ಬೆಂಗಳೂರು (ನ.10) : ಅಕ್ರಮ ಆಸ್ತಿ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ. ಬಿ.ಸುಧಾ ಮತ್ತವರ ಕುಟುಂಬ ಸದಸ್ಯರ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ 200ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಪಟ್ಟದಾಖಲೆಗಳು, ಸುಮಾರು 50 ಬ್ಯಾಂಕ್‌ ಖಾತೆಗಳು ಪತ್ತೆಯಾಗಿವೆ.

ಬೆಂಗಳೂರು, ಮೈಸೂರು ಮತ್ತು ಉಡುಪಿ ಜಿಲ್ಲೆಯ ಒಟ್ಟು ಏಳು ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿದಾಗ ಕೋಟ್ಯಂತರ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಸುಧಾ ಮತ್ತು ಅವರ ಕುಟುಂಬ ಸದಸ್ಯರು, ಪರಿಚಯ ಇರುವ ವ್ಯಕ್ತಿಗಳ ಹೆಸರಲ್ಲಿ ಕೋಟ್ಯಂತರ ರು. ಮೌಲ್ಯದ 200ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಪಟ್ಟದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಸ್ತಿಯಗಳ ಕ್ರಯಪತ್ರ, ಜಿಪಿಎ ಪತ್ರಗಳು, ಕೆಲವು ಒಪ್ಪಂದದ ಕಾರರು ಪತ್ರಗಳು ಮತ್ತು ಇತರೆ ದಾಖಲಾತಿಗಳು ಲಭ್ಯವಾಗಿವೆ. ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರದಲ್ಲಿ KAS ಅಧಿಕಾರಿ ಸುಧಾ ಭಾರಿ ಪ್ರಭಾವಿ: ಅಬ್ರಹಾಂ ...

ಆರೋಪಿ ಮತ್ತು ಬೇರೆ ವ್ಯಕ್ತಿಗಳ ಹೆಸರಲ್ಲಿ ವಿವಿಧ ಬ್ಯಾಂಕ್‌ನಲ್ಲಿ ಸುಮಾರು 50 ಬ್ಯಾಂಕ್‌ ಖಾತೆಗಳ ವಿವರ, 50ಕ್ಕೂ ಹೆಚ್ಚು ಚೆಕ್‌ಲೀಫ್‌ಗಳು ಲಭ್ಯವಾಗಿವೆ. ಸುಧಾ ಅವರು ಇತರೆ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿ ಸುಮಾರು 3.5 ಕೋಟಿ ರು. ಠೇವಣಿ ಇರುವುದು ಗೊತ್ತಾಗಿದೆ. ಸುಧಾ ಮತ್ತು ಅವರಿಗೆ ಸಂಬಂಧಪಟ್ಟವ್ಯಕ್ತಿಗಳ ಮನೆಯಲ್ಲಿ 3.7 ಕೆಜಿ ಚಿನ್ನಾಭರಣ, 10.5 ಕೆಜಿ ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ.

ರೇಣುಕಾ ಜತೆ ವಹಿವಾಟು:  ಆಸ್ತಿ ಖರೀದಿಸಲು ಸುಧಾ, ಆಕೆಯ ಆಪ್ತೆ ರೇಣುಕಾ ಮತ್ತು ಇತರರ ನಡುವೆ ಕೋಟ್ಯಂತರ ರು. ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಸುಧಾ ಬೆಂಗಳೂರಿನಲ್ಲಿಯೇ ಹೆಚ್ಚು ಪ್ರಮಾಣ ಆಸ್ತಿ ಹೊಂದಿದ್ದಾರೆ ಎಂದು ಎಸಿಬಿಯ ಮೂಲಗಳಿಂದ ತಿಳಿದು ಬಂದಿದೆ.