Asianet Suvarna News Asianet Suvarna News

Kaveri Water: ಹಳ್ಳಿಗಳಿಗೆ ಕಾವೇರಿ ನೀರೇ ಬೇಡವಂತೆ..!

*  ಜಲಸಂಪರ್ಕಕ್ಕೆ 110 ಹಳ್ಳಿಗಳ ಹಿಂದೇಟು
*   ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಹಳ್ಳಿಗಳು
*  ಸದ್ಯ ಕೆಲವು ಪ್ರದೇಶಗಳಲ್ಲಿ ಮಾತ್ರ ವಾರಕ್ಕೆ ಒಂದು ಬಾರಿ ನೀರು 
 

110 Villagers Do Not Need Kaveri Water grg
Author
Bengaluru, First Published Apr 30, 2022, 5:25 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಏ.30):  ಬಿಬಿಎಂಪಿ(BBMP) ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಯ ಜನರಿಗೆ ನೀರು ಪೂರೈಕೆಗೆ ಬೆಂಗಳೂರು ಜಲಮಂಡಳಿ(Bengaluru Water Board) ಸಕಲ ರೀತಿಯಲ್ಲಿ ಸಜ್ಜಾಗಿದ್ದರೂ ಜನರು ಮಾತ್ರ ಕಾವೇರಿ ನೀರಿನ(Kaveri Water) ಕೊಳವೆ ಸಂಪರ್ಕ ಪಡೆಯಲು ಇನ್ನೂ ಮುಂದಾಗುತ್ತಿಲ್ಲ.

ಬಹುತೇಕ 110 ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ಕೊಳವೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ಒಂದು ವರ್ಷದಿಂದ ಮನೆ ಮನೆಗೆ ಕಾವೇರಿ ನೀರಿನ ಸಂಪರ್ಕ ನೀಡಲಾಗುತ್ತಿದೆ. ಈ ಭಾಗದಲ್ಲಿ ಒಟ್ಟು 3.5 ಲಕ್ಷ ಮನೆಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಕೇವಲ 20 ಸಾವಿರ ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ.

ಮುಂದಿನ ವರ್ಷಾಂತ್ಯಕ್ಕೆ 110 ಹಳ್ಳಿಗಳಿಗೆ ಕುಡಿವ ನೀರು: ಸಿಎಂ ಬೊಮ್ಮಾಯಿ

ಸದ್ಯ 110 ಹಳ್ಳಿಗಳಿಗೆ ಕಾವೇರಿ ಐದನೇ ಹಂತದಲ್ಲಿ ನೀರು ಪೂರೈಕೆ ಮಾಡುವ ಯೋಜನೆಯನ್ನು ಜಲಮಂಡಳಿ ಹಾಕಿಕೊಂಡಿದೆ. ಪ್ರಸ್ತುತವಾಗಿ ಜಲಮಂಡಳಿ ನೀರು ಪೂರೈಕೆ ಮಾಡುತ್ತಿರುವ ಪ್ರದೇಶಕ್ಕೆ ಸಮೀಪ ಇರುವ 51 ಗ್ರಾಮಗಳಿಗೆ(Villages) ವಾರಕ್ಕೆ ಒಂದು ದಿನ ಮಾತ್ರ ಕಾವೇರಿ ನೀರು ಪೂರೈಕೆ ಮಾಡಲಾಗುತ್ತದೆ. ಉಳಿದ 59 ಗ್ರಾಮಗಳಿಗೆ ಕಾವೇರಿ ಐದನೇ ಹಂತದ ನೀರು ಲಭ್ಯವಾದ ಬಳಿಕ ಸರಬರಾಜಿಗೆ ನಿರ್ಧರಿಸಲಾಗಿದೆ. ಅದಕ್ಕೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಜನರು ಜಲಮಂಡಳಿಯ ನೀರಿನ ಸಂಪರ್ಕ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಸಂಪರ್ಕ ಹಿನ್ನಡೆಯಾದರೆ ಆರ್ಥಿಕ ಸಂಕಷ್ಟ

ವಿದ್ಯುತ್‌ ದರ ಏರಿಕೆಯಿಂದ ಈಗಾಗಲೇ ಜಲಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ದರ ಏರಿಕೆ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಆದರೆ, ಅಂತಿಮ ತೀರ್ಮಾಣವಾಗಿಲ್ಲ. ಪ್ರಸ್ತುತವಾಗಿ ನಗರದಲ್ಲಿ ಒಟ್ಟು 10.5 ಲಕ್ಷ ಸಂಪರ್ಕವಿದ್ದು, ಮಾಸಿಕವಾಗಿ ಜಲಮಂಡಳಿ ಸುಮಾರು 110 ಕೋಟಿ ರು. ಶುಲ್ಕ ಸಂಗ್ರಹಿಸುತ್ತಿದೆ. ಈ ಪೈಕಿ ಸುಮಾರು 75 ಕೋಟಿ ರು.ಗಳನ್ನು ವಿದ್ಯುತ್‌ ಬಿಲ್‌ ಪಾವತಿಗೆ ಖರ್ಚು ಮಾಡುತ್ತಿದೆ. ಉಳಿದ ಮೊತ್ತದಲ್ಲಿ ಸಿಬ್ಬಂದಿ ವೇತನ ಹಾಗೂ ಇತರೆ ನಿರ್ವಹಣೆ ಕಾಮಗಾರಿ ನಡೆಸಬೇಕಿದೆ.

Kaveri Water: ಬೆಂಗ್ಳೂರಿಗರ ಗಮನಕ್ಕೆ: ನಾಡಿದ್ದು ಈ ಏರಿಯಾಗಳಲ್ಲಿ ನೀರು ಬರಲ್ಲ

ಇನ್ನು ಕಾವೇರಿ ಐದನೇ ಹಂತದಲ್ಲಿ ನಗರಕ್ಕೆ 775 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಈ ನೀರನ್ನು ಕೆಆರ್‌ಎಸ್‌ನಿಂದ)KRS Dam) ಬೆಂಗಳೂರಿನ(Bengaluru) ಮನೆ ಮನೆಗೆ ಪಂಪ್‌ ಮಾಡುವುದಕ್ಕೆ ಸುಮಾರು 25 ಕೋಟಿ ರು. ಬೇಕಾಗಲಿದೆ. ಸಂಪರ್ಕ ನೀಡುವುದು ವಿಳಂಬವಾದರೆ ಜಲಮಂಡಳಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವುದು ನಿಶ್ಚಿತ.

ಸದ್ಯ ಕೆಲವು ಪ್ರದೇಶಗಳಲ್ಲಿ ಮಾತ್ರ ವಾರಕ್ಕೆ ಒಂದು ಬಾರಿ ನೀರು ಬಿಡಲಾಗುತ್ತಿದೆ. 5ನೇ ಹಂತದ ನೀರು ಲಭ್ಯವಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಲಾಗುವುದು. ಹಾಗಾಗಿ, ಹೆಚ್ಚಿನ ಸಂಖ್ಯೆಯ ಜನರು ಜಲಮಂಡಳಿಯ ಸಂಪರ್ಕ ಪಡೆದಿಲ್ಲ. ನಿಗದಿತ ನೀರು ಪೂರೈಕೆ ಆರಂಭಗೊಂಡರೆ ಹೆಚ್ಚಿನ ಸಂಖ್ಯೆಯ ಜನರು ಸಂಪರ್ಕ ಪಡೆಯುವ ನಿರೀಕ್ಷೆ ಇದೆ ಅಂತ ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್‌ ಕೆ.ಎನ್‌.ರಾಜೀವ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios