ಬೆಂಗಳೂರು(ಮೇ.13):  ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸಿರುವ ಸಂಬಂಧ ಕೆಲವು ನೌಕರರ ವಿರುದ್ಧ ಹೊರಡಿಸಿದ್ದ ವರ್ಗಾವಣೆ ಮತ್ತು ಅಮಾನತ್ತು ಆದೇಶಗಳನ್ನು ಹಿಂಪಡೆದಿರುವುದಾಗಿ ಸಾರಿಗೆ ನಿಗಮಗಳ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಸಾರಿಗೆ ನೌಕರರ ಮುಷ್ಕರ ತಡೆಯಲು ಮತ್ತು ಮುಷ್ಕರದಿಂದ ಉಂಟಾಗಿರುವ ನಷ್ಟವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸ್ವಯಂ ಸೇವಾ ಸಂಸ್ಥೆ, ವಕೀಲ ನಟರಾಜ್‌ ಶರ್ಮಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್‌.ಓಕ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ಸಾರಿಗೆ ಇಲಾಖೆಗೆ 4000 ಕೋಟಿ ನಷ್ಟ: ಡಿಸಿಎಂ ಸವದಿ ...

ಈ ವೇಳೆ ನಿಗಮಗಳ ಪರ ವಾದ ಮಂಡಿಸಿದ ವಕೀಲರಾದ ಎಚ್‌.ಆರ್‌.ರೇಣುಕಾ, ಜ್ಞಾಪನಾಪತ್ರ ಸಲ್ಲಿಸಿ ಹೈಕೋರ್ಟ್‌ ಸೂಚನೆ ಮೇರೆಗೆ ಮೇ 3 ರಂದು ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಸಭೆ ನಡೆಸಲಾಗಿದೆ. ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲ ಬೇಡಿಕೆಗಳನ್ನು ಕೈ ಬಿಡಲಾಗಿದೆ. ಕೆಲವು ನೌಕರರ ವರ್ಗಾವಣೆ ಆದೇಶ ಹಿಂಪಡೆದಿದ್ದು, ಬಹುತೇಕರ ಅಮಾನತು ಆದೇಶ ಹಿಂಪಡೆಯಲಾಗಿದೆ ಎಂದು ವಿವರಿಸಿದರು. ನಿಗಮ ಸಲ್ಲಿಸಿರುವ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಪ್ರತಿಯನ್ನು ನೌಕರರ ಒಕ್ಕೂಟಕ್ಕೆ ಒದಗಿಸುವಂತೆ ಸೂಚಿಸಿ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದೆ

ಈಗ ಕೋಡಿಹಳ್ಳಿ ವಿರುದ್ಧವೇ ತಿರುಗಿ ಬಿದ್ದ ಸಾರಿಗೆ ನೌಕರರು ...

ಕೆಎಸ್‌ಆರ್‌ಟಿಸಿಯಲ್ಲಿ 143 ನೌಕರರು, ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ 60 ನೌಕರರು, ಎನ್‌ಇಕೆಆರ್‌ಟಿಸಿ 63 ನೌಕರರು ಮತ್ತು ಬಿಎಂಟಿಸಿಯಲ್ಲಿ 2,494 ನೌಕರರನ್ನು ಅಮಾನತ್ತು ಮಾಡಲಾಗಿತ್ತು. ಅವರುಗಳಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ 11 ನೌಕರರು, ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ ಒಬ್ಬ ನೌಕರ, ಎನ್‌ಇಕೆಆರ್‌ಟಿಸಿಯಲ್ಲಿ 52 ನೌಕರರು ಮತ್ತು ಬಿಎಂಟಿಸಿಯಲ್ಲಿ 848 ನೌಕರರ ಅಮಾನತ್ತು ಆದೇಶ ಹಿಂಪಡೆಯಲಾಗಿದೆ. ಇನ್ನುಳಿದ ನೌಕರರ ವಿರುದ್ಧ ಕಾರಣಾಂತರಗಳಿಂದ ಅಮಾನತ್ತು ಆದೇಶ ಹಿಂಪಡೆಯಲಾಗಿಲ್ಲ ಎಂದು ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona