ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರವು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ವಿವಿಧ ಬಸ್ ಮಾಲೀಕರ ಸಂಘಗಳ ಪ್ರತಿನಿಧಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಿದೆ.
ಬೆಂಗಳೂರು (ಆ.01): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಆನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು/ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಖಾಸಗಿ ಬಸ್ ಮಾಲೀಕರಿಗೆ ಕೈಜೋಡಿಸುವಂತೆ ಮನವಿ ಮಾಡುವ ಸಲುವಾಗಿ ನಾಳೆ ಸಭೆಯೊಂದನ್ನು ಕರೆದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಆನಿರ್ದಿಷ್ಟಾವಧಿ ಮುಷ್ಕರದ ಹಿನ್ನಲೆಯಲ್ಲಿ ಸಾರ್ವಜನಿಕರ/ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಆಯುಕ್ತರು ನಾಳೆ ಶನಿವಾರ (02-08-2025) ಮಧ್ಯಾಹ್ನ 12.00 ಗಂಟೆಗೆ ಸಾರಿಗೆ ಆಯುಕ್ತರ ಕಛೇರಿಯಲ್ಲಿ ಸಭೆಯನ್ನು ಆಯೋಜಿಸಿದ್ದಾರೆ. ಈ ಸಭೆಗೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಖಾಸಗಿ ಬಸ್ ಮಾಲೀಕರು, ಖಾಸಗಿ ಪ್ರವಾಸಿ ಬಸ್‌ಗಳ ಮಾಲೀಕರು, ಖಾಸಗಿ ಬಸ್ ಆಪರೇಟರ್ಸ್ ಸಂಘಟನೆಗಳ ಸದಸ್ಯರನ್ನು ಖಾಸಗಿ ಬಸ್‌ಗಳ ಮಾಲೀಕರನ್ನು ಸದರಿ ಸಭೆಗೆ ಹಾಜರಾಗಲು ಸೂಚಿಸಿದೆ.
ಸರ್ಕಾರದಿಂದ ಯಾರಾರಿಗೆ ಆಹ್ವಾನ ಹೋಗಿದೆ:
- 1. ಸದಾನಂದ ಚಾತ್ರಾ, ಕರ್ನಾಟಕ ಸ್ಟೇಟ್ ಟೂರಿಸ್ಟ್ ಬಸ್ ಅಪರೇಟರ್ ಅಸೋಸಿಯೇಷನ್
- 2. ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟ (ರಿ), ಬೆಂಗಳೂರು.
- 3. ರಾಜವರ್ಮ ಬಲ್ಲಾಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ (ರಿ), ಮಂಗಳೂರು.
- 4. ಸುರೇಶ ಕುಮಾರ್ ಶರ್ಮ, ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಟೂರಿಸ್ಟ್ ಬಸ್ ಅಪರೇಟರ್
- 5. ಸುಬ್ಬರಾವ್, ಸ್ಟೇಟ್ ಬಸ್ ಅಪರೇಟರ್ ಅಸೋಸಿಯೇಷನ್, ಬೆಂಗಳೂರು.
- 6. ಕೆ.ವಜ್ರೇಗೌಡ, ಅಧ್ಯಕ್ಷರು, ಮೈಸೂರು, ಜಿಲ್ಲಾ ಬಸ್ ಓನರ್ ಅಸೋಸಿಯೇಷನ್, ಮೈಸೂರು.
- 7. ನವೀನ್, ಮಾಲೀಕರು, Sam Tours & Travels, Bangalore
- 8. ಶಂಕರ್, ಮಾಲೀಕರು Megha Tours & Travels, Bangalore
- 9. ಎಸ್ ನಟರಾಜ್ ಶರ್ಮ, ಅಧ್ಯಕ್ಷರು, ಕರ್ನಾಟಕ ರಾಜ್ಯ ಬಸ್ ಆಪರೇಟರ್ಸ್ ಅಸೋಸಿಯೇಷನ್, ಬೆಂಗಳೂರು
- 10. ರಾಧಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಅಪರೇಟರ್ ಅಸೋಸಿಯೇಷನ್
- 11. ಭೈರವ ಸಿದ್ದರಾಮಯ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ, ಬೆಂಗಳೂರು
- ಇನ್ನೂ ಹಲವಾರು ಸಂಘಟನೆಗಳು ಮತ್ತು ಮಾಲೀಕರಿಗೆ ಸಭೆಗೆ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಳೆದ 2020ರ ಜನವರಿ 1ರಿಂದ ಸಾರಿಗೆ ನೌಕರರ ವೇತನ ಶೇ 15ರಷ್ಟು ಹೆಚ್ಚಳವಾಗಿತ್ತು. ಆದರೆ, ವೇತನ ಪರಿಷ್ಕರಣೆ ನಂತರದ 38 ತಿಂಗಳ ಹಣವನ್ನು ಹಿಂಬಾಕಿ ಉಳಿಸಿಕೊಂಡಿದ್ದು, ಅದನ್ನು ಬಿಡುಗಡೆ ಮಾಡಬೇಕು. ಜೊತೆಗೆ, 2023ರ ಡಿಸೆಂಬರ್ 31ರಂದು ಇದ್ದ ಮೂಲ ವೇತನದಲ್ಲಿ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ, 2024ರ ಜನವರಿ 1ರಿಂದ ಅನ್ವಯವಾಗುವಂತೆ ಶೇ 25ರಷ್ಟು ವೇತನ ಹೆಚ್ಚಿಸಬೇಕು. ಕಳೆದ ಏಪ್ರಿಲ್ ತಿಂಗಳಲ್ಲಿ ಸರ್ಕಾರದಿಂದ ನೀಡಲಾಗಿದ್ದ ಭರವಸೆಗಳನ್ನು ಈಗಲೇ ಈಡೇರಿಸಬೇಕು. ಈಬಾರಿಯ ಮುಷ್ಕರ ಕೇವಲ ಭರವಸೆಗಳಿಗೆ ಬಗ್ಗೊಲ್ಲ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಹಿಂದೆ ಸರಿಯಲ್ಲ ಎಂದು ನೌಕರರು ಆಗ್ರಹ ಮಾಡಿದ್ದಾರೆ.
ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ ಈಗಾಗಲೇ ಹಲವು ಸಾರಿಗೆ ನೌಕರರ ಸಂಘಟನೆಗಳು ವಿಭಿನ್ನವಾಗಿ ಮುಷ್ಕರವನ್ನು ಆರಂಭಿಸಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕಳೆದ ಬುಧವಾರ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಇನ್ನು ಆ.5ರಿಂದ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ಸೇರಿ ಬೃಹತ್ ಮಟ್ಟದಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ.
