ರಾಜ್ಯ ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ 'ಬೆಂಗಳೂರು ಚಲೋ' ಹಮ್ಮಿಕೊಂಡಿದ್ದು, ಶುಕ್ರವಾರದಿಂದ ಮುಷ್ಕರ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ನೌಕರರಿಗೆ ಎಚ್ಚರಿಕೆ ನೀಡಿದ್ದು, ಮುಷ್ಕರದ ಕುರಿತ ಅಂತಿಮ ನಿರ್ಧಾರ ನಾಳೆ ಸಂಜೆ ಪ್ರಕಟವಾಗಲಿದೆ.

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು ಶುಕ್ರವಾರದಿಂದ ಮುಷ್ಕರಕ್ಕೆ ಮುಂದಾಗುವ ಸಾಧ್ಯತೆ ಇದ್ದು, ಇದರ ಭಾಗವಾಗಿ ನಾಳೆ (ಗುರುವಾರ) ‘ಬೆಂಗಳೂರು ಚಲೋ’ ಕಾರ್ಯಕ್ರಮಕ್ಕೆ ಕರೆ ನೀಡಿದ್ದಾರೆ.

ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಈ ಹೋರಾಟ ರೂಪುಗೊಂಡಿದ್ದು, ನಾಳೆ ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಹಾಗೂ ಶುಕ್ರವಾರದಿಂದ ಬಸ್‌ಗಳನ್ನು ರಸ್ತೆಗಿಳಿಸಬೇಕೋ ಬೇಡವೋ ಎಂಬ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ನಾಳೆ ಸಂಚಾರಕ್ಕೆ ತೀವ್ರ ಅಡ್ಡಿ ಸಾಧ್ಯತೆ ಕಡಿಮೆ

ಸಾರಿಗೆ ನೌಕರರು ನಾಳೆ ಶಾಂತಿಯುತವಾಗಿ ‘ಬೆಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ನಾಳೆ ನಗರ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ, ಸರ್ಕಾರದಿಂದ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಅಥವಾ ಭರವಸೆ ದೊರಕದಿದ್ದರೆ, ಮುಂದಿನ ದಿನಗಳಲ್ಲಿ ವ್ಯಾಪಕ ಹೋರಾಟ ನಡೆಸಲು ಜಂಟಿ ಕ್ರಿಯಾ ಸಮಿತಿ ತಯಾರಿ ನಡೆಸಿದೆ.

ನೌಕರರಿಗೆ ಬಿಎಂಟಿಸಿ ಎಚ್ಚರಿಕೆ

‘ಬೆಂಗಳೂರು ಚಲೋ’ ಹಿನ್ನೆಲೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ನೋಟಿಸ್‌ನಲ್ಲಿ, ಬಿಎಂಟಿಸಿ ನಗರ ಜನಸಾಮಾನ್ಯರಿಗೆ ಸಮರ್ಪಕ ಸಾರ್ವಜನಿಕ ಸಾರಿಗೆ ಒದಗಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.

ರಾಜ್ಯ ಸರ್ಕಾರವು 2013ರ ಕರ್ನಾಟಕ ಕಾಯ್ದೆ (Karnataka Act No-25/2015) ಅಡಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಸಾರ್ವಜನಿಕ ಉಪಯುಕ್ತ ಸೇವೆಗಳಾಗಿ ಘೋಷಿಸಿದ್ದು, ಅದರನ್ವಯ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಯಾವುದೇ ಸಂಘಟನೆಗಳು ಅಥವಾ ವ್ಯಕ್ತಿಗಳು ನೌಕರರನ್ನು ಮುಷ್ಕರಕ್ಕೆ ಪ್ರಚೋದಿಸುವುದಕ್ಕೂ ಅಥವಾ ಬೆಂಬಲ ನೀಡುವುದಕ್ಕೂ ಅವಕಾಶವಿಲ್ಲ ಎಂದು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ನೌಕರರು ಯಾವುದೇ ಕಾರಣಕ್ಕೂ ‘ಬೆಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು, ತಮ್ಮ ದೈನಂದಿನ ಕರ್ತವ್ಯಕ್ಕೆ ಹಾಜರಾಗಿ ರಾಜ್ಯದ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಬಿಎಂಟಿಸಿ ಮನವಿ ಮಾಡಿದೆ.

ಬಿಎಂಟಿಸಿ ವಿರುದ್ಧ ಕನ್ನಡ ಪರ ಸಂಘಟನೆಗಳ ಆಕ್ರೋಶ

ಇತ್ತ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಪ್ರದರ್ಶಿಸಲಾಗುತ್ತಿರುವ ತಂಬಾಕು ಉತ್ಪನ್ನಗಳ ಜಾಹೀರಾತು ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಯುವ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಮೇಲೆ ಅಂಟಿಸಲಾಗಿದ್ದ ಜಾಹೀರಾತು ಸ್ಟಿಕ್ಕರ್‌ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹಾಳು ಮಾಡುತ್ತಿರುವುದಕ್ಕೆ ಸಾರಿಗೆ ಸಂಸ್ಥೆಗಳೇ ಕಾರಣ ಎಂದು ಆರೋಪಿಸಿದ ಅವರು, ವಿಮಲ್, ಆರ್‌ಎಂಡಿ, ಚೈನಿ-ಚೈನಿ ಸೇರಿದಂತೆ ಅನಾರೋಗ್ಯಕ್ಕೆ ಕಾರಣವಾಗುವ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

“ದುಡ್ಡಿನ ಆಸೆಗೆ ನಗರವನ್ನು ಹಾಳು ಮಾಡಲಾಗುತ್ತಿದೆ. ಬಸ್ ನಿಲ್ದಾಣಗಳು, ಪ್ರಮುಖ ವೃತ್ತಗಳು, ಮೆಟ್ರೋ ನಿಲ್ದಾಣಗಳೆಲ್ಲ ಜಾಹೀರಾತುಗಳಿಂದ ಕಲುಷಿತವಾಗಿವೆ. ಇಂತಹ ವಸ್ತುಗಳ ಜಾಹೀರಾತುಗಳಿಗೆ ಅನುಮತಿ ನೀಡುವುದು ತಪ್ಪು” ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಮುಂದಿನ ನಿರ್ಧಾರ ನಾಳೆ ಸಂಜೆ

ಒಟ್ಟಾರೆ, ಸಾರಿಗೆ ನೌಕರರ ಮುಷ್ಕರ, ‘ಬೆಂಗಳೂರು ಚಲೋ’ ಕಾರ್ಯಕ್ರಮ ಹಾಗೂ ಬಿಎಂಟಿಸಿ ಎಚ್ಚರಿಕೆ ನಡುವೆಯೇ ರಾಜ್ಯದ ಸಾರಿಗೆ ವಲಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ನಾಳೆ ಸಂಜೆ ನಡೆಯುವ ಜಂಟಿ ಕ್ರಿಯಾ ಸಮಿತಿಯ ಸುದ್ದಿಗೋಷ್ಠಿಯ ಬಳಿಕವೇ, ಶುಕ್ರವಾರದಿಂದ ರಾಜ್ಯದ ಸಾರಿಗೆ ವ್ಯವಸ್ಥೆಯ ಭವಿಷ್ಯ ಏನೆಂಬುದು ಸ್ಪಷ್ಟವಾಗಲಿದೆ.