Asianet Suvarna News Asianet Suvarna News

Bengaluru News: ಇಂದಿನಿಂದ ಎಂದಿನಂತೆ ಕಾವೇರಿ ನೀರು ಲಭ್ಯ

  • ಇಂದಿನಿಂದ ಎಂದಿನಂತೆ ಕಾವೇರಿ ನೀರು ಲಭ್ಯ
  • ಕೊನೆಯ ಹಂತದಲ್ಲಿರುವ ದುರಸ್ತಿ ಕಾರ್ಯ
  • ಮಂಗಳವಾರ ರಾತ್ರಿ 220 ದಶಲಕ್ಷ ಲೀ. ಪೂರೈಕೆ ಆರಂಭ
  • 200 ಟ್ಯಾಂಕರ್‌ ಮೂಲಕ ತುರ್ತು ಅವಶ್ಯಕತೆಗಳಿಗೆ ನೀರು
Kaveri Water is available as usual from today Bangaluru rav
Author
First Published Sep 7, 2022, 6:36 AM IST

ಬೆಂಗಳೂರು (ಸೆ.7) : ಮಳೆನೀರು ನುಗ್ಗಿ ಹಾನಿಗೊಳಗಾಗಿದ್ದ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ)ಯಲ್ಲಿರುವ ಬೆಂಗಳೂರು ಜಲಮಂಡಳಿ ನೀರು ಸಂಸ್ಕರಣಾ ಘಟಕದ ಯಂತ್ರಗಾರಗಳ ದುರಸ್ತಿ ಕಾರ್ಯಭರದಿಂದ ಸಾಗಿದ್ದು, ಬುಧವಾರದಿಂದ ಎಂದಿನಂತೆ ನಗರಕ್ಕೆ ನೀರು ಪೂರೈಕೆಯಾಗಲಿದೆ. ಮಂಗಳವಾರ ರಾತ್ರಿ ವೇಳೆಗೆ ಕಾವೇರಿ ಮೂರನೇ ಹಂತದ 220 ದಶಲಕ್ಷ ಲೀ. ನೀರು ಸರಬರಾಜು ಆರಂಭವಾಗಿದ್ದು, ಬುಧವಾರ ಮುಂಜಾನೆಯಷ್ಟರಲ್ಲಿ ಕಾವೇರಿ ನಾಲ್ಕನೇ ಹಂತದ ಯಂತ್ರಗಾರ ದುರಸ್ತಿ ಪೂರ್ಣಗೊಳ್ಳಲಿದೆ. ಪೂರ್ತಿಪ್ರಮಾಣದ ಕಾವೇರಿ ನೀರಿನ ಸರಬರಾಜು ಆರಂಭವಾಗಲಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಂಸ್ಕರಣಾ ಘಟಕದಲ್ಲಿಯೇ ಇದ್ದು ದುರಸ್ತಿ ಕಾರ್ಯದ ಉಸ್ತುವರಿ ವಹಿಸಿಕೊಂಡಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್‌.ಜಯರಾಂ ಸ್ಪಷ್ಟಪಡಿಸಿದ್ದಾರೆ.\

ಟಿ.ಕೆ.ಹಳ್ಳಿ ಜಲರೇಚಕ ಯಂತ್ರಾಗಾರ ಜಲಾವೃತ; ಬೆಂಗಳೂರು ಕುಡಿಯುವ ನೀರು ಪೂರೈಕೆ ಸ್ಥಗಿತ

ಭಾನುವಾರ ರಾತ್ರಿ ಮಂಡ್ಯದಲ್ಲಿ ಸುರಿದ ಭಾರೀ ಮಳೆಗೆ ತೊರೆಕಾಡನಹಳ್ಳಿಯ ಜಲಮಂಡಳಿ ಸಂಸ್ಕರಣಾ ಘಟಕಕ್ಕೆ ನೀರು ನುಗ್ಗಿ ಯಂತ್ರಗಾರಗಳೆಲ್ಲಾ ಸ್ಥಗಿತಗೊಂಡಿದ್ದವು. ಹೀಗಾಗಿ, ನಗರಕ್ಕೆ 880 ದಶಲಕ್ಷ ಲೀ. ನೀರು ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಸೋಮವಾರ ಮತ್ತು ಮಂಗಳವಾರ ನಗರದ ಬಹುತೇಕ ಮನೆಗಳಿಗೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಘಟನೆ ಹಿನ್ನೆಲೆ ಸ್ಥಳದಲ್ಲಿಯೇ ಜಲಮಂಡಳಿ ಅಧ್ಯಕ್ಷರು ಸೇರಿದಂತೆ ಮುಖ್ಯ ಎಂಜಿನಿಯರ್‌ಗಳು ಬೀಡುಬಿಟ್ಟಿದ್ದರು.

ಸಂಜೆ ವೇಳೆಗೆ 220 ದಶಲಕ್ಷ ಲೀ. ಸರಬರಾಜು ಆರಂಭ

ದುರಸ್ತಿ ಕಾಮಗಾರಿ ಕುರಿತು ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷ ಎನ್‌.ಜಯರಾಮ್‌, ‘ಕಾವೇರಿ ಮೂರನೇ ಹಂತ ಮತ್ತು ನಾಲ್ಕನೇ ಹಂತದ ನೀರು ಸರಬರಾಜು ಮಾಡುವ ಯಂತ್ರಗಾರದಲ್ಲಿ ಸುಮಾರು 20 ಅಡಿಗಳಷ್ಟುನೀರು ತುಂಬಿ ಯಂತ್ರಗಾರವು ಮುಳುಗಡೆಯಾಗಿತ್ತು. ಈಗಾಗಲೇ ಯಂತ್ರಗಾರದಲ್ಲಿ ತುಂಬಿದ್ದ ಸಂಪೂರ್ಣ ನೀರನ್ನು ಹೊರ ತೆಗೆಯಲಾಗಿದ್ದು, ತೇವಾಂಶವನ್ನು ತೆಗೆದು ಪಂಪ್‌ಗಳನ್ನು ಯಥಾಸ್ಥಿತಿಗೆ ತರಲಾಗಿದೆ. 880 ದಶಲಕ್ಷ ಲೀ. ಪೈಕಿ ಮಂಗಳವಾರ ರಾತ್ರಿ 9ಕ್ಕೆ ನಗರಕ್ಕೆ 220 ದಶಲಕ್ಷ ಲೀ. ನೀರು ಪೂರೈಕೆಯಾಗುತ್ತಿದೆ. ರಾತ್ರಿ ಪೂರ್ತಿ ಅಂತಿಮ ಹಂತದ ದುರಸ್ತಿ ಕಾರ್ಯ ನಡೆಯಲಿದ್ದು, ಬಾಕಿ ನೀರನ್ನು ಬುಧವಾರ ಮುಂಜಾನೆಯೊಳಗಾಗಿ ಪೂರೈಸಲಾಗುತ್ತದೆ’ ಎಂದು ತಿಳಿಸಿದರು.

ನೀರಿಗಾಗಿ ಪರದಾಟ:

ದಿಢೀರ್‌ ಸ್ಥಗಿತದಿಂದ ಜಲಮಂಡಳಿಯ ನೀರನ್ನೇ ನೆಚ್ಚಿಕೊಂಡಿದ್ದ ರಾಜಧಾನಿ ಜನರು ಸಂಕಷ್ಟಕ್ಕೀಡಾಗಿದ್ದರು. ಸದ್ಯ ಬೆಂಗಳೂರು ಜಲಮಂಡಳಿ ಎರಡು ದಿನಕ್ಕೊಮ್ಮೆ ಮನೆಗಳಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದೆ. ಕಾವೇರಿ ನೀರನ್ನು ಮಾತ್ರವೇ ಅವಲಂಭಿಸಿರುವ ಮನೆಗಳ, ಅಪಾರ್ಚ್‌ಮೆಂಟ್‌ಗಳ ಜನರು ನೀರಿಗಾಗಿ ಪರದಾಡಿದರು.

200 ಟ್ಯಾಂಕರಲ್ಲಿ ನೀರು ಪೂರೈಕೆ

ಜಲಮಂಡಳಿಯ 64 ಟ್ಯಾಂಕರ್‌ ಮತ್ತು 136 ಖಾಸಗಿ ಟ್ಯಾಂಕರ್‌ಗಳು ಸೇರಿ ಒಟ್ಟು 200 ಟ್ಯಾಂಕರ್‌ಗಳ ಮೂಲಕ ನೀರಿನ ವ್ಯತ್ಯಯ ಉಂಟಾಗಿರುವ ಪ್ರದೇಶಗಳಿಗೆ ಮಂಗಳವಾರ ನೀರು ಸರಬರಾಜು ಮಾಡಲಾಯಿತು. ಆದ್ಯತೆಯ ಮೇರೆಗೆ ಬಡವರು, ಕೊಳಗೇರಿ ನಿವಾಸಿಗಳು, ಮಧ್ಯಮ ವರ್ಗದವರು, ಕಾರ್ಮಿಕ ವರ್ಗ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತವಾಗಿ ನೀರನ್ನು ಟ್ಯಾಂಕರ್‌ಗಳ ಕಳುಹಿಸಲಾಗಿದೆ. ಹೈಕೋರ್ಚ್‌ ಸೇರಿದಂತೆ ಸರ್ಕಾರಿ ಕಚೇರಿಗಳು ಕೂಡಾ ತುರ್ತು ಟ್ಯಾಂಕರ್‌ ನೀರಿನ ಸೇವೆ ಪಡೆದುಕೊಂಡಿವೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  Kaveri Water: ಹಳ್ಳಿಗಳಿಗೆ ಕಾವೇರಿ ನೀರೇ ಬೇಡವಂತೆ..!

Follow Us:
Download App:
  • android
  • ios