ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಕುರಿತು ಇಂದು ಸಂಜೆ ಮಹತ್ವದ ಸಭೆ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್, ಸಿಎಂ, ಡಿಸಿಎಂ ಮತ್ತು ವಿಪಕ್ಷ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು (ಮೇ 25): ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಗೌರವವನ್ನು ಕೊಡದೇ ಸ್ಪೀಕರ್ ಪೀಠಕ್ಕೆ ಬಂದು ಮುತ್ತಿಗೆ ಹಾಕಿ ಪೇಪರ್‌ಗಳನ್ನು ಹರಿದು ತೂರಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ಅವರು 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಮಾ.21ರಂದು ಅಮಾನತುಗೊಂಡ ಶಾಸಕರನ್ನು ಅಧಿವೇಶನ ಕೊಠಡಿಯಿಂದ ಮಾರ್ಷಲ್‌ಗಳು ಬಲವಂತವಾಗಿ ಎತ್ತಿಕೊಂಡು ಹೋಗಿ ಹೊರಗೆ ಹಾಕಿದ್ದರು. ಇದೀಗ ಶಾಸಕರು ರಾಜ್ಯಪಾಲರು ಹಾಗೂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲಿಯೇ ಇದೀ ರಾಜ್ಯ ಸರ್ಕಾರದಿಂದ ಪುನಃ ಶಾಸಕರ ಅಮಾನತು ಹಿಂಪಡೆಯುವ ವಿಚಾರದ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರು ಇಂದು ಸಂಜೆ ಮಹತ್ವದ ಸಭೆಯನ್ನು ಕರೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, ಅಧಿವೇಶನ ನಡೆಯುವ ಸಂಧರ್ಭದಲ್ಲಿ ಸಂವಿಧಾನ ಪೀಠಕ್ಕೆ ಅಗೌರವ ತೋರಿಸಿದ್ದರು. ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೆವು. ಈ ಮಧ್ಯದಲ್ಲಿ ವಿಪಕ್ಷ ನಾಯಕರು, ನಾಯರ ಬೇಡಿಕೆ ಇತ್ತು. ಚರ್ಚೆ ಸಂಧರ್ಭದಲ್ಲಿ ಘಟನೆ ನಡೆದಿದೆ ಎಂದಿದ್ದರು. ಅಮಾನತ್ತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಬೇಕು ಚರ್ಚೆ ಬಳಿಕ ನಿರ್ಧಾರ ಆಗಲಿದೆ. ಸಿಎಂ, ವಿಪಕ್ಷ ನಾಯಕ ಎಲ್ಲರೂ ಸಭೆಯಲ್ಲಿ ಇರುತ್ತಾರೆ. ಅಂದು ಆದ ಘಟನೆಯನ್ನ ವಿಧಾನಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಲಾಯಿತು. ಬಹುಮತ ಇರೋ ಶಾಸಕರ ನಿರ್ಣಯದ ಮೇಲೆ ತೆಗೆದುಕೊಂಡ ಕ್ರಮ ಅದು. ಅಮಾನತು ಆದೇಶದ 6 ತಿಂಗಳ ಪೈಕಿ ಈಗಾಗಲೇ ಎರಡು ತಿಂಗಳು ಮುಗಿದು ಹೋಗಿದೆ. ಶಾಸಕ ಮಿತ್ರರು ನಮ್ಮವರೇ, ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇಲ್ಲಿ ಬಿಜೆಪಿ, ಕಾಂಗ್ರೆಸ್ ಅಂತಲ್ಲ. ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಯಾರಾದರೂ ಕ್ರಮ ಆಗಲಿದೆ ಎಂದು ತಿಳಿಸಿದರು.
ಬಿಜೆಪಿಯ 18 ಶಾಸಕರು ಅಮಾನತು ವಾಪಸ್ ಪಡೆಯುವ ವಿಚಾರದ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾವು ಸಹಾನುಭೂತಿಯಿಂದ ಇದ್ದೇವೆ. ಸ್ಪೀಕರ್ ಅವರು ಸಭೆಗೆ ನಮ್ಮನ್ನೆಲ್ಲಾ ಕರೆದಿದ್ದಾರೆ. ಮೀಟಿಂಗ್‌ನಲ್ಲಿ ಏನ್ ಚರ್ಚೆ ಆಗುತ್ತೋ ಗೊತ್ತಿಲ್ಲ. ಅವರು ಏನ್ ಪ್ರಸ್ತಾವನೆ ಇಟ್ಟಿದ್ದಾರೋ ನೋಡಬೇಕು. ವಿಪಕ್ಷ ನಾಯಕರೆಲ್ಲಾ ಹೋಗಿ ಸ್ಪೀಕರ್ ಭೇಟಿ ಮಾಡಿದ್ದಾರೆ. ನಾವು ಕೂಡ ಸಹಾನುಭೂತಿಯಿಂದ ಇದ್ದೀವಿ. ಅಮಾನತು ವಿಚಾರದಲ್ಲಿ ಸರ್ಕಾರ ಭಾಗಿ ಆಗಿಲ್ಲ. ಸ್ಪೀಕರ್ ಏನ್ ತೀರ್ಮಾನ ತೆಗೆದುಕೊಳ್ತಾರೋ ನೋಡೋಣ ಎಂದು ತಿಳಿಸಿದರು.
ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಅಮಾನತು ಆಗಿರುವ ಶಾಸಕರ ವಿಚಾರವಾಗಿ ಇಂದು ಸಂಜೆ ಸ್ಪೀಕರ್ ಕಚೇರಿಯಲ್ಲಿ ಸಭೆ ಸೇರುತ್ತಿದ್ದೇವೆ. ಸಿಎಂ, ಡಿಸಿಎಂ, ನಾನು, ವಿಪಕ್ಷ ನಾಯಕರ ಜೊತೆ ಸಭೆ ನಡೆಯಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಕೂಡ ವಿಚಾರ ಚರ್ಚೆಯಾಗಿದೆ. ಆ ಅಧಿಕಾರದ ಹಿನ್ನೆಲೆಯಲ್ಲಿ ನಾವು ಇಂದು ತೀರ್ಮಾನ ಮಾಡಲಿದ್ದೇವೆ. ಮುಜರಾಯಿ ಇಲಾಖೆಯ ಬಿಲ್ ರಾಷ್ಟ್ರಪತಿ ಪರಾಮರ್ಶೆಗೆ ಕಳಿಸಿದ ವಿಚಾರದ ಬಗ್ಗೆ ಮಾತನಾಡಿ, ರಾಷ್ಟ್ರಪತಿಗೆ ಕಳಿಸೋ ಬಗ್ಗೆ ತೀರ್ಮಾನ ಮಾಡಿದ್ದಾರೆ. ಸೋಮವಾರ ಈ ಬಗ್ಗೆ ಏನು ಮಾಡಬೇಕು ಅಂತ ಚರ್ಚೆ ಮಾಡಲಿದ್ದೇವೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನ ಸಭೆಗೆ ಕರೆದಿದ್ದೇವೆ. ಅದೇ ಸಂಧರ್ಭದಲ್ಲಿ ಸಂಬಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಇದು ಬಹಳಷ್ಟು ಚರ್ಚೆ ಮಾಡಬೇಕಾದ ವಿಚಾರ. ಹಾಗಾಗಿ ಇದರ ಬಗ್ಗೆ ಏನನ್ನೂ ಹೇಳೋದಿಲ್ಲ. ಅನೇಕ ಬಿಲ್ ಪಾಸ್ ಆಗಿ ಬಂದಿವೆ. ಈಗ ಆ ರೀತಿ ವಿರೋಧಿಸೋದು ಏನೂ ಇಲ್ಲ ಎಂದು ತಿಳಿಸಿದರು.
