ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಕೆಎಎಸ್ ಮರುಪರೀಕ್ಷೆ: ಸಿಎಂ ಸಿದ್ದರಾಮಯ್ಯ ಆದೇಶ
ಕನ್ನಡ ಭಾಷಾಂತರದಲ್ಲಿ ಅನೇಕ ಲೋಪದೋಷಗಳು ಕಂಡುಬಂದಿರುವ ವಿಚಾರ ನನ್ನ ಗಮನಕ್ಕೆ ಬರುತ್ತಿದ್ದಂತೆ, ಎಲ್ಲಾ ಪರೀಕ್ಷಾರ್ಥಿಗಳಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಎರಡು ತಿಂಗಳೊಳಗೆ ಮರುಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ.
ಬೆಂಗಳೂರು (ಸೆ.03): 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಆ.27ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಅನೇಕ ತಪ್ಪುಗಳು, ಭಾಷಾಂತರ ಲೋಪ ಪತ್ತೆಯಾದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು, ಸಾಹಿತ್ಯಿಕ ವಲಯ ಮತ್ತು ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಮರುಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ಕ್ಕೆ ನಿರ್ದೇಶನ ನೀಡಿದೆ.
‘ಕನ್ನಡ ಭಾಷಾಂತರದಲ್ಲಿ ಅನೇಕ ಲೋಪದೋಷಗಳು ಕಂಡುಬಂದಿರುವ ವಿಚಾರ ನನ್ನ ಗಮನಕ್ಕೆ ಬರುತ್ತಿದ್ದಂತೆ, ಎಲ್ಲಾ ಪರೀಕ್ಷಾರ್ಥಿಗಳಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಎರಡು ತಿಂಗಳೊಳಗೆ ಮರುಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ. ಈ ವಿಚಾರದಲ್ಲಿ ಲೋಪ ಎಸಗಿದವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೇಮಕ ಪ್ರಕ್ರಿಯೆಯನ್ನು ನ್ಯಾಯಬದ್ಧವಾಗಿ ನಡೆಸಲು ಬದ್ಧರಾಗಿರುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚನ್ನಪಟ್ಟಣ ಟಿಕೆಟ್ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಯೋಗೇಶ್ವರ್
ಮರುಪರೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಭ್ಯರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುಪರೀಕ್ಷೆಯ ಘೋಷಣೆ ಮಾಡಿದರು. ಈ ವಿಚಾರವನ್ನು ವೇದಿಕೆ ಮೇಲೆ ಘೋಷಣೆ ಮಾಡಿದ ಆಯೋಜಕರು, ಇದು ಅಭ್ಯರ್ಥಿಗಳು ಹಾಗೂ ಕನ್ನಡ ಹೋರಾಟಗಾರರ ಗೆಲುವು ಎಂದರು.
‘ತಮ್ಮದಲ್ಲದ ತಪ್ಪಿಗೆ ಅನ್ಯಾಯಕ್ಕೆ ಒಳಗಾಗಿದ್ದ ಅಭ್ಯರ್ಥಿಗಳ ಹಿತ ಕಾಪಾಡುವ ದೃಷ್ಟಿಯಿಂದ ಮರುಪರೀಕ್ಷೆಗೆ ಆದೇಶ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ಹಾಗೆಯೇ, ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳಾಗಲು ಕಾರಣರಾಗಿರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದು ಅಭ್ಯರ್ಥಿಗಳು ಮತ್ತು ಎಲ್ಲಾ ಹೋರಾಟಗಾರರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.
ಆ.27ರಂದು 200 ಅಂಕಗಳ ಎರಡು ಪರೀಕ್ಷೆಗಳು ನಡೆದಿದ್ದವು. ಭಾಷಾಂತರ ಲೋಪದೋಷ, ವಾಸ್ತವಾಂಶ ತಪ್ಪುಗಳು, ಇಸವಿಯಲ್ಲಿ ತಪ್ಪುಗಳು ಕಂಡು ಬಂದಿದ್ದವು. ಎರಡೂ ಪ್ರಶ್ನೆಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ತಪ್ಪುಗಳಾಗಿದ್ದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅಭ್ಯರ್ಥಿಗಳು, ಮರು ಪರೀಕ್ಷೆಗೆ ಆಗ್ರಹಿಸಿದ್ದರು. ಅಭ್ಯರ್ಥಿಗಳ ಮನವಿಯನ್ನು ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಮೂಡ್ನಾಕೂಡು ಚಿನ್ನಸ್ವಾಮಿ, ಪುರುಷೋತ್ತಮ ಬಿಳಿಮಲೆ ಸೇರಿದಂತೆ ಇನ್ನಿತರ ಚಿಂತಕರು, ಸಾಹಿತಿಗಳು ಬೆಂಬಲಿಸಿದ್ದರು. ರಾಜ್ಯದ ಅನೇಕ ಕೋಚಿಂಗ್ ಸೆಂಟರ್‌ಗಳು ಕೂಡ ಅಭ್ಯರ್ಥಿಗಳ ಮರುಪರೀಕ್ಷೆ ಮನವಿಗೆ ಬೆಂಬಲಿಸಿದ್ದವು.
ಸೆ.22ಕ್ಕೆ ಎಸ್‌ಐ ಪರೀಕ್ಷೆ: ಕುರ್ತಾ, ಪೈಜಾಮಾ, ಜೀನ್ಸ್ ನಿಷಿದ್ಧ: 402 ಹುದ್ದೆಗಳಿಗೆ 66000 ಅಭ್ಯರ್ಥಿಗಳು
ಪರೀಕ್ಷಾರ್ಥಿಗಳ ಹಿತದೃಷ್ಟಿ, ಎಲ್ಲರಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಮರುಪರೀಕ್ಷೆಗೆ ಆದೇಶಿಸಲಾಗಿದೆ. ಮುಂದೆ ನಡೆಸಲಾಗುವ ಪರೀಕ್ಷೆ ನ್ಯಾಯಬದ್ಧವಾಗಿರುವಂತೆ ನೋಡಿಕೊಳ್ಳಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ