ಕೊರೋನಾ 2ನೇ ಅಲೆ ಹೆಚ್ಚಳದ ಮಧ್ಯೆ ಕರ್ನಾಟಕಕ್ಕೆ ಸಿಹಿ ಸುದ್ದಿ!
ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇದರ ಮಧ್ಯೆ ರಾಜ್ಯಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದೆ. ಸಚಿವ ಸುಧಾಕರ್ ಅವರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು, (ಏ.04) : ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚಳದ ನಡುವೆಯೇ ರಾಜ್ಯಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಡೋಸ್ ಕೊರೋನಾ ಲಸಿಕೆ ಬರಲಿದೆ.
ಈ ಕುರಿತು ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕಕ್ಕೆ ನಾಳೆ ಅಂದ್ರೆ ಏ.05ರಂದು ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ರವಾನೆಯಾಗಲಿದೆ.
ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !
ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದ್ದು, ಮತ್ತೊಂದು ಕಂತಿನಲ್ಲಿ 10,00,000 ಡೋಸ್ ಲಸಿಕೆ ವಿಮಾನದ ಮೂಲಕ ಸೋಮವಾರ ಸಂಜೆ ಬೆಂಗಳೂರು ತಲುಪಲಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಸದ್ಯ ರಾಜ್ಯ ಸರ್ಕಾರದ ಬಳಿ 7 ಲಕ್ಷ ಲಸಿಕೆಗಳು ದಾಸ್ತಾನು ಇವೆ. ನಿನ್ನೆ (ಶನಿವಾರ) 2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ. ರಾಜ್ಯದ ಮನವಿ ಮೇರೆಗೆ ಕೇಂದ್ರವು ಲಸಿಕೆಗಳನ್ನು ತುರ್ತಾಗಿ ಪೂರೈಕೆ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.