ಪ್ರವಾಸಿಗರ ಸ್ವರ್ಗವಾದ ಧುಮ್ಮಿಕ್ಕುವ ಸಿರಿಮನೆ ಫಾಲ್ಸ್: ಒನ್‌ಡೇ ಟ್ರಿಪ್‌ಗೆ ಬೆಸ್ಟ್ ಪ್ಲೇಸ್
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಿನಿ ಜೋಗವೆಂದೇ ಪ್ರಸಿದ್ಧಿಯಾದ ಸಿರಿಮನೆ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರ ಸ್ವರ್ಗವಾಗಿ ಮಾರ್ಪಾಡಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.09): ರಾಜ್ಯದಲ್ಲಿ ಅತಿಹೆಚ್ಚು ಜಲಪಾತಗಳನ್ನು ಹೊಂದಿರುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಿನಿ ಜೋಗವೆಂದೇ ಪ್ರಸಿದ್ಧಿಯಾದ ಸಿರಿಮನೆ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಹಚ್ಚ ಹಸಿರು ಕಾನನದ ನಡುವೆ ಭೋರ್ಗರೆವ ಸದ್ದು ಎಂತಹ ಮನಸ್ಸನ್ನೂ ಮಂತ್ರಮುಗ್ದಗೊಳಿಸಿ ತನ್ನತ್ತ ಆಕರ್ಷಿಸುವುದು ಗ್ಯಾರಂಟಿಯಾಗಿದೆ. ಇನ್ನು ಒನ್‌ಡೇ ಟ್ರಿಪ್‌ಗೆ ಅತ್ಯಂತ ಸೂಕ್ತ ಪ್ರವಾಸಿ ತಾಣವೂ ಆಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಜಾಡು ಹಿಡಿದು ಹೊರಟಲ್ಲೆಲ್ಲಾ ಒಂದೊಂದು ಸುಮಧುರ ತಾಣಗಳು. ಆ ಮನಮೋಹಕ ತಾಣಗಳಲ್ಲಿ ಜಲಪಾತಗಳದ್ದೇ ಸಿಂಹಪಾಲು ಆಗಿದೆ. ಮಲೆನಾಡಲ್ಲಿ ನೀವು ದಾರಿತಪ್ಪಿ ಹೋದ್ರು ಮನೋರಂಜನೆಗೆ ಒಂದು ಜಲಪಾತ ಸಿಗೋದು ಫಿಕ್ಸ್. ಅದ್ರಲ್ಲೂ ಮಳೆಗಾಲದಲ್ಲಿ ಸುರಿದ ಮಳೆಯಿಂದ ಕಣ್ಣು ಹಾಯಿಸಿದಲೆಲ್ಲಾ ಜಲಪಾತಗಳದ್ದೇ ಸೊಬಗು ಮತ್ತು ವೈಭವ ಆಗಿರುತ್ತದೆ. ಅವುಗಳು ನೋಡುಗನ ಮನಸ್ಸಿನ ಭಾವನೆಗೆ ಮತ್ತಷ್ಟು ಜೀವ ತುಂಬುತ್ತವೆ. ಅಂತಹ ತಾಣಗಳಲ್ಲಿ ಸಿರಿಮನೆ ಜಲಪಾತವೂ ಒಂದು. ಇದನ್ನ ಪ್ರವಾಸಿಗರು ಮಿನಿ ಜೋಗ ಎಂದೇ ಕರೆಯುತ್ತಾರೆ.
Ooty To Mysore: ಬೆಂಗಳೂರಿನಿಂದ ವೀಕೆಂಡ್ ಟ್ರಿಪ್ ಹೋಗೋಕೆ ಬೆಸ್ಟ್ ಜಾಗಗಳಿವು
ದಟ್ಟಕಾನನದ ಮಧ್ಯೆ ಧುಮ್ಮಿಕ್ತಿರೋ ಸಿರಿಮನೆ ಫಾಲ್ಸ್ : ಬೃಹದಾಕಾರದ ಬಂಡೆಗಳ ನಡುವೆ ಭೋರ್ಗರೆತದ ಶಬ್ದ, ಹೊಲ್ನೊರೆಯಂತೆ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯ, ಜೊತೆಗೆ ಸುತ್ತಲೂ ಹಚ್ಚಹಸಿರಿನ ಕಾನನ. ದಟ್ಟಕಾನನದ ಮಧ್ಯೆ ಧುಮ್ಮುಕುವ ಈ ಜಲಪಾತದದ ಹೆಸರು ಸಿರಿಮನೆ ಫಾಲ್ಸ್. ಸುಮಾರು 90 ರಿಂದ 100 ಅಡಿ ಎತ್ತರದಿಂದ ಬೀಳೋ ಈ ಗಂಗಾಮಾತೆಗೆ ಪ್ರವಾಸಿಗರು ಮಿನಿ ಜೋಗ ಎಂದೂ ಹೆಸರಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರೋ ಈ ಫಾಲ್ಸ್‌ಗೆ ಶೃಂಗೇರಿಯಿಂದ ಕೇವಲ 18 ಕಿ.ಮೀ. ದೂರವಿದೆ. ಒಮ್ಮೆ ಈ ಸ್ಥಳಕ್ಕೆ ಬಂದು ನೋಡಿದರೆ, ಎಷ್ಟೇ ದೂರದಿಂದ ಬಂದಿದ್ದರೂ ಆಯಾಸವೆಲ್ಲಾ ಮಂಗಮಾಯ ಆಗುತ್ತದೆ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸೋ ಶಕ್ತಿ ಈ ಜಲಪಾತಕ್ಕಿದೆ.
100 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲ್ನೊರೆ ನೀರು: ಕಪ್ಪನೆಯ ಬಂಡೆಗಳ ಮಧ್ಯೆ ಹೊಲ್ನೊರೆಯಂತೆ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನ ವರ್ಣಿಸಲು ಪದಗಳೇ ಸಾಲದು. ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜಾಸ್ತಿಯಾಗ್ತಿರೋದ್ರಿಂದ ಈ ಜಲಪಾತಕ್ಕೆ ಡಬಲ್ ಜೀವ ಬಂದಿದೆ. ಅಂದಾಜು 100 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕಿ ಹರಿಯೋ ಈ ಜಲಪಾತ ಪ್ರವಾಸಿಗರ ಹಾಟ್ಸ್ಪಾಟ್. ಸರ್ಕಾರವೂ ಸಿರಿಮನೆ ಜಲಪಾತವನ್ನು ಸ್ವಲ್ಪಮಟ್ಟಿಗೆ ಅಭಿವೃದ್ದಿಗೊಳಿಸಿದೆ. ಬಂದತಂಹ ಪ್ರವಾಸಿಗರು ನಿಂತು ನೋಡುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಜೀವಕ್ಕೆ ಆತಂಕವಿರದ ಸುರಕ್ಷಿತ ಜಲಪಾತ: ಚಿಕ್ಕಮಗಳೂರಿನ ಪ್ರವಾಸಿಗರಿಗೆ ಚಿರಪರಿಚಿತವಾಗಿದೆ ಸಿರಿಮನೆ ಫಾಲ್ಸ್ . ಜಲಪಾತದ ಬಗ್ಗೆ ತಿಳಿದಿರೋ ಪ್ರವಾಸಿಗರು ವಾರಾಂತ್ಯಗಳಲ್ಲಿ ಬಂದು ಕುಣಿದು-ಕುಪ್ಪಳಿಸಿ ಎಂಜಾಯ್ ಮಾಡ್ತಾರೆ. ರಾಜ್ಯದ ಇತರೇ ಜಲಪಾತಗಳಿಗೆ ಹೋಲಿಸಿದರೆ ಈ ಫಾಲ್ಸ್‌ಗೆ ಬರುವ ಪ್ರವಾಸಿಗರ ಕೊರತೆಯಿದೆ. ಆದರೆ, ಇಲ್ಲಿ ಸೌಂದರ್ಯಕ್ಕೇನು ಬರವಿಲ್ಲ. ಅಷ್ಟೆ ಅಲ್ಲದೇ ಈ ಫಾಲ್ಸ್ ಬಳಿ ನೀರು ಎತ್ತರದಿಂದ ಬೀಳೋ ಜಾಗಕ್ಕೆ ಹೋಗಿ ನಿಲ್ಲಬಹುದು. ತುಂಬಾ ಆಳವೂ ಇಲ್ಲ. ನಿಮಗೆ ಬೇಕಾದಂತೆಲ್ಲಾ ಎಂಜಾಯ್ ಮಾಡಬಹುದು. ಮಕ್ಕಳು ಆಟವಾಡಬಹದು. ಜಾರಿ ಬೀಳುತ್ತಾರೆಂಬ ಭಯವಂತು ಇಲ್ಲವೇ ಇಲ್ಲ.
ಬೆಂಗಳೂರಿನ ಟ್ರಾಫಿಕ್ ಜಾಮ್ ಮೀರಿಸಿದ ಮುಳ್ಯಯನಗಿರಿ ಪ್ರವಾಸಿಗರು
ನೀರಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡಬಹುದು: ಇನ್ನು ಜಲಪಾತದ ನೀರು ಬೀಳುವ ಜಾಗಕ್ಕೆ ಇಳಿದು ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ನೀರಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡಿ ವಾಪಸ್ಸಾಗುತ್ತಿದ್ದಾರೆ. ನೀರು ಧುಮ್ಮಿಕ್ಕೋ ಜಾಗದಲ್ಲಿ ಮೈಯೊಡ್ಡಿ ನಿಂತ್ರೆ ಹೊರಬರೋಕೆ ಮನಸ್ಸೇ ಬರಲ್ಲ. ಒಟ್ಟಾರೆ, ದಟ್ಟ ಕಾನನದ ಮಧ್ಯೆ ಧುಮ್ಮಿಕ್ಕಿ ಹರಿಯೋ ಜಲಪಾತ ಪ್ರಕೃತಿ ಸೌಂದರ್ಯದ ಸಿರಿಯನ್ನೇ ಹೊದ್ದು ಮಲಗಿ ಸಿರಿಮನೆ ಜಲಪಾತ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಮಲೆನಾಡಲ್ಲೀಗ ಭರ್ಜರಿ ಮಳೆಯಾಗ್ತಿದ್ದು ಸಿರಿಮನೆ ಫಾಲ್ಸ್ ತನ್ನ ಸೊಬಗನ್ನ ಇಮ್ಮಡಿಗೊಳಿಸಿಕೊಂಡಿದೆ. ಇನ್ಯಾಕ್ ತಡ, ಕಾರ್ ಹತ್ತಿ ಬಂದೇಬಿಡಿ, ನೀವು ನೋಡಿ ಎಂಜಾಯ್ ಮಾಡಿ..
ಸಿರಿಮನೆ ಜಲಪಾತಕ್ಕೆ ಹೋಗುವುದು ಹೇಗೆ?: ಬೆಂಗಳೂರಿನಿಂದ ಶೃಂಗೇರಿಗೆ 320 ಕಿಲೋ ಮೀಟರ್ ದೂರವಿದ್ದು ಕೆಎಸ್‌ಆರ್ ಟಿಸಿ ಬಸ್ ವ್ಯವಸ್ಥೆಗಳಿವೆ. ಸ್ವಂತ ವಾಹನದಲ್ಲಿ ಹೋಗುವವರು ಶೃಂಗೇರಿಗೆ ತೆರಳಿ ಅಲ್ಲಿಂದ ತೆರಳಬಹುದು. ಮಂಗಳೂರು ವಿಮಾನ ನಿಲ್ದಾಣ ಇಲ್ಲಿಗೆ 110 ಕಿ.ಮೀ ದೂರವಿದೆ. ಶಿವಮೊಗ್ಗ, ಆಗುಂಬೆ, ತೀರ್ಥಹಳ್ಳಿ ಮತ್ತಿತರ ನಗರಗಳಿಂದ ಶೃಂಗೇರಿ ತಲುಪಲು ಬಸ್ಸುಗಳು ಹೆಚ್ಚಾಗಿವೆ. ಶಿವಮೊಗ್ಗ ರೈಲು ನಿಲ್ದಾಣ ಜಲಪಾತಕ್ಕೆ ಹತ್ತಿರವಿರುವ ನಿಲ್ದಾಣವಾಗಿದೆ. ಇದು ಶೃಂಗೇರಿಯಿಂದ 90 ಕಿ.ಮೀ ದೂರದಲ್ಲಿದೆ. ಶೃಂಗೇರಿಯಲ್ಲಿ ತಂಗಲು ಪ್ರವಾಸಿಗರಿಗೆ ವ್ಯವಸ್ಥೆ ಇದೆ. ಶೃಂಗೇರಿಯಿಂದ ಕಿಗ್ಗಾ ಹಳ್ಳಿಯವರೆಗೆ ಬಸ್‌ಗಳ ಸೇವೆ ಇದೆ, ಟ್ಯಾಕ್ಸಿ, ಆಟೋ ಬಳಸಿ ಕೂಡ ಪ್ರಯಾಣ ಮಾಡಬಹುದು. ಕಿಗ್ಗಾದಿಂದ ಚಾರಣ ಮಾಡುವ ಮೂಲಕ ಕೂಡ ಜಲಪಾತಕ್ಕೆ ತೆರಳಬಹುದು. ಟ್ಯಾಕ್ಸಿ, ಆಟೋ ಸೇವೆ ಕೂಡ ಲಭ್ಯವಿರುತ್ತದೆ.
ಪ್ರವಾಸಿಗರಿಗೆ ಸ್ಥಳೀಯರ ಮನವಿ: ಸಿರಿಮನೆ ಜಲಪಾತಕ್ಕೆ ಹೋಗಲು ನಿಗದಿತ ಕಡಿಮೆ ಶುಲ್ಕವನ್ನು ಪಾವತಿಸಬೇಕು. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾತ್ರ ಜಲಪಾತ ವೀಕ್ಷಣೆಗೆ ಅವಕಾಶವಿದೆ. ಇಲ್ಲಿಗೆ ಭೇಟಿ ನೀಡುವ ಪ್ರಯಾಣಿಕರು ಪರಿಸರದ ಬಗ್ಗೆ ಕಾಳಜಿಯನ್ನು ತೋರಿಸಬೇಕಿದೆ. ಪ್ಲಾಸ್ಟಿಕ್ ಬಾಟಲಿಗಳು, ಪೇಪರ್ ಗಳು, ಊಟ, ತಿಂಡಿಯ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯದೇ ಜವಾಬ್ದಾರಿಯಿಂದ ವರ್ತಿಸಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.