ಬೆಂಗಳೂರು (ಮಾ.30):  ಸಾರಿಗೆ ನೌಕರರ ಆರನೇ ವೇತನ ಆಯೋಗಕ್ಕೆ ಸಮಾನಾಂತರ ವೇತನದ ಬೇಡಿಕೆ ಸಂಬಂಧ ಸಾಧಕ-ಬಾಧಕ ಚರ್ಚಿಸಿ ವಾರದೊಳಗೆ ಸ್ಪಷ್ಟಚಿತ್ರಣ ನೀಡಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದರಿಂದ ಸಾರಿಗೆ ನೌಕರರು ಏಪ್ರಿಲ್‌ 7ರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರದ ನಿರ್ಧಾರ ಕೈಬಿಡುವಂತೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರನೇ ವೇತನ ಆಯೋಗಕ್ಕೆ ಸಮಾನಾಂತರ ವೇತನ ಈಡೇರಿಕೆಯಿಂದ ಸರ್ಕಾರಕ್ಕೆ ಹಾಗೂ ಸಾರಿಗೆ ನಿಗಮಗಳಿಗೆ ಎಷ್ಟುಆರ್ಥಿಕ ಹೊರೆಯಾಗುತ್ತದೆ ಎಂಬುದರ ಬಗ್ಗೆ ಪರಿಶೀಲಿಸಿ, ವರದಿ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವಾಗ ಬೇಡಿಕೆ ಈಡೇರಿಸಿದರೂ 2020ರ ಜನವರಿಯಿಂದ ಪೂರ್ವಾನ್ವಯವಾಗುವಂತೆ ಬಾಕಿ ಕೊಡುತ್ತೇವೆ. ಹೀಗಾಗಿ ನೌಕರರು ಏಪ್ರಿಲ್‌ ಏಳರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರ ನಿರ್ಧಾರ ಕೈಬಿಡುವಂತೆ ಕೋರಿದರು.

ಏ.7ರಿಂದ ರಸ್ತೆಗಿಳಿಯಲ್ಲ KSRTC ಬಸ್‌ಗಳು : ಪ್ರಯಾಣಿಕರೆ ಎಚ್ಚರ .

ಪರ್ಯಾಯ ವ್ಯವಸ್ಥೆ:  ಒಂದು ವೇಳೆ ನೌಕರರು ಮುಷ್ಕರಕ್ಕೆ ಮುಂದಾದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ವಾಹನ ಬಳಸಿಕೊಂಡು ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಖಾಸಗಿ ಬಸ್‌, ಮಿನಿ ಬಸ್‌ ಸೇರಿದಂತೆ ಖಾಸಗಿ ವಾಹನಗಳಿಗೆ ಉಚಿತ ರಹದಾರಿ ನೀಡಿ ಕಾರ್ಯಾಚರಣೆ ಮಾಡುತ್ತೇವೆ. ಈಗಾಗಲೇ ಆಸಕ್ತ ವಾಹನ ಮಾಲೀಕರಿಗೆ ಆಹ್ವಾನ ನೀಡಲಾಗಿದೆ ಎಂದು ಸಚಿವ ಸವದಿ ಹೇಳಿದರು.

ಮೂರು ತಿಂಗಳ ಹಿಂದೆ ನಾಲ್ಕು ದಿನ ನಡೆದ ಪ್ರತಿಭಟನೆ ವೇಳೆ ಸಾರಿಗೆ ನೌಕರರು 10 ಬೇಡಿಕೆ ಇರಿಸಿದ್ದರು. ಈ ಪೈಕಿ ಸರ್ಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆ ಹೊರತುಪಡಿಸಿ ಉಳಿದ 9 ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು, ಈಗಾಗಲೇ 8 ಬೇಡಿಕೆ ಈಡೇರಿಸಲಾಗಿದೆ. ಸಾರಿಗೆ ನಿಗಮಗಳ ಆದಾಯ ಡೀಸೆಲ್‌ ಹಾಗೂ ನೌಕರರ ವೇತನಕ್ಕೆ ಸಾಲುತ್ತಿಲ್ಲ. ಸರ್ಕಾರಕ್ಕೆ ಭಾರವಾದರೂ ನೌಕರರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ ಎಂದು ಭರವಸೆ ನೀಡಿದರು.