗಳಿಂದ ಕ್ರಮ ಕೈಗೊಳ್ಳಲಾಗಿರುವುದಿಲ್ಲ. ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ. ಆದರೆ, ನಮ್ಮವರು ಶಾಮೀಲಾಗಿರುವುದು ಕಂಡುಬಂದರೇ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಈಗ ತನಿಖೆ ನಡೆಯುತ್ತಿದೆ. ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವುದಿಲ್ಲ ಎಂದರು.
ಬಿಜೆಪಿ ಮುಖಂಡರಿಗೆ ತಿರುಗೇಟು:
ಆರ್.ಡಿ. ಪಾಟೀಲ್‍ಗೆ ಪ್ರಿಯಾಂಕ್ ಖರ್ಗೆ ಅವರ ಶ್ರೀರಕ್ಷೆ ಇದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಟಾಂಗ್ ನೀಡಿದ ಅವರು, ಈ ಹಿಂದೆ ಪಿಎಸ್‍ಐ ಪರೀಕ್ಷೆ ನಡೆದಾಗ ಯಾವ ಸಂಸದರು ಶಾಲೆಯೊಂದರಲ್ಲೇ ಪರೀಕ್ಷೆ ನಡೆಯಬೇಕು ಎಂದು ಪತ್ರ ಬರೆದಿದ್ದರು. ಯಾವ ಶಾಸಕರು ಶಾಸಕರ ಭವನದಲ್ಲೇ ಡೀಲ್ ಮಾಡಿದ್ದರು. ಅಂದಿನ ಗೃಹ ಸಚಿವರು ಆರೋಪಿತರ ಮನೆಗೆ ಹೋಗಿ ಗೋಡಂಬಿ, ಚಹಾ ಸೇವನೆ ಮಾಡಿದ್ದರು. ಮಾಜಿ ಸಚಿವರೊಬ್ಬರು ಆರೋಪಿಗಳ ಬಂಧನವಾದಾಗ ಬಿಡುಗಡೆ ಮಾಡಲು ಕೋರಿದ್ದರು. ಈಗ ನಮ್ಮ ಬಗ್ಗೆ ನನ್ನ ಶಾಸಕರ ಬಗ್ಗೆ ಅನುಮಾನಗಳಿದ್ದರೆ ಬಿಜೆಪಿ ದಾಖಲೆ ನೀಡಲಿ. ನನಗೆ ಆರ್.ಡಿ. ಪಾಟೀಲ್ ಆತ್ಮೀಯನಿದ್ದರೆ ಬಿಜೆಪಿಯವರು ಯಾಕೆ ಅವರನ್ನು ಬಂಧಿಸಲಿಲ್ಲ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ ಜೊತೆಗೆ ಆಳವಾಗಿ ಅಧ್ಯಯನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಯುವಕರ ಭವಿಷ್ಯದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ. ಈ ಹಿಂದೆ ಅಂತಿಮ ಪಟ್ಟಿ ಪ್ರಕಟಣೆ ಆದ 7 ತಿಂಗಳ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿತ್ತು. ಆದರೆ, ಈಗ ಇಲ್ಲಿ ಹಾಗಾಗಿಲ್ಲ. ಯುವಕರ ಭವಿಷ್ಯಕ್ಕಾಗಿ ಪ್ರಿವೆನ್‍ಶ್ಯನ್ ಆಫ್ ಕರಪಕ್ಷನ್ ಇನ್ ಗೌರ್ಮೆಂಟ್ ರಿಕ್ರೂಟ್‍ಮೆಂಟ್ ಬಿಲ್ ತಯಾರಿಸುತ್ತಿದ್ದೇವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಬಿಲ್ ಮೂವ್ ಮಾಡಿದ್ದೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಲಾಗಿದೆ. ಅದು ಈಗಾಗಲೇ ಕಾನೂನು ಸಚಿವರ ಒಪ್ಪಿಗೆ ನಂತರ ಡಿಪಿಆರ್‍ಗೆ ಕಳಿಸಿದ್ದಾರೆ. ಸಿಎಂ ಅವರು ಡಿಪಿಆರ್ ತರಿಸಿಕೊಂಡು ಮಂಜೂರು ಮಾಡಿದರೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
KEA ಪರೀಕ್ಷಾ ಅಕ್ರಮ: ಪೊಲೀಸ್ ಪಾಲಿಗೆ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಬಿಸಿತುಪ್ಪ!
ಪರೀಕ್ಷೆಯ ಹೊತ್ತಲ್ಲಿ ಮುಂಜಾಗ್ರತೆ ಕೈಗೊಂಡಿದ್ದೇವೆ:
ಪರೀಕ್ಷೆಗಳಲ್ಲಿ ನಡೆದ ಅಕ್ರಮದಿಂದ ಸರ್ಕಾರಕ್ಕೆ ಮುಜುಗರ ಎದುರಾದರೂ ಕೂಡಾ ಪರೀಕ್ಷೆಗೆ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷೆ ಕೇಂದ್ರದ ಬಳಿಯ ಲಾಡ್ಜ್‍ಗಳ ತಪಾಸಣೆ ನಡೆಸಲಾಗಿದೆ. 200 ಅಡಿ ಒಳಗೆ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ನೀಡಿಲ್ಲ. ಡಿಟೆಕ್ಟರ್ ಕೂಡಾ ಅಳವಡಿಸಲಾಗಿತ್ತು. ಈ ಹಿಂದೆ ಈ ರೀತಿ ಕ್ರಮ ಕೈಗೊಳ್ಳಲಾಗಿತ್ತಾ ? ಎಂದು ಪ್ರಶ್ನಿಸಿದ ಖರ್ಗೆ, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ 50% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜಿರಾಗಿದ್ದರು ಎಂದರು.
ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಮಫ್ತಿಯಲ್ಲಿ ಪರಿಶೀಲನೆಗೆ ಹೋಗಿದ್ದರು. ಆಗ ಆರ್.ಡಿ.ಪಾಟೀಲ್ ಹಿಂದಿನಿಂದ ಹೋಗಿದ್ದಾನೆ ಎಂದರು. ಪೊಲೀಸರ ಮಧ್ಯೆ ಕ್ರೆಡಿಟ್ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನುವುದನ್ನು ತಳ್ಳಿ ಹಾಕಿದ ಸಚಿವರು ಅಧಿಕಾರಿಗಳು ಇನ್ನೂ ಬಿಜೆಪಿಯ ಅಮಲಿನಲ್ಲಿ ಇದ್ದಾರೆ. ನಮಗೆ ಗ್ಯಾರಂಟಿ ಜಾರಿಗೆ ತರುವುದರಲ್ಲಿ ಸ್ವಲ್ಪ ಆ ಕಡೆ ಬಿಜಿ ಆಗಿದ್ದೆವು. ಅವರಿಗೆ ಟೈಟ್ ಮಾಡಲು ಕಾಲಾವಕಾಶ ಬೇಕು. ನಾವು ಅಧಿಕಾರಕ್ಕೆ ಬಂದ ಮೇಲೆ ಸುಧಾರಣೆ ಕಂಡಿದೆ ಎಂದು ಒತ್ತಿ ಹೇಳಿದರು.