ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ಮುಷ್ಕರ ಆರಂಭಿಸಲು ಸಜ್ಜಾಗಿದ್ದಾರೆ. ಈ ಕುರಿತು ಸಾರಿಗೆ ಮುಖಂಡ ಅನಂತ ಸುಬ್ಬರಾವ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಆ.04) ಸಾರಿಗೆ ನೌಕರರ ಮುಷ್ಕರ ನಾಳೇವರಗೆ ತಡೆಹಿಡಿಯುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಆದರೆ ಹೈಕೋರ್ಟ್ ಆದೇಶದ ನಡುವೆಯೂ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸುವುದು ಖಚಿತ ಎಂದು ಸಾರಿಗೆ ನೌಕರ ಮುಖಂಡ ಅನಂತ ಸುಬ್ಬರಾವ್ ಹೇಳಿದ್ದಾರೆ. ಹೀಗಾಗಿ ನಾಳೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿರುವುದಿಲ್ಲ. ಸರ್ಕಾರಿ ಸಾರಿಗೆ ಬಸ್ ಅವಲಂಬಿಸಿರುವರು ಇದೀಗ ಖಾಸಗಿ ವಾಹನಗಳ ಅವಲಂಬಿಸಬೇಕಿದೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ
ನಿಗಧಿಯಂತೆ ಆಗಸ್ಟ್ 5ರಿಂದ ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಆರಂಭಗೊಳ್ಳಲಿದೆ ಎಂದು ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ. ಹೈಕೋರ್ಟ್ ಆದೇಶದಲ್ಲಿ ಜಂಟಿ ಕ್ರಿಯಾ ಸಮಿತಿ ಸಂಘಟನೆಯನ್ನು ಪಾರ್ಟಿ ಮಾಡಿಲ್ಲ. ಹೀಗಾಗಿ ಕೋರ್ಟ್ ಆದೇಶ ನಮಗೆ ಅನ್ವಯವಾಗುವುದಿಲ್ಲ ಎಂದು ಸುಬ್ಬರಾವ್ ಹೇಳಿದ್ದಾರೆ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಬಸ್ ಸೇವೆ ಸ್ಥಗಿತ
ಸಾರಿಗೆ ನೌಕರ ಮುಷ್ಕರ ನಾಳೆ (ಆ.05) ಬೆಳಗ್ಗೆ 6 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಸುಬ್ಬರಾವ್ ಹೇಳಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಡಿಪೋಗಳಲ್ಲೇ ಬಸ್ ಸ್ಥಗಿತವಾಗಬೇಕು. ಅಧಿಕಾರಿಗಳು ಒತ್ತಡ ಹಾಕಿ ಬಸ್ ಓಡಿಸುವ ಪ್ರಯತ್ನ ಮಾಡಬೇಡಿ. ಕಾರಣ ಶಾಂತಿಯುತವಾಗಿ ಮುಷ್ಕರ ಮುಂದುವರಿಯಬೇಕು. ಇದರ ನಡುವೆ ಯಾವುದೇ ಒತ್ತಡ ಪ್ರಯತ್ನ ಬೇಡ ಎಂದು ಸುಬ್ಬರಾವ್ ಹೇಳಿದ್ದಾರೆ. ಯಾವ ಬೆದರಿಕೆ ಹಾಕಿದ್ರು ಜಗ್ಗದೇ ನೀವು ಮುಷ್ಕರದಲ್ಲಿ ಭಾಗಿಯಾಗಿ ಎಂದು ಅನಂತ್ ಸುಬ್ಬರಾವ್ ಕರೆಕೊಟ್ಟಿದ್ದಾರೆ.
ಸಾರಿಗೆ ನೌಕರರ ಜೊತೆಗಿನ ಸಂಧಾನ ವಿಫಲ
ಸಿಎಂ ಸಿದ್ದರಾಮಯ್ಯ ಸಾರಿಗೆ ನೌಕರರ ಜೊತೆ ಸಂಧಾನ ಸಭೆ ನಡೆಸಿದ್ದರು. 1800 ಕೋಟಿ ರೂಪಾಯಿ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ನೌಕರರು ಬೇಡಿಕೆ ಮುಂದಿಟ್ಟಿದ್ದರು. ಆದರೆ ಈ ಬೇಡಿಕೆಯನ್ನು ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ ಎಂದು ಸಾರಿಗೆ ನೌಕರರ ಮುಖಂಡರು ಹೇಳಿದ್ದಾರೆ. ಸರ್ಕಾರ ಸಾರಿಗೆ ನಿಗಮಗಳ ಆಡಳಿತ ವರ್ಗದವರು ಜಂಟಿ ಕ್ರಿಯಾ ಸಮಿತಿ ಜೊತೆ ಸಿಎಂ ಸಭೆ ಮಾಡಿದ್ದಾರೆ. 2 ಗಂಟೆಗಳ ಕಾಲ ಸಭೆ ನಡೆದಿದೆ. 38 ತಿಂಗಳ ಬಾಕಿ ವೇತನ ಹಾಗೂ 2024 ರಿಂದ ಹೊಸ ವೇತನ ಪರಿಷ್ಕರಣೆ ಮಾಡಬೇಕಿತ್ತು. ಜುಲೈ 4 ರಂದು ನಡೆದ ಸಭೆಯಲ್ಲಿ ನಾವು ನಿಮಗೆ ಏನು ಕೊಡಬೇಕಿಲ್ಲ ಎಂದು ಹೇಳಿದ್ದರು. ಇಷ್ಟೇ ಅಲ್ಲ 2027 ರ ವರೆಗೆ ನೀವು ಹೊಸ ವೇತನ ಪರಿಷ್ಕರಣೆ ಕಾಯಬೇಕು ಎಂದು ಸಭೆಯಲ್ಲಿ ನಮಗೆ ಹೇಳಿದ್ದಾರೆ ಎಂದು ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಪ್ರಯಾಣ ದರ ಜಾಸ್ತಿ ಮಾಡಿದರೆ, ನಿಮ್ಮ ಬೇಡಿಕೆ ಈಡೇರಿಕೆ ಮಾಡುತ್ತೇವೆ ಎಂದು ಹಿಂದಿನ ಮುಷ್ಕರ ವೇಳೆ ಭರವಸೆ ನೀಡಿದ್ದರು. ಇದೀಗ 2027 ರವರೆಗೆ ಹೊಸ ವೇತನ ಪರಿಷ್ಕರಣೆ ಆಗಲ್ಲ ಎಂದಿದ್ದಾರೆ. ಅಂತಿಮವಾಗಿ ಸಿಎಂ ಇವತ್ತು 14 ತಿಂಗಳ ಹಿಂಬಾಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. 2024 ರ ಹೊಸ ವೇತನ ಪರಿಷ್ಕರಣೆಯನ್ನು ಅಧಿವೇಶನದ ಬಳಿಕ ಮಾತನಾಡೋಣ ಎಂದಿದ್ದಾರೆ. ಇದು ನಮಗೆ ಒಪ್ಪಿಗೆ ಇಲ್ಲ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
