ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಮುಸ್ಲಿಂ ಸೇರಿದಂತೆ ಒಟ್ಟು ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. 1 ಕೋಟಿಗೂ ಹೆಚ್ಚು ಹೆಸರು ಕಡಿತಗೊಂಡಿದ್ದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು (ನ.10): ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯ ನಂತರ ರಾಜ್ಯದ ಮತದಾರರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ. ಈ ಪರಿಷ್ಕರಣೆಯ ಪರಿಣಾಮವಾಗಿ ರಾಜ್ಯದಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯಲ್ಲಿ ಬರೋಬ್ಬರಿ 13.48 ಲಕ್ಷ (ಶೇ. 18.84) ಕಡಿತವಾಗಿದ್ದು, ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ರಾಜ್ಯಾದ್ಯಂತ ಬದಲಾದ ಮತದಾರರ ಲೆಕ್ಕಾಚಾರ

SIR ಪ್ರಕ್ರಿಯೆಗೆ ಮುನ್ನ ಕರ್ನಾಟಕದಲ್ಲಿದ್ದ ಮುಸ್ಲಿಂ ಮತದಾರರ ಸಂಖ್ಯೆ 71.56 ಲಕ್ಷ, ಆದರೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಇದು 58.08 ಲಕ್ಷಕ್ಕೆ ಇಳಿಕೆಯಾಗಿದೆ.

ಕೇವಲ ಮುಸ್ಲಿಂ ಮತದಾರರು ಮಾತ್ರವಲ್ಲದೆ, ರಾಜ್ಯದ ಮುಸ್ಲಿಮೇತರ ಮತದಾರರ ಸಂಖ್ಯೆಯಲ್ಲೂ ಭಾರಿ ಪ್ರಮಾಣದ ಇಳಿಕೆ ದಾಖಲಾಗಿದೆ.

- ಮುಸ್ಲಿಮೇತರ ಮತದಾರರು: 4.82 ಕೋಟಿಯಿಂದ 3.96 ಕೋಟಿಗೆ ಇಳಿಕೆ (ಸುಮಾರು 86 ಲಕ್ಷ ಕಡಿಮೆ).

- ಒಟ್ಟು ಮತದಾರರ ಪ್ರಮಾಣ: ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.55 ಕೋಟಿಗೆ ಕುಸಿದಿದೆ (ಸುಮಾರು 1 ಕೋಟಿಯಷ್ಟು ಮತದಾರರ ಹೆಸರು ಕಡಿತ).

ಬೆಂಗಳೂರಿನಲ್ಲೂ ಮುಸ್ಲಿಂ ಮತದಾರರ ಇಳಿಕೆ

ರಾಜಧಾನಿ ಬೆಂಗಳೂರಿನಲ್ಲೂ ಈ ಎಸ್‌ಐಅರ್ ಪರಿಷ್ಕರಣೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸಿದೆ. ನಗರದಲ್ಲಿದ್ದ 13.67 ಲಕ್ಷ ಮುಸ್ಲಿಂ ಮತದಾರರ ಪೈಕಿ ಇದೀಗ 9.6 ಲಕ್ಷ ಮತದಾರರು ಮಾತ್ರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಅಂದರೆ ಬೆಂಗಳೂರಿನಲ್ಲೇ ಮುಸ್ಲಿಂ ಮತದಾರರ ಪ್ರಮಾಣದಲ್ಲಿ ಶೇ. 33.72ರಷ್ಟು ಭಾರಿ ಇಳಿಕೆಯಾಗಿದೆ.

10 ಮುಸ್ಲಿಂ ಶಾಸಕರ ಕ್ಷೇತ್ರಗಳ ಮೇಲಾದ ಪರಿಣಾಮ

ರಾಜ್ಯದ ಮುಸ್ಲಿಂ ಶಾಸಕರು ಪ್ರತಿನಿಧಿಸುವ 10 ಪ್ರಮುಖ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯಿಂದ ಹೆಸರುಗಳು ಕಡಿತಗೊಂಡಿವೆ. ಈ 10 ಕ್ಷೇತ್ರಗಳಲ್ಲಿ ಮುಂಚೆ ಇದ್ದ 9.62 ಲಕ್ಷ ಮುಸ್ಲಿಂ ಮತದಾರರ ಸಂಖ್ಯೆ ಇದೀಗ 7.52 ಲಕ್ಷಕ್ಕೆ ಕುಸಿದಿದ್ದು, ಒಟ್ಟು 2.10 ಲಕ್ಷ ಮತದಾರರು ಕಡಿತಗೊಂಡಿದ್ದಾರೆ.

ಪ್ರಭಾವಕ್ಕೊಳಗಾದ 10 ಶಾಸಕರ ಕ್ಷೇತ್ರಗಳು:

1. ರಿಜ್ವಾನ್ ಅರ್ಷದ್ (ಶಿವಾಜಿನಗರ)

2. ಎನ್.ಎ. ಹ್ಯಾರಿಸ್ (ಶಾಂತಿನಗರ)

3. ಬಿ.ಜೆಡ್. ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)

4. ಎಚ್.ಎ. ಇಕ್ಬಾಲ್ ಹುಸೇನ್ (ರಾಮನಗರ)

5. ತನ್ವೀರ್ ಸೇಠ್ (ನರಸಿಂಹರಾಜ)

6. ಯು.ಟಿ. ಖಾದರ್ (ಮಂಗಳೂರು)

7. ಯಾಸಿರ್ ಅಹಮದ್ ಖಾನ್ ಪಠಾಣ್ (ಶಿಗ್ಗಾಂವ್)

8. ಆಸಿಫ್ (ರಾಜು) ಸೇಠ್ (ಬೆಳಗಾವಿ ಉತ್ತರ)

9. ರಹೀಂ ಖಾನ್ (ಬೀದರ್)

10. ಕನೀಜ್ ಫಾತಿಮಾ (ಗುಲ್ಬರ್ಗ ಉತ್ತರ)

ವಿಶೇಷ ಪರಿಷ್ಕರಣೆ (SIR) ನಂತರ ಪ್ರಕಟಗೊಂಡಿರುವ ಈ ಹೊಸ ಮತದಾರರ ಪಟ್ಟಿಯ ಲೆಕ್ಕಾಚಾರ ಮುಂಬರುವ ಚುನಾವಣೆಗಳ ಮೇಲೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ತಂತ್ರಗಾರಿಕೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.