ದೋಣಿ ದುರಂತ : ಸ್ವತಃ ನಾಲ್ವರ ರಕ್ಷಿಸಿದ ಕಾರವಾರ ಶಾಸಕಿ ರೂಪಾಲಿ ನಾಯ್ಕ
ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರದಲ್ಲಿ ಕೂರ್ಮಗಡ ಜಾತ್ರೆಗೆ ತೆರಳಿದ್ದ ಬೋಟ್ ಮರಳಿ ಬರುವಾಗ ಕಾಳಿ ಸಂಗಮದಲ್ಲಿ ಮುಳುಗಿ 8 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಾರವಾರ : ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಕೂರ್ಮಗಡ ಜಾತ್ರೆಗೆ ತೆರಳಿದ್ದ ಬೋಟ್ ಮರಳಿ ಬರುವಾಗ ಕಾಳಿ ಸಂಗಮದಲ್ಲಿ ಮುಳುಗಿ 8 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರದಲ್ಲಿ ಸೋಮವಾರ ನಡೆದಿದೆ.
ಇದೇ ವೇಳೆ ಗೋವಾದಿಂದ ಧಾವಿಸಿದ ನೌಕಾಪಡೆ, ಕರಾವಳಿ ಪಡೆ ಡೈವರ್‌ಗಳು ಹಾಗೂ ಹೆಲಿಕಾಪ್ಟರ್‌ಗಳು 18 ಜನರನ್ನು ರಕ್ಷಿಸಿವೆ. ಜಯಶ್ರೀ (ಮೀನಾಕ್ಷಿ) ಕೊಠಾರಕರ್, ಗಣಪತಿ ಕೊಠಾರಕರ್, ಗೀತಾ ತಳೇಕರ್, ಭಾರತಿ ಪರಶುರಾಮ್, ಅನ್ನಕ್ಕ ಇಂಗಳದಳ, ನೀಲೇಶ ಪೆಡ್ನೇಕರ್, ಅರುಣ ಶಿಗ್ಗಾವಿ, ಮಂಜವ್ವ ಶಿಗ್ಗಾವಿ ಮೃತಪಟ್ಟವರು. ಬೋಟಲ್ಲಿ 30 ಜನರಿದ್ದರೆಂದು ಹೇಳಲಾಗಿದೆ.
ಘಟನೆ ನಡೆದಿದ್ದು ಹೇಗೆ?: ಕಾರವಾರದ ಕೋಡಿಬಾಗದಿಂದ ಸಮುದ್ರದಲ್ಲಿ 15 ಕಿಮೀ ದೂರದ ಕೂರ್ಮಗಡ ದ್ವೀಪವಿದೆ. ನರಸಿಂಹ ದೇವರ ಜಾತ್ರೆ ಇಲ್ಲಿ ಪ್ರಸಿದ್ಧವಾಗಿದ್ದು, ವರ್ಷಕ್ಕೆ ಎರಡೇ ದಿನ ದೇಗುಲ ತೆರೆಯುತ್ತದೆ. ಈ ದೇವರ ಜಾತ್ರೆಗೆ ಕರ್ನಾಟಕ, ಗೋವಾದಿಂದ ಜನ ಬರುತ್ತಾರೆ. ಜಾತ್ರೆಗೆ ತೆರಳಿದ ಸಣ್ಣ ಬೋಟ್‌ನಲ್ಲಿ ಸುಮಾರು 30 ಜನರಿದ್ದರು. ಬೋಟ್ ದೇವಭಾಗ ಬಳಿ ಅರಬ್ಬಿ ಸಮುದ್ರ ಹಾಗೂ ಕಾಳಿ ನದಿ ಸಂಗಮದಲ್ಲಿ ಬರುತ್ತಿದ್ದಂತೆ ಅಲೆಗಳ ಅಬ್ಬರ ಹೆಚ್ಚಿತು. ಹೊಯ್ದಾಡತೊಡಗಿದ ಬೋಟ್ ಹಠಾತ್ತನೆ ಮಗುಚಿತು. ಬೋಟ್‌ನಲ್ಲಿದ್ದವರು ಸಮುದ್ರಕ್ಕೆ ಬಿದ್ದರು. ಕೆಲವರು ಮಾತ್ರ ಬುಡಮೇಲಾದ ಬೋಟ್ ಮೇಲೆ ಏರಿ ಬಚಾವಾದರು.
ರಕ್ಷಣೆಗೆ ಬಂದ ಶಾಸಕಿ: ದುರಂತಕ್ಕೀಡಾದ ಬೋಟ್‌ಗಿಂತ ಸುಮಾರು 1 ಕಿ.ಮೀ. ಹಿಂದೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ಉಳ್ವೇಕರ್ ಅವರಿದ್ದ ಬೋಟ್ ಚಲಿಸುತ್ತಿತ್ತು. ಮುಂದಿದ್ದ ಬೋಟ್ ಅಪಾಯಕ್ಕೀಡಾದುದನ್ನು ಗಮನಿಸಿದ ಶಾಸಕಿ ತಕ್ಷಣ ತಮ್ಮ ಬೋಟನ್ನು ತಂದು ಮುಳುಗುತ್ತಿದ್ದ 3 - 4 ಜನರನ್ನು ರಕ್ಷಿಸಿದ್ದಾರೆ. ಉಳಿದ 2 - 3 ಬೋಟ್‌ನವರೂ ಘಟನೆ ನೋಡಿ ಕೆಲವರನ್ನು ರಕ್ಷಿಸಿದರು.
ಇನ್ನೊಂದು ದುರಂತ: ಈ ನಡುವೆ, ಮತ್ತೊಂದು ಬೋಟ್ ದುರಂತಕ್ಕೀಡಾಗಿದ್ದು ಅದರಲ್ಲಿದ್ದ ನಾಲ್ಕೂ ಮಂದಿಯನ್ನು ರಕ್ಷಿಸಲಾಗಿದೆ.
ಪ್ರತಿ ವರ್ಷ ನಡೆಯುವ ಕೂರ್ಮಗಡ ಜಾತ್ರೆಗೆ ಸಾವಿರಾರು ಜನರು ಬೋಟ್‌ಗಳಲ್ಲಿ ತೆರಳುತ್ತಾರೆ. ದೇವರ ದರ್ಶನ ಪಡೆದು ಬರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ದುರ್ಘಟನೆ ನಡೆದಿರಲಿಲ್ಲ ಎಂದು ಹೇಳಲಾಗುತ್ತದೆ. ಕೂರ್ಮಗಡ ಜಾತ್ರೆಗೆ ತೆರಳುವವರಿಗೆ ಸೂಕ್ತ ಭದ್ರತೆ, ಲೈಫ್ ಜಾಕೆಟ್, ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ವ್ಯವಸ್ಥೆ ಕಲ್ಪಿಸದೆ ಇರುವ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.