Bengaluru population survey report: ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶೇ.85.89ರಷ್ಟು ಪ್ರಗತಿ ಸಾಧಿಸಿದೆ. ಆದರೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕೇವಲ ಶೇ.19.62ರಷ್ಟು ಮಾತ್ರ ಪೂರ್ಣಗೊಂಡಿದೆ..
ಬೆಂಗಳೂರು (ಅ.11): ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ (ಬೆಂಗಳೂರು) ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರ 2.09 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ನಡೆಸಿದ್ದು, ಶೇ.85.89ರಷ್ಟು ಪ್ರಗತಿ ಸಾಧಿಸಲಾಗಿದೆ.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ 1.47 ಕೋಟಿ ಕುಟುಂಬಗಳ ಸಮೀಕ್ಷೆ ಗುರಿ ನಿಗದಿಪಡಿಸಲಾಗಿತ್ತು. ಅ.7ಕ್ಕೆ ಅಂತಿಮ ಗಡುವು ವಿಧಿಸಿದ್ದರೂ ಶೇ.80ರಷ್ಟು ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದರಿಂದ ಗಡುವನ್ನು ಅ.18ರವರೆಗೆ ವಿಸ್ತರಿಸಲಾಗಿದೆ.
ಗುರುವಾರದವರೆಗೆ 1,25,14,685 ಕುಟುಂಬಗಳ ಸಮೀಕ್ಷೆ ಮುಗಿದಿದ್ದು, ಶುಕ್ರವಾರ 2,09,824 ಮನೆಗಳ ಸಮೀಕ್ಷೆ ನಡೆಸಲಾಗಿದೆ. ಈ ಮೂಲಕ ಒಟ್ಟು 1,27,24,509 ಕುಟುಂಬಗಳ ಸಮೀಕ್ಷೆ (ಶೇ.85.89) ಪೂರ್ಣಗೊಂಡಿದೆ. ಒಟ್ಟು ಜನಸಂಖ್ಯೆಯಲ್ಲಿ 4.73 ಕೋಟಿಯಷ್ಟು ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ಇದನ್ನೂ ಓದಿ: ಗಣತಿಯಿಂದಾಗಿ ನಗರದ 30 ಸಾವಿರ ಸರ್ಕಾರಿ ನೌಕರರಿಗೆ ಸಂಬಳವೇ ಆಗಿಲ್ಲ
ಜಿಬಿಎ ವ್ಯಾಪ್ತಿಯಲ್ಲಿ ಶೇ.19.62 ಪ್ರಗತಿ:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 39.82 ಲಕ್ಷ ಕುಟುಂಬ ಸಮೀಕ್ಷೆಯ ಗುರಿ ನಿಗದಿಪಡಿಸಿದ್ದು, ಶುಕ್ರವಾರ 1.47 ಲಕ್ಷ ಕುಟುಂಬಗಳ ಸಮೀಕ್ಷೆ ಮುಗಿದಿದೆ. ಈ ಮೂಲಕ ಒಟ್ಟು 9.15 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ.19.62 ರಷ್ಟು ಪ್ರಗತಿ ಸಾಧಿಸಿದೆ.
