Asianet Suvarna News Asianet Suvarna News

ಸಾರಿಗೆ ಮುಷ್ಕರ: ನಾಲ್ಕೂ ನಿಗಮಗಳ ಬಸ್‌ಗಳ ಸಂಚಾರ ಬಂದ್!

6ನೇ ವೇತನ ಜಾರಿಗೆ ಸಾರಿಗೆ ನೌಕರರಿಂದ ಧರಣಿ| ಬಿಎಂಟಿಸಿ, ಕೆಎಸ್ಸಾರ್ಟಿಸಿ ನಿಲ್ದಾಣ, ಡಿಪೋ, ಕಾರ್ಯಾಗಾರಗಳಲ್ಲಿ ನೌಕರರ ಮುಷ್ಕರ| ಬೇಡಿಕೆ ಈಡೇರದಿದ್ದರೆ ಬೀದಿಗೆ ಇಳಿತ್ತೀವಿ: ಚಂದ್ರಶೇಖರ್‌

Karnataka Staff firm on strike public transport may be hit from Wednesday pod
Author
Bangalore, First Published Apr 6, 2021, 7:19 AM IST

ಬೆಂಗಳೂರು(ಏ.06): ಆರನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಮುಷ್ಕರ ಪೂರ್ವ ಪ್ರತಿಭಟನಾ ಸಪ್ತಾಹದ ಐದನೇ ದಿನವಾದ ಸೋಮವಾರ ಸಾರಿಗೆ ನೌಕರರು ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ, ಶಾಂತಿನಗರ, ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣ, ಯಶವಂತಪುರ, ವಿಜಯನಗರ, ಬನಶಂಕರಿ, ಕೆ.ಆರ್‌.ಪುರಂ, ಮೈಸೂರು ರಸ್ತೆಯ ಬಸ್‌ ನಿಲ್ದಾಣ, ಕೆಂಗೇರಿ ಬಸ್‌ ನಿಲ್ದಾಣ ಸೇರಿದಂತೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ವಿವಿಧ ಬಸ್‌ ನಿಲ್ದಾಣಗಳು, ಡಿಪೋಗಳು, ಕಾರ್ಯಾಗಾರಗಳ ಬಳಿ ಧರಣಿ ನಡೆಸಿ ಏ.7ರ ಸಾರಿಗೆ ಮುಷ್ಕರದ ಕರಪತ್ರ ಹಂಚಿದರು.

ಮೆಜೆಸ್ಟಿಕ್‌ನಲ್ಲಿ ನಡೆದ ಧರಣಿ ವೇಳೆ ಮಾತನಾಡಿದ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್‌.ಚಂದ್ರಶೇಖರ್‌, ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಲೇಬೇಕು. ಇಲ್ಲವಾದರೆ, ಈ ಬಾರಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು 10 ಲಕ್ಷ ಮಂದಿ ಬೀದಿಗೆ ಇಳಿದು ಹೋರಾಟ ಮಾಡುವುದು ನಿಶ್ಚಿತ ಎಂದು ಹೇಳಿದರು.

ಹೆದರಿಕೆ-ಬೆದರಿಕೆಗೆ ಬಗ್ಗಲ್ಲ

ನಮ್ಮದು ದುಡಿಯುವ ವರ್ಗ. ವೇತನ ವಿಚಾರದಲ್ಲಿ ನಮಗೆ ಶಾಶ್ವತ ಪರಿಹಾರಬೇಕು. ನಾಲ್ಕು ವರ್ಷಕೊಮ್ಮೆ ಮುಷ್ಕರಕ್ಕೆ ದಾರಿ ಮಾಡಿಕೊಡುವುದು ಸರಿಯಲ್ಲ. ಈ ಬಾರಿ ಸರ್ಕಾರದ ಯಾವುದೇ ಹೆದರಿಕೆ, ಬೆದರಿಕೆ, ಒತ್ತಡಕ್ಕೆ ಮಣಿಯುವುದಿಲ್ಲ. ಪ್ರಾಣ ಕೊಡುತ್ತೇವೆ ಹೊರತು ಆರನೇ ವೇತನ ಆಯೋಗ ಬಿಡುವುದಿಲ್ಲ. ಸರ್ಕಾರ ನಮ್ಮನ್ನು ಜೈಲಿಗಟ್ಟಿದರೂ ಹೆದರುವುದಿಲ್ಲ. ರಾಜ್ಯಾದ್ಯಂತ ಜೈಲ್‌ ಭರೋ ಚಳವಳಿ ಮಾಡುತ್ತೇವೆ. ಆರನೇ ವೇತನ ಆಯೋಗ ಜಾರಿ ಮಾಡದಿದ್ದರೆ ಏ.7ರಿಂದ ಸಾರಿಗೆ ಮುಷ್ಕರ ಆರಂಭಿಸುವುದು ಖಚಿತ. ಇದರಿಂದ ಉಂಟಾಗುವ ಆಗು-ಹೋಗುಗಳಿಗೆ ಸರ್ಕಾರವೇ ನೆರ ಹೊಣೆ ಎಂದು ಹೇಳಿದರು.

ಮುಷ್ಕರ ಪೂರ್ವ ಪ್ರತಿಭಟನಾ ಸಪ್ತಾಹದಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಕಪ್ಪು ಪಟ್ಟಿಧರಿಸಿ ಕರ್ತವ್ಯ ನಿರ್ವಹಣೆ, ಬಜ್ಜಿ-ಬೋಂಡಾ ತಯಾರಿಸಿ ಮಾರಾಟ, ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರ ಪ್ರದರ್ಶನ, ಕರಪತ್ರ ಹಂಚಿಕೆ ಚಳವಳಿ ಮಾಡಿದ್ದರು.

ನಾಳೆಯಿಂದ ಮುಷ್ಕರ

ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ತಮ್ಮ ಒಂಬತ್ತು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಮುಷ್ಕರ ನೋಟಿಸ್‌ ಪ್ರಕಾರ ಏ.7ರಿಂದ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಆರಂಭಿಸಲಿದ್ದಾರೆ.

Follow Us:
Download App:
  • android
  • ios