ರಾಜ್ಯದ ಅಣೆಕಟ್ಟುಗಳು 2ನೇ ಬಾರಿ ಸಂಪೂರ್ಣ ಭರ್ತಿ: ಈಗ ಹೆಚ್ಚಿದೆ ಆತಂಕ
ಕಳೆದ ಮೂರು ತಿಂಗಳಲ್ಲೇ ಎರಡು ಬಾರಿ ಭಾರಿ ಪ್ರವಾಹ ಉಂಟಾಗಿದ್ದರ ಪರಿಣಾಮ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಸತತವಾಗಿ ಒಳ ಹರಿವು-ಹೊರ ಹರಿವು ಪ್ರಕ್ರಿಯೆ ನಡೆದೇ ಇದೆ. ಇದು ಗಂಭೀರ ಪ್ರಮಾಣ ಮುಟ್ಟಿರುವುದರಿಂದ ಅಣೆಕಟ್ಟುಗಳ ಸುರಕ್ಷತೆಯ ಆತಂಕ ಎದುರಾಗಿದೆ.
ಶ್ರೀಕಾಂತ್.ಎನ್.ಗೌಡಸಂದ್ರ
ಬೆಂಗಳೂರು [ಅ.24]: ರಾಜ್ಯದಲ್ಲಿ ಮಳೆಯ ರುದ್ರ ನರ್ತನದಿಂದ ಕಳೆದ ಮೂರು ತಿಂಗಳಲ್ಲೇ ಎರಡು ಬಾರಿ ಭಾರಿ ಪ್ರವಾಹ ಉಂಟಾಗಿದ್ದರ ಪರಿಣಾಮ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಸತತವಾಗಿ ಒಳ ಹರಿವು-ಹೊರ ಹರಿವು ಪ್ರಕ್ರಿಯೆ ನಡೆದೇ ಇದೆ. ಇದು ಗಂಭೀರ ಪ್ರಮಾಣ ಮುಟ್ಟಿರುವುದರಿಂದ ಅಣೆಕಟ್ಟುಗಳ ಸುರಕ್ಷತೆಯ ಆತಂಕ ಎದುರಾಗಿದೆ. ಪರಿಣಾಮ- ಜಲಾಶಯಗಳ ಸುರಕ್ಷತೆ ದೃಷ್ಟಿಯಿಂದ ಸತತ ಪರಿಶೀಲನೆ ನಡೆಸುವಂತೆ ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ (ಡಿಎಸ್‌ಆರ್‌ಪಿ)ಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಆಗಸ್ಟ್ ತಿಂಗಳಿಂದ ರಾಜ್ಯದ ಜಲಾಶಯಗಳು ಹೆಚ್ಚುಕಮ್ಮಿ ತುಂಬಿಕೊಂಡೇ ಇವೆ. ಆಗಸ್ಟ್ ತಿಂಗಳ ಪ್ರವಾಹದಲ್ಲೇ ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳು ಒಂದು ಸುತ್ತು ಸಂಪೂರ್ಣ ಭರ್ತಿಯಾಗಿದ್ದವು. ಬಳಿಕ ವರುಣನ ಆರ್ಭಟ ಕಡಿಮೆಯಾಗಿ ಜಲಾಶಯಗಳ ಮಟ್ಟಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ, ಅಕ್ಟೋಬರ್‌ನಲ್ಲಿ ಮತ್ತೆ ಅಬ್ಬರಿಸುತ್ತಿರುವ ವರುಣನಿಂದ ಕಳೆದ ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಒಳ ಹರಿವು ಬರುತ್ತಿದೆ. ಕೆ.ಆರ್.ಎಸ್, ಭದ್ರಾ, ಘಟಪ್ರಭಾ, ಮಲಪ್ರಭಾ ಜಲಾಶಯಗಳು ಶೇ.100ರಷ್ಟುಭರ್ತಿಯಾಗಿದ್ದು, ಅ.23ರ ವೇಳೆಗೆ ಬಹುತೇಕ ಪ್ರಮುಖ ಜಲಾಶಯಗಳ ನೀರಿನ ಮಟ್ಟಶೇ.95ಕ್ಕಿಂತ ಹೆಚ್ಚಾಗಿದೆ.
ಇದರಿಂದಾಗಿ ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳ ಸುರಕ್ಷತೆ ಪರಿಶೀಲನೆ ನಡೆಸಲು ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ (ಡಿಎಸ್‌ಆರ್‌ಪಿ) ಕಾರ್ಯಪ್ರವೃತ್ತವಾಗಿದೆ. ಕೇಂದ್ರ ಜಲ ಆಯೋಗದ ಮಾರ್ಗಸೂಚಿಗಳಂತೆ ರಾಜ್ಯದಲ್ಲಿನ 15 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಅಥವಾ 60 ದಶಲಕ್ಷ ಘನ ಮೀಟರ್‌ಗಿಂತ ಹೆಚ್ಚು ನೀರು ಸಂಗ್ರಹಣಾ ಸಾಮರ್ಥ್ಯವಿರುವ 143 ಅಣೆಕಟ್ಟುಗಳು ಸಮಿತಿ ವ್ಯಾಪ್ತಿಗೆ ಬರುತ್ತವೆ.
143 ಅಣೆಕಟ್ಟುಗಳ ಪೈಕಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ 62 ಅಣೆಕಟ್ಟು, ಸಣ್ಣ ನೀರಾವರಿ ಇಲಾಖೆಯಡಿ 62 ಅಣೆಕಟ್ಟು ಹಾಗೂ ಉಳಿದ 19 ಅಣೆಕಟ್ಟುಗಳು ಇನ್ನಿತರ ಮಂಡಳಿ, ನಿಗಮ, ಇಲಾಖೆಗಳ ವ್ಯಾಪ್ತಿಗೆ ಬರುತ್ತವೆ. ಭಾರಿ ಮತ್ತು ಮಧ್ಯಮ ನೀರಾವರಿ ಅಣೆಕಟ್ಟುಗಳ ಪರಿಶೀಲನೆಗಾಗಿ ಎರಡು ಪರಿಶೀಲನಾ ಸಮಿತಿ ತಂಡ, ಸಣ್ಣ ನೀರಾವರಿ ಅಣೆಕಟ್ಟುಗಳ ಪರಿಶೀಲನೆಗೆ ಎರಡು ತಂಡ ರಚಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಾಹುತ ತಡೆಗೆ ಮುನ್ನೆಚ್ಚರಿಕೆ:
2014ರಿಂದಲೇ ಅಣೆಕಟ್ಟುಗಳ ಸಂಪೂರ್ಣ ಸುರಕ್ಷತೆ ಅಧ್ಯಯನ ರಾಜ್ಯದಲ್ಲಿ ಶುರುವಾಗಿದೆ. 2018ರವರೆಗೆ 28 ಬಾರಿ ಅಣೆಕಟ್ಟುಗಳ ಪರಿಶೀಲನೆ ಮಾಡಲಾಗಿದೆ. 2018ರಲ್ಲಿ ಭಾರಿ ಅಣೆಕಟ್ಟುಗಳು ವರ್ಷದಲ್ಲಿ ಪ್ರಥಮ ಬಾರಿ ತುಂಬುವ ವೇಳೆ ಸುರಕ್ಷತೆ ಪರಿಶೀಲನೆ ನಡೆಸಲಾಗಿತ್ತು.
ಈ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಅವಧಿಯಲ್ಲೂ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಒಳ ಹರಿವೂ ಸಹ ಹೆಚ್ಚಾಗಿದೆ. ಈಗಾಗಲೇ ಮುಂಗಾರು ಸಮಯದ ಜಲಾಶಯಗಳ ಪರಿವೀಕ್ಷಣೆ ಮುಕ್ತಾಯಗೊಂಡಿದ್ದು, ಹಿಂಗಾರು ಶುರುವಾಗುವ ಮೊದಲು ಮತ್ತೊಂದು ಹಂತದ ಪರಿಶೀಲನೆ ನಡೆಸಲಾಗಿದೆ. ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹೆಚ್ಚಾಗಿರುವುದರಿಂದ ನಿರಂತರವಾಗಿ ಪರಿವೀಕ್ಷಣೆ ನಡೆಸಲು ರಾಜ್ಯ ಸರ್ಕಾರ ಸಮಿತಿಗಳಿಗೆ ಆದೇಶಿಸಿದೆ.
ಅಣೆಕಟ್ಟು ಸುರಕ್ಷತೆಗೆ ಎರಡು ಪ್ರಶಸ್ತಿ: ಅಣೆಕಟ್ಟು ಸುರಕ್ಷತೆ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ದೇಶದ 6 ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಡ್ಯಾಂ ರೀಹ್ಯಾಬಿಲಿಟೇಶನ್ ಅಂಡ್ ಇಂಪ್ರೂವ್‌ಮೆಂಟ್ ಪ್ರಾಜೆಕ್ಟ್ (ಡ್ರಿಪ್) ಅನುಷ್ಠಾನಗೊಂಡಿದೆ. ಇದರಡಿ ಪ್ರಮುಖ ಅಣೆಕಟ್ಟುಗಳ ಸಂಪೂರ್ಣ ರಿಪೇರಿ, ನಿರ್ವಹಣೆ, ಕ್ರೆಸ್ಟ್ ಗೇಟ್‌ಗಳ ಬದಲಾವಣೆ ನಡೆಸಲಾಗುತ್ತದೆ. ರಾಜ್ಯಕ್ಕೆ ಈ ಯೋಜನೆ ಅನುಷ್ಠಾನದಲ್ಲಿ ಸತತ ಎರಡು ವರ್ಷ ಪ್ರಥಮ ಪ್ರಶಸ್ತಿ ದೊರೆತಿದೆ. ಕೃಷ್ಣಾ ಜಲ ಭಾಗ್ಯ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಕೆ.ಆರ್‌ಎಸ್, ಹಾರಂಗಿ, ಹಿಡಕಲ್, ನಾರಾಯಣಪುರ ಸೇರಿ ಪ್ರಮುಖ 22 ಜಲಾಶಯ ನಿರ್ವಹಣೆಯನ್ನು 581 ಕೋಟಿ ರು. ಮೊತ್ತದಲ್ಲಿ ಮುಗಿಸಿದ್ದು, ಒಂದು ಅಣೆಕಟ್ಟಿನ ಕ್ರೆಸ್ ಗೇಟ್ ಬದಲಾವಣೆ ಮಾತ್ರ ಸಾಧ್ಯವಾಗಲಿಲ್ಲ. ಆದರೆ ರಾಜ್ಯದ ಅಣೆಕಟ್ಟುಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಕನ್ನಡಪ್ರಭಕ್ಕೆ ತಿಳಿಸಿದರು.
ವ್ಯವಸ್ಥಿತವಾಗಿ ನೀರು ಬಿಡುಗಡೆ
ಎರಡು ವರ್ಷದ ಹಿಂದೆ ತಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಒಮ್ಮೆಲೆ ನೀರು ಹೊರಬಿಟ್ಟಿದ್ದರಿಂದ ಕೇರಳದಲ್ಲಿ ಪ್ರವಾಹ ಉಂಟಾಗಿತ್ತು. ಅದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ನದಿಯ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಳೆ, ಜಲಾಶಯದ ಹಾಲಿ ನೀರಿನ ಸಂಗ್ರಹ ಹಾಗೂ ಒಳಹರಿವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಜಲಾಶಯಗಳ ಮುಖ್ಯ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದೆ.
ಉದಾ: ಕೃಷ್ಣಾ ನದಿಯ ಜಲಾಶಯಗಳ ಪೈಕಿ ಕೃಷ್ಣಾ ನದಿ ಮಹಾರಾಷ್ಟ್ರದಿಂದ ಹೊತ್ತು ತರುವ ನೀರು ರಾಜಾಪುರ ಬ್ಯಾರೇಜ್‌ನಲ್ಲಿ ಲೆಕ್ಕಕ್ಕೆ ಸಿಗುತ್ತದೆ. ರಾಜಾಪುರ ಬ್ಯಾರೇಜ್‌ನಿಂದ 86 ಕಿ.ಮೀ. ದೂರದಲ್ಲಿ ಹಿಪ್ಪರಗಿ ಬ್ಯಾರೇಜ್ ಇದೆ. ಹಿಪ್ಪರಗಿಯಿಂದ 126 ಕಿ.ಮೀ. ದೂರದ ಆಲಮಟ್ಟಿಗೆ ನೀರು ಬರಲು 24 ಗಂಟೆ ಬೇಕು. ಈ ಎರಡೂ ಬ್ಯಾರೇಜ್‌ಗಳ ನೀರನ್ನು ಲೆಕ್ಕ ಹಾಕಿ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅರ್ಧ ಗಂಟೆಯೊಳಗೆ ಇದನ್ನು ಅನುಷ್ಠಾನಕ್ಕೆ ತರುತ್ತೇವೆ. ನೀರು ಬಿಡುಗಡೆಗೆ ತೀರ್ಮಾನಿಸಿದ ತಕ್ಷಣ ನಾರಾಯಣಪುರ, ಆಂಧ್ರಪ್ರದೇಶದ ಅಧಿಕಾರಿಗಳಿಗೂ ಮಾಹಿತಿ ನೀಡುತ್ತೇವೆ. ಪ್ರವಾಹದ ಹಿನ್ನೆಲೆಯಲ್ಲಿ ಸಂಪೂರ್ಣ ಭರ್ತಿ ಮಾಡದೆ ಸುರಕ್ಷಿತ ಅಂತರ ಇರಿಸಿಕೊಂಡಿರುತ್ತಾರೆ. ಇದೇ ರೀತಿ ಪ್ರವಾಹ ಉಂಟಾಗದಂತೆ ಹಾಗೂ ಅಣೆಕಟ್ಟು ಸುರಕ್ಷತೆಗೂ ಧಕ್ಕೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಯಾವುದೇ ಸಮಸ್ಯೆ ಇಲ್ಲ
ದೇವರ ಆಶೀರ್ವಾದದಿಂದ ಸದ್ಯಕ್ಕೆ ಎಲ್ಲಾ ಅಣೆಕಟ್ಟುಗಳು ಸುರಕ್ಷಿತವಾಗಿವೆ. ಕೇಂದ್ರ ಸರ್ಕಾರದ ಡ್ಯಾಂ ರೀಹ್ಯಾಬಿಲಿಟೇಶನ್ ಅಂಡ್ ಇಂಪ್ರೂವ್‌ಮೆಂಟ್ ಪ್ರಾಜೆಕ್ಟ್ (ಡ್ರಿಪ್) ಅಡಿ ಅಣೆಕಟ್ಟುಗಳ ಸುರಕ್ಷತೆಗಾಗಿ ಕಳೆದ ಮೂರು ವರ್ಷದಿಂದ ಮೊದಲ ಹಂತದಲ್ಲಿ 22 ಭಾರಿ ಅಣೆಕಟ್ಟುಗಳನ್ನು ಸಂಪೂರ್ಣ ರಿಪೇರಿ, ನಿರ್ವಹಣೆ ಮಾಡಲಾಗಿದೆ. ಆಗಸ್ಟ್ 10ರಿಂದ 15ರವರೆಗೆ ಬಹುತೇಕ ಜಲಾಶಯ ಭರ್ತಿ ಆಗಿತ್ತು. ಕಳೆದ ಮೂರು ದಿನಗಳಿಂದ ಮತ್ತೆ ಒಳಹರಿವು ಜಾಸ್ತಿಯಾಗಿದೆ. ಹೀಗಾಗಿ ನಿರಂತರವಾಗಿ ಅಣೆಕಟ್ಟು ಸುರಕ್ಷತಾ ಸಮಿತಿ ಪರಿಶೀಲನೆ ನಡೆಸುತ್ತಿದೆ.
- ರಾಕೇಶ್ ಸಿಂಗ್, ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ
ಜಲಾಶಯ - ಭರ್ತಿ ಪ್ರಮಾಣ
ಕೆಆರ್‌ಎಸ್ - ಶೇ.100
ಭದ್ರಾ - ಶೇ.100
ಘಟಪ್ರಭಾ - ಶೇ. 100
ಮಲಪ್ರಭಾ - ಶೇ.100
ಲಿಂಗನಮಕ್ಕಿ - ಶೇ. 99
ಸೂಪ - ಶೇ.98
ಹೇಮಾವತಿ - ಶೇ.99
ತುಂಗಭದ್ರಾ - ಶೇ.98