ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿ ಕಲುಷಿತ ನೀರಿನ ದುರಂತಕ್ಕೆ 6 ಜನರು ಬಲಿಯಾಗಿ ಒಂದು ವಾರ ಕಳೆದಿದೆ. ಆದರೂ, ಜನರು ಮಾತ್ರ ಮನೆಗೆ ಬಾರದೇ ಬೀಗ ಹಾಕಿಕೊಂಡು ನೆಂಟರ ಮನೆಗೆ ಹೋಗಿದ್ದಾರೆ. 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.08): ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿಯಲ್ಲಿ ನಡೆದ ಕಲುಷಿತ ನೀರಿನ ಸೇವನೆಯಿಂದಾದ ದುರಂತಕ್ಕೆ 'ಕಾಲರಾ' ರೀಗವೇ ಕಾರಣವೆಂದು ಜಿಲ್ಲಾ ಸರ್ವೇಕ್ಷಣಾ ಇಲಾಖೆಯು ನಾಲ್ಕು ದಿನಗಳ ಹಿಂದೆಯೇ ವರದಿ ಬಂದಿದೆ. ಆದರೆ, ಇನ್ನೂ 100ಕ್ಕೂ ಅಧಿಕ ಜನರಿಗೆ ವಾಂತಿ ಭೇದಿ ಮಾತ್ರ ನಿಂತಿಲ್ಲ. ಹೀಗಾಗಿ, ಕಾವಾಡಿಗರಹಟ್ಟಿಯಲ್ಲಿ ತಾವು ನಿರ್ಮಿಸಿದ ಸ್ವಂತ ಮನೆಯಲ್ಲಿರದೇ ಮನೆಗೆ ಬೀಗ ಹಾಕಿಕೊಂಡು ನೆಂಟರಿಷ್ಟರ ಮನೆಗೆ ಹೋಗಿ ಜನರು ನೆಲೆಸುತ್ತಿದ್ದು, ಈಗಲೂ ಗ್ರಾಮದೊಳಗೆ ಬರಲು ಜನರು ಭಯ ಪಡುತ್ತಿದ್ದಾರೆ. 

ಪ್ರತಿ‌ ಮನೆಯ ಬಾಗಿಲುಗಳಿಗೂ ಬೀಗ ಹಾಕಿರುವುದು ಒಂದೆಡೆಯಾದ್ರೆ, ಗುಣಮುಖರಾಗಿ ಬಂದರೂ ನಿಲ್ಲದ ಭಯ ಭೀತಿಯಲ್ಲಿಯೇ ಜೀವನ ಸಾಗ್ತಿರೋ ಜನರು ಈ ದೃಶ್ಯಗಳು ಚಿತ್ರದುರ್ಗದ ಕಾವಡಿಗರಹಟ್ಟಿಯಲ್ಲಿ, ಕಳೆದ ಎರಡು‌ ದಿನಗಳಿಂದ ಏರಿಯಾದಲ್ಲಿ ಜನರು ಸಮಾನ್ಯವಾಗಿದ್ದಾರೆ. ಆದರೂ ಕಲುಷಿತ ನೀರು‌ ಸೇವಿಸಿದ ದುರಂತ ನಡೆದು ಒಂದು ವಾರ ಕಳೆದರೂ ನಿವಾಸಿಗಳಲ್ಲಿ ವಾಂತಿಭೇದಿ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. 6 ಜನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, 8 ತಿಂಗಳ ಗರ್ಭಿಣಿಗೆ ಗರ್ಭಪಾತವಾಗಿದೆ. 

ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

ಅಸ್ವಸ್ಥರಲ್ಲಿ 124 ಜನರಷ್ಟೇ ಆಸ್ಪತ್ರೆಯಿಂದ ಬಿಡುಗಡೆ: ಇದುವರೆಗೂ ಒಟ್ಟು 214 ಜನ ಅಸ್ವಸ್ಥರಾಗಿದ್ದು, ಅದ್ರಲ್ಲಿ 124 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸದ್ಯ ಸರ್ಕಾರಿ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 83 ಅಸ್ವಸ್ಥರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸರ್ವೇಕ್ಷಣ ಇಲಾಖೆಯಿಂದ ಕಾಲರ ಅಂತ ವರದಿ ಬಂದು ಮೂರು ದಿನ ಕಳೆದರು ಕೂಡ ಅಸ್ವಸ್ಥತೆ ಮಾತ್ರ ಕಡಿಮೆಯಾಗದೇ ಇರುವುದು ದುರಂತ. ಹೀಗಾಗಿ ಹೆರಿಗೆಗೆಂದು ಕಾವಾಡಿಗರಹಟ್ಟಿಯಲ್ಲಿನ ತವರಿಗೆ ಬಂದಿದ್ದ ಗರ್ಭಿಣಿಯರು ಜೀವ ಉಳಿದರೆ ಸಾಕೆಂದು ಭಾವಿಸಿ, ವಾಪಾಸ್ ಗಂಡನ‌ಮನೆಗೆ ತೆರಳಿದ್ದಾರೆ. ಅಲ್ಲದೇ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಮಕ್ಕಳು ಗುಣಮುಖರಾದರು ಸಹ ಅವರನ್ನು ಮನೆಗೆ ಕರೆತರದೇ‌, ನೇರವಾಗಿ ನೆಂಟರಿಷ್ಟರ ಮನೆಗೆ ಕಳುಹಿಸ್ತಿದ್ದೂ, ಭಯಭೀತರಾಗಿರೊ ನಿವಾಸಿಗಳು ಮನೆಗಳಿಗೆ ಬೀಗ ಹಾಕ್ಕೊಂದು ಕಾವಾಡಿಗರಹಟ್ಟಿಯನ್ನೇ ತ್ಯಜಿಸಿ ಸಂಬಂಧಿಗಳ ಊರುಗಳಿಗೆ ತೆರಳಿದ್ದಾರೆ.

ಸ್ವಂತ ಮನೆಗೆ ಮರಳಿ ಬರಲು ಹೆದರುತ್ತಿರುವ ಗ್ರಾಮಸ್ಥರು: ಇನ್ನು ಈ ಪ್ರಕರಣದಿಂದಾಗಿ ಇಡೀ ಗ್ರಾಮ ಖಾಲಿ ಖಾಲಿಯಾಗಿದೆ. ಸ್ಮಶಾನ ಮೌನ ಆವರಿಸಿದೆ. ಕೇವಲ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪ್ರಕರಣಕ್ಕೆ ಕಾರಣವನ್ನು ಪತ್ತೆ ಹಚ್ಚಲು ಹರಸಾಹಸ ಪಡ್ತಿದ್ದಾರೆ. ಇತ್ತ ಗ್ರಾಮದಲ್ಲಿ ನಾವೆಲ್ಲರೂ ಜೀವನ‌ ಸಾಗಿಸುವುದಕ್ಕೆ ಆತಂಕ ಪಡುವಂತಾಗಿದೆ.‌ ನಮ್ಮ ಸಂಬಂಧಿಕರು ಕರೆ ಮಾಡಿ ಆ ಗ್ರಾಮ ಬಿಟ್ಟು ಬನ್ನಿ ಅಂತ ಕರೆಯುತ್ತಿದ್ದಾರೆ. ಆದ್ರೆ ನಾವು ಬೆಳೆದ ಊರು ಸಮಸ್ಯೆ ಬಂತೆಂದು ಗ್ರಾಮ ತೊರೆದು ಹೋದ್ರೆ, ಮುಂದೆ ಇಲ್ಲಿಯೇ ಬರಬೇಕು. ಯಾರಿಗೆ ಏನೆ ಆದ್ರು ನಾವು ಇಲ್ಲಿಯೇ ಇರ್ತಿವಿ‌, ಎಲ್ಲರಿಗೆ ಆಗಿದ್ದೇ ನಮಗೂ ಆಗಲಿ ಎಂದು ಬಂಡ ಧೈರ್ಯದಿಂದ ಹೇಳ್ತಿದ್ದೀವಿ. ಆದರೂ ಆರೋಗ್ಯ ಇಲಾಖೆ ಇನ್ನಷ್ಟು ಕ್ರಮ ವಹಿಸಿ ಎಲ್ಲರ ಆರೋಗ್ಯ ಚೇತರಿಕೆಗೆ ಕ್ರಮವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Chitradurga: ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಒಟ್ಟಾರೆ ಕಾವಾಡಿಗರಹಟ್ಟಿಯ ಜನರಿಗೆ ಜಿಲ್ಲಾಡಳಿತದಿಂದ ಆಹಾರ,ನೀರು ಹಾಗೂ ಚಿಕಿತ್ಸೆ ಎಲ್ಲಾ ಸಿಗ್ತಿದೆ. ಆದ್ರೆ ಮಾನಸೀಕವಾಗಿ ನೆಮ್ಮದಿ ಇಲ್ಲವಾಗಿದೆ, ದಿನ ಬೆಳಗಾದ್ರೆ ಆಸ್ಪತ್ರೆ ಪ್ರಯಾಣ ಸಹಜವಾಗಿದೆ. ಅಂಬ್ಯುಲೆನ್ಸ್ ಸದ್ದು ನಿರಂತರವಾಗಿದೆ. ಹೀಗಾಗಿ ಪ್ರಾಣ ಭಯದಲ್ಲಿರುವ ಜನರು ಮನೆಗಳಿಗೆ ಬೀಗ ಜಡಿದು ಊರನ್ನೇ ತ್ಯಜಿಸುವಂತಾಗಿದೆ.