ಬೆಂಗಳೂರು (ಸೆ.13):  ರಾಜ್ಯದ ಬಹುತೇಕ ಕಡೆ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆಲ ದಿನಗಳಿಂದ ಚಳಿಯ ವಾತಾವರಣ ನಿರ್ಮಾಣವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಚಳಿಯಿಂದ ಕೊರೋನಾ ಸೋಂಕಿನ ಹಾವಳಿಯ ನಡುವೆಯೇ ವಿಷಮಶೀತ ಜ್ವರ, ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು ತೀವ್ರಗೊಳ್ಳುವ ಭೀತಿ ಆವರಿಸಿದೆ.

ಕರಾವಳಿ ಭಾಗದ ಅರಬ್ಬಿ ಸಮುದ್ರ ಮಟ್ಟದಲ್ಲಿ ಸ್ಟ್ರಫ್‌ ಹಾಗೂ ಮೇಲ್ಮೈ ಸುಳಿಗಾಳಿ ಬೀಸಿರುವುದರಿಂದ ಕರಾವಳಿ, ಮಲೆನಾಡು ಭಾಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣದಿಂದಾಗಿ ಚಳಿಯ ವಾತಾವರಣ ಉಂಟಾಗಿದೆ.

ನಮ್ಮ ಆಹಾರ ನಾವೃ ಬೆಳೆಯೋದು ಕೂಲ್ ಅಂತಾರೆ ಸಮಂತಾ: ಇಲ್ನೋಡಿ ಫೋಟೋಸ್

ಪ್ರಸ್ತುತ ಚಳಿಯ ವಾತಾವರಣ ತಾತ್ಕಾಲಿಕವಾಗಿದ್ದು, ಇನ್ನೆರಡು ದಿನ (ಸೆ. 15ರವರೆಗೆ) ಮುಂದುವರಿದು ನಂತರ ಸಹಜ ಸ್ಥಿತಿಗೆ ಮರಳಲಿದೆ. ಅಲ್ಲಿವರೆಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಮಡಿಕೇರಿ, ಶಿವಮೊಗ್ಗ ಹಾಗೂ ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಚಳಿ ಇರಲಿದೆ. ಮಳೆ ಕಡಿಮೆಯಾದರೂ ಸಹ ಏಕಾಏಕಿ ಚಳಿ ಕಡಿಮೆಯಾಗಿ ಬಿಸಿಲು ಹೆಚ್ಚಾಗುವುದಿಲ್ಲ. ಹಂತ ಹಂತವಾಗಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಡಾ.ಸುನೀಲ್‌ ಗವಾಸ್ಕರ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಹ ಕಳೆದ ಎರಡು-ಮೂರು ದಿನದಿಂದ ಹೆಚ್ಚು ಕಡಿಮೆ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಇದರ ನಡುವೆ ಆಗಾಗ ಬಂದು ಹೋಗುವ ಮಳೆಯಿಂದಾಗಿ ಚಳಿಯ ವಾತಾವರಣ ಸೃಷ್ಟಿಯಾಗಿದೆ.

ಹೀಗಾಗಿ ಚಳಿಯಿಂದ ಉಂಟಾಗುವ ವಿಷಮಶೀತ ಜ್ವರ, ನ್ಯುಮೋನಿಯಾ ಹಾಗೂ ಅಸ್ತಮಾ ರೋಗಿಗಳಲ್ಲಿ ಹೆಚ್ಚಾಗಲಿರುವ ಉಸಿರಾಟ ಸಂಬಂಧಿ ಕಾಯಿಲೆ, ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸುವಂತೆ ತಜ್ಞರು ಎಚ್ಚರಿಸಿದ್ದಾರೆ.