ಬೆಂಗಳೂರು :  ಟಿಪ್ಪು ಜಯಂತಿಯನ್ನು ಈ ವರ್ಷವೂ ಸರ್ಕಾರದಿಂದಲೇ ಆಚರಿಸುವುದಾಗಿ ರಾಜ್ಯ ಸರ್ಕಾರ ಘೋಷಿಸುವುದರೊಂದಿಗೆ ದಸರಾ ಹಬ್ಬದ ವೇಳೆ ಶುರುವಾದ ಟಿಪ್ಪು ಜಯಂತಿ ವಿವಾದ ಬರುವ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ತಳೆಯುವ ಸುಳಿವು ದೊರಕಿದೆ.

ಪ್ರತಿಪಕ್ಷ ಬಿಜೆಪಿಯ ವಿರೋಧ, ಕೋರ್ಟ್‌ ಮೆಟ್ಟಿಲು ಏರಿರುವ ಜಯಂತಿ ಆಚರಣೆ ನಿರ್ಧಾರದ ಮಧ್ಯೆಯೂ ನವೆಂಬರ್‌ 10ರಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿದೆ. ಹೀಗಾಗಿ ಈವರೆಗೆ ಉಪಚುನಾವಣಾ ಸಮರ ಕಣದಲ್ಲಿ ನಡೆದಿದ್ದ ಬಿಜೆಪಿ ಮತ್ತು ಮೈತ್ರಿಪಕ್ಷಗಳ ನಡುವಿನ ವಾಕ್ಸಮರ ಹಾಗೂ ಆರೋಪ-ಪ್ರತ್ಯಾರೋಪಗಳು ಇನ್ನೂ ಕೆಲ ದಿನ ಮುಂದುವರೆಯಲಿವೆ.

ಶನಿವಾರ ಟಿಪ್ಪು ಜಯಂತಿ ಆಚರಣೆ ಕುರಿತು ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಸರ್ಕಾರದ ನಿಯಮದಂತೆ ನ.10ರಂದೇ ಕಡ್ಡಾಯವಾಗಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತೇವೆ. ಪ್ರತಿ ವರ್ಷದಂತೆ ಟಿಪ್ಪು ಜಯಂತಿ ಆಚರಣೆ ಮಾಡುವುದು ನಮ್ಮ ಕರ್ತವ್ಯ. ಜಯಂತಿ ಆಚರಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಒಂದು ಬಾರಿ ನಿಯಮ ರೂಪಿಸಿದ ಮೇಲೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಸರ್ಕಾರದ ನಿಯಮ ಹಾಗೂ ರೂಪರೇಷೆಗಳ ಪ್ರಕಾರವೇ ಟಿಪ್ಪು ಜಯಂತಿ ನಡೆಯಲಿದೆ ಎಂದು ಹೇಳಿದರು.

ಅನಾಹುತಕ್ಕೆ ಬಿಜೆಪಿಯೇ ಹೊಣೆ:

ಟಿಪ್ಪು ಜಯಂತಿಯನ್ನು ಬಿಜೆಪಿ ವಿರೋಧಿಸಿದರೆ ಸಂಭವಿಸುವ ಅನಾಹುತಕ್ಕೆ ಅವರೇ ಹೊಣೆಯಾಗುತ್ತಾರೆ. ಬಿಜೆಪಿ ಮುಖಂಡರು ಟಿಪ್ಪು ಜಯಂತಿ ಆಚರಿಸಿದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಹೆದರಿಸುತ್ತಿದ್ದಾರೆ. ಒಂದು ದಿನದ ಜಯಂತಿಗೆ ಕಾನೂನು ಸುವ್ಯವಸ್ಥೆ ಹೇಗೆ ಹಾಳಾಗುತ್ತದೆ? ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಬಿಜೆಪಿಯವರೇ ಹೊಣೆಯಾಗಬೇಕಾಗುತ್ತದೆ, ಆದರೆ ಜನರಿಗೆ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ಬಿಜೆಪಿ ನಾಯಕರು ವಿನಾಕಾರಣ ಟಿಪ್ಪು ಜಯಂತಿಯನ್ನು ವಿರೋಧ ಮಾಡುತ್ತಾರೆ. ಹಿಂದೆ ಬಿಜೆಪಿ ನಾಯಕರು ಟಿಪ್ಪು ಜಯಂತಿ ಆಚರಿಸಿರುವುದು ಎಲ್ಲರಿಗೂ ಗೊತ್ತಿದೆ. ಟಿಪ್ಪು ಜಯಂತಿ ಆಚರಣೆ ಮೊದಲು ಮಾಡಿದ್ದೇ ಬಿಜೆಪಿಯವರು. ಇದೇ ಬಿ.ಎಸ್‌.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಟೋಪಿ ತೊಟ್ಟು, ಟಿಪ್ಪುವಿನ ಖಡ್ಗ ಹಿಡಿದು ಟಿಪ್ಪು ಜಯಂತಿ ಆಚರಣೆ ಮಾಡಿದ್ದರು. ಇದೀಗ ಅವರೇ ವಿರೋಧ ವ್ಯಕ್ತಪಡಿಸುವುದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿ ಸಂಬಂಧ ಸಭೆ:  ಟಿಪ್ಪು ಜಯಂತಿ ಆಚರಣೆ ಸಂಬಂಧ ನಡೆದ ಸಭೆಯಲ್ಲಿ ಆಹಾರ ಮತ್ತು ವಕ್ಫ್ ಸಚಿವ ಜಮೀರ್‌ ಅಹಮದ್‌ ಖಾನ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್‌ ಹಾಜರಿದ್ದರು.