ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿ.ನಾಗೇಂದ್ರ ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಗರಣ ಕೂಡ ಅವರಿಗೆ ಮುಳುವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿ.ನಾಗೇಂದ್ರ ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಗರಣ ಕೂಡ ಅವರಿಗೆ ಮುಳುವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಕರಣ ಕುರಿತು ಬ್ಯಾಂಕು ಸಿಬಿಐಗೆ ದೂರು ನೀಡಿರುವುದು ಹಾಗೂ ಬಿಜೆಪಿ ನಾಯಕರು ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆಗೆ ನಡೆಸಬೇಕು ಎಂದು ಹೋರಾಟಕ್ಕಿಳಿದಿರುವುದು ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದ್ದರಿಂದ ನಾಗೇಂದ್ರ ಅವರ ರಾಜಕೀಯ ಬವಿಷ್ಯ ಡೋಲಾಯಮಾನ ಆಗುವ ಸಾಧ್ಯತೆಗಳಿವೆ.

ವಾಲ್ಮೀಕಿ ನಿಗಮ ಪ್ರಕರಣ: ಎಸ್‌ಐಟಿಯಿಂದ ಸಚಿವ ನಾಗೇಂದ್ರ ಆಪ್ತರಿಬ್ಬರ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರ್ ಡೆತ್‌ನೋಟ್‌ ನ್ನು ಸಹ ಪ್ರಕರಣದ ತನಿಖೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರು ಧ್ವನಿ ಎತ್ತಿದ್ದಾರೆ. ಈ ಸಂಬಂಧ ರಾಜ್ಯದ ಪ್ರಭಾವಿ ಸಂಸತ್ ಸದಸ್ಯರೊಬ್ಬರು ಸಿಬಿಐಗೆ ಪತ್ರ ಬರೆದಿರುವುದು ಪ್ರಕರಣ ತನಿಖೆಯತ್ತ ತೀವ್ರ ಕುತೂಹಲ ಮೂಡಿಸಿದೆ.

ಅದಿರು ಕುತ್ತು ತರುವ ಆಪತ್ತು:

ರಾಜಕೀಯ ಪ್ರವೇಶ ಮುನ್ನ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದ ಬಿ.ನಾಗೇಂದ್ರ ಅವರು ಜನಾರ್ದನ ರೆಡ್ಡಿ ಅವರ ಸಂಪರ್ಕ ಬಂದ ಬಳಿಕ ಗಣಿಗಾರಿಕೆಯ ಧೂಳಿಗೆ ಮಾರು ಹೋದರು. ಸಹಜವಾಗಿ ಗಣಿಗಾರಿಕೆಯಲ್ಲಿ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದ್ದ ಹಣ ನಾಗೇಂದ್ರ ಅವರಿಗೆ ಕಣ್ಣು ಕುಕ್ಕಿಸಿತು. ನಂತರದ ದಿನಗಳಲ್ಲಾದ ಗಣಿ ವ್ಯವಹಾರ ನಾಗೇಂದ್ರ ಅವರನ್ನು ಜೈಲು ಪಾಲು ಮಾಡಿತು.

2008ರಲ್ಲಿ ಕೂಡ್ಲಿಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದ ನಾಗೇಂದ್ರ ಅವರಿಗೆ ಗಣಿ ಹಣದ ವ್ಯವಹಾರ ಕುತ್ತು ತಂದಿತು. ಅಲ್ಲದೆ, 2012ರ ಮಾರ್ಚ್‌ನಲ್ಲಿ ಅಕ್ರಮ ಅದಿರು ಸಾಗಣೆ ಹಾಗೂ ಮಾರಾಟದ ಆರೋಪದಡಿ ಜೈಲು ಸೇರುವಂತಾಯಿತು.

18 ತಿಂಗಳ ಕಾಲ ಜೈಲಿನಲ್ಲಿದ್ದ ನಾಗೇಂದ್ರ ಬಳಿಕ ಮತ್ತೆ ರಾಜಕೀಯ ಪುನಶ್ಚೇತನ ಪಡೆದುಕೊಂಡರು. ಸದ್ಯ ನಾಗೇಂದ್ರ ವಿರುದ್ಧ ಸಿಬಿಐನಲ್ಲಿ 5 ಪ್ರಕರಣಗಳು ಹಾಗೂ ಎಸ್‌ಐಟಿಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಈ ಎಲ್ಲವನ್ನೂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ನಾಗೇಂದ್ರ ರಾಜಕೀಯ ಪಥ:

ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಬಿಕಾಂ ಪದವೀಧರನಾದ ಬಿ.ನಾಗೇಂದ್ರ, ಬಳಿಕ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ವಿದ್ಯಾರ್ಥಿ ದಿಸೆಯಲ್ಲಿ ರಾಜಕೀಯ ಆಸಕ್ತಿ ಹೊಂದಿದ್ದರು. ಮೊದ ಮೊದಲು ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಸಿ. ಕೊಂಡಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ನಂತರದಲ್ಲಿ ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರು ಜಿಲ್ಲೆಯಲ್ಲಿ ರಾಜಕೀಯವಾಗಿ ಮುನ್ನಲೆಗೆ ಬರುತ್ತಿದ್ದಂತೆಯೇ ಬಿಜೆಪಿ ಸೇರ್ಪಡೆಗೊಂಡು ರೆಡ್ಡಿಗೆ ಆಪ್ತರಾದರು.

ಪದತ್ಯಾಗ ಮಾಡಲು ಸಿಎಂ ಸಿದ್ದು ಸೂಚನೆ ಹಿನ್ನೆಲೆ: ಸಚಿವ ಬಿ.ನಾಗೇಂದ್ರ ಇಂದೇ ರಾಜೀನಾಮೆ?

ರೆಡ್ಡಿ ಸಂಪರ್ಕ ಬರುತ್ತಿದ್ದಂತೆಯೇ ನಾಗೇಂದ್ರ ಅವರ ರಾಜಕೀಯ ಭವಿಷ್ಯ ಖುಲಾಯಿಸಿತು.

2008ರಲ್ಲಿ ಕೂಡ್ಲಿಗಿಯಿಂದ ಸ್ಪರ್ಧಿಸಲು ಜನಾರ್ದನ ರೆಡ್ಡಿ ನಾಗೇಂದ್ರ ಅವರಿಗೆ ಸೂಚಿಸಿದರು. ಕೂಡ್ಲಿಗಿಯ ಜನರ ಮನಗೆದ್ದ ನಾಗೇಂದ್ರ ಮೊದಲ ಚುನಾವಣೆಯಲ್ಲಿಯೇ ಗೆಲುವು ದಾಖಲಿಸಿದರು. 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಉಳಿದು ಪಕ್ಷೇತರ ಅಭ್ಯರ್ಥಿಯಾಗಿ ಕೂಡ್ಲಿಗಿಯಿಂದ ಸ್ಪರ್ಧಿಸಿ ಗೆದ್ದು ಗಮನ ಸೆಳೆದರು. 2018ರ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ಗೆ ಮರಳಿದ ನಾಗೇಂದ್ರ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಸಣ್ಣ ಫಕ್ಕೀರಪ್ಪ ವಿರುದ್ಧ ಜಯ ದಾಖಲಿಸಿದರು. ಕಳೆದ 2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಅಖಾಡಕ್ಕಿಳಿದ ನಾಗೇಂದ್ರ, ಬಿಜೆಪಿಯ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಬಿ.ಶ್ರೀರಾಮುಲು ಅವರನ್ನು ಮಣಿಸಿ, ರಾಜ್ಯದ ಗಮನ ಸೆಳೆದರು. ಶ್ರೀರಾಮುಲು ಅವರನ್ನು ಸೋಲಿಸಿದ ನಾಗೇಂದ್ರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಟ್ಟ ಸುಲಭವಾಗಿ ದಕ್ಕಿತು.