ಬೆಂಗಳೂರು(ಜೂ.17): ಆಹಾರ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ ಹಿನ್ನೆಲೆಯಲ್ಲಿ ವಿಕಾಸಸೌಧದ ಮೊದಲ ಮಹಡಿಯ ಒಂಬತ್ತು ಕೊಠಡಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕಿತ ಮಹಿಳೆ ಓಡಾಡಿದ ವಿಧಾನಸೌಧ ಮತ್ತು ವಿಕಾಸಸೌಧದ ಇತರ ಪ್ರಮುಖ ಕಚೇರಿಗಳ ಸಿಬ್ಬಂದಿಗಳಿಗೂ ಕೊರೋನಾ ಭೀತಿ ಎದುರಿಸುವಂತಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಕಟ್ಟಡಗಳನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗಿದೆ.

ಸೋಮವಾರ ವಿಕಾಸಸೌಧದ ಆಹಾರ ಇಲಾಖೆಯ 30 ವಯಸ್ಸಿನ ಮಹಿಳಾ ಸಿಬ್ಬಂದಿ (ಸ್ಟೆನೋಗ್ರಾಫರ್‌)ಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಮಹಿಳೆಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ಅವರ ವರದಿ ಪಾಸಿಟಿವ್‌ ಬಂದಿದ್ದು, ವಿಕಾಸಸೌಧ ಮತ್ತು ವಿಧಾನಸೌಧದ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.

ಮುಂಜಾಗ್ರತಾ ಕ್ರಮವಾಗಿ ಸೋಂಕಿತ ಮಹಿಳಾ ಸಿಬ್ಬಂದಿ ಓಡಾಡಿದ್ದ ವಿಕಾಸಸೌಧದ ಕೊಠಡಿ ಸಂಖ್ಯೆ 34 ಮತ್ತು ಅರಣ್ಯ ಇಲಾಖೆ ಸಚಿವ ಆನಂದ್‌ಸಿಂಗ್‌ ಅವರ ಕೊಠಡಿಯೂ ಸೇರಿದಂತೆ ಅಕ್ಕಪಕ್ಕದ ಒಂಬತ್ತು ಕೊಠಡಿಗಳನ್ನು ಮುಂದಿನ 72 ಗಂಟೆಗಳ ಕಾಲ ಸೀಲ್‌ಡೌನ್‌ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಅಂತೆಯೇ ಸೋಂಕಿತ ಮಹಿಳೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಸೋಂಕು ಶಂಕಿತ ಮಹಿಳೆ ವಿಧಾನಸೌಧಕ್ಕೂ ಆಗಮಿಸಿದ್ದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಕಾರ್ಯನಿರ್ವಹಿಸಿದ್ದ ಆಹಾರ ಇಲಾಖೆ ಕಚೇರಿ ಸೇರಿದಂತೆ ಕೊರೋನಾ ಸೋಂಕಿತೆ ಓಡಾಡಿದ ಕೆಲ ಕಚೇರಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಡ್ಡಾಯ ಕೋವಿಡ್‌ ತಪಾಸಣೆ ಮಾಡಿ:

ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಾವಿರಾರು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಇಲ್ಲಿನ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ಬಂದಿರುವುದರಿಂದ ಸಹಜವಾಗಿಯೆ ಎಲ್ಲರಲ್ಲಿ ಆತಂಕ ಮನೆಮಾಡಿದೆ. ಆದ್ದರಿಂದ ಸೋಂಕಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ಆಹಾರ ಇಲಾಖೆಯ ಎಲ್ಲ ಸಿಬ್ಬಂದಿಯನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ವಿಧಾನಸೌಧದಲ್ಲಿ ಸ್ಯಾನಿಟೈಸರ್‌ ಟನಲ್‌ ಅಳವಡಿಸಬೇಕು. ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶವನ್ನು ಕೂಡ ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿಯವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿಕಾಸಸೌಧದ ಆಹಾರ ಇಲಾಖೆ ಸಿಬ್ಬಂದಿಗೆ ಕೊರೋನಾ ಸೋಂಕು ಇರುವುದು ತಿಳಿಯಿತು. ಅವರು ಹೊರಗೆ ಎಲ್ಲೋ ಹೋಗಿದ್ದ ಸಂದರ್ಭದಲ್ಲಿ ಸೋಂಕು ತಗುಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ತರಿಸಿಕೊಂಡು ವಿವರಣೆ ನೀಡುತ್ತೇನೆ.

- ಡಾ.ಕೆ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ