Asianet Suvarna News Asianet Suvarna News

Kannada Book: ಸಾಹಿತ್ಯದಲ್ಲೂ ನಾಡು ಶ್ರೀಮಂತವಾಗಬೇಕು: ಸಿಎಂ ಬೊಮ್ಮಾಯಿ

*   ಸಾಹಿತ್ಯ, ಭಾಷೆಗೆ ಜಾತಿ- ಧರ್ಮ ಇಲ್ಲ
*   ಪ್ರಭಾವರಹಿತ ಸಾಹಿತ್ಯ ಅತ್ಯಂತ ಶ್ರೇಷ್ಠ: ಬೊಮ್ಮಾಯಿ
*   66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್‌ಹೌಸ್‌ನಿಂದ 66 ಕನ್ನಡ ಪುಸ್ತಕಗಳ ಲೋಕಾರ್ಪಣೆ
 

Karnataka Should Be Rich in Literature too Says CM Basavaraj Bommai grg
Author
Bengaluru, First Published Nov 28, 2021, 7:31 AM IST
  • Facebook
  • Twitter
  • Whatsapp

ಬೆಂಗಳೂರು(ನ.28):  ಕನ್ನಡ(Kannada) ನಾಡು ಆರ್ಥಿಕವಾಗಿ ಬೆಳೆದರಷ್ಟೇ ಸಾಲದು. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿಯೂ ಬೆಳೆದು ಶ್ರೀಮಂತವಾಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಅಭಿಪ್ರಾಯಪಟ್ಟರು.

ಶನಿವಾರ ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಗಾಂಧೀ ಭವನದಲ್ಲಿ ಸಪ್ನ ಬುಕ್‌ಹೌಸ್‌(Sapna Book House) ವತಿಯಿಂದ 66ನೇ ಕರ್ನಾಟಕ ರಾಜ್ಯೋತ್ಸವ(Karnataka Rajyotsava) ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 66 ಕನ್ನಡ ಪುಸ್ತಕಗಳನ್ನು(Kannada Books) ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಅನಾದಿ ಕಾಲದಿಂದಲೂ ಮನುಷ್ಯನ ಚಿಂತನಾಶೀಲ ಪ್ರಕ್ರಿಯೆಯಿಂದ ಅಭಿವೃದ್ಧಿಯಾಗಿರುವ ಸಾಹಿತ್ಯ(Literature) ಮತ್ತು ಭಾಷೆಗೆ(Language) ಜಾತಿ(Caste), ಧರ್ಮವಿಲ್ಲ(Religion). ಯಾವುದೇ ತರಹದ ಪ್ರಭಾವವಿಲ್ಲದೆ ಸ್ವಚ್ಛ, ಶುಭ್ರವಾಗಿ ಇರುವಂತಹ ಸಾಹಿತ್ಯವನ್ನು ನಾವು ಓದಿದಾಗ ಬಹಳ ದೊಡ್ಡ ಚೈತನ್ಯ ಬರುತ್ತದೆ. ಪ್ರಭಾವರಹಿತವಾಗಿರುವ ಸಾಹಿತ್ಯ ಅತ್ಯಂತ ಶ್ರೇಷ್ಠ ಸಾಹಿತ್ಯ. ಯಾಕೆಂದರೆ ಅದು ಹೃದಯದಿಂದ ಬಂದಿರುವಂತಹ ಸಾಹಿತ್ಯವಾಗಿದೆ ಎಂದರು.

Kannada Book| ತಾಂಬೂಲದೊಂದಿಗೆ ಪುಸ್ತಕ ನೀಡುವ ಪರಂಪರೆ ಸೃಷ್ಟಿಯಾಗಲಿ: ಸೋಮೇಶ್ವರ

ಸತ್ಯಶೋಧನೆ, ಸತ್ಯದ ದರ್ಶನ, ಸತ್ಯದ ಪರಿಕಲ್ಪನೆ ಇದು ಶ್ರೇಷ್ಠ ಸಾಹಿತ್ಯಕ್ಕೆ ಮಾತ್ರ ಸಾಧ್ಯ. ಕನ್ನಡದಲ್ಲಿ ಅಂತಹ ಶ್ರೇಷ್ಠ ಸಾಹಿತ್ಯಗಳ ಸರಮಾಲೆಯೇ ಇದೆ. ಅವುಗಳನ್ನು ಓದಿಕೊಂಡರೆ ಬಹುತೇಕ ಜಗತ್ತಿನ ಯಾವುದೇ ವಿಜ್ಞಾನ, ಜ್ಞಾನದ ವಿಚಾರವನ್ನು ಸಮರ್ಪಕವಾಗಿ ಸರಿ, ತಪ್ಪನ್ನು ಹೇಳುವಂತಹ ಶಕ್ತಿ ನಮಗೆ ಬರುತ್ತದೆ. ಅದರ ಅಂತಃಸತ್ವ ನಮ್ಮ ಕನ್ನಡ ಸಾಹಿತ್ಯದಲ್ಲಿ ಇದೆ. ನಮ್ಮ ದೇಶಕ್ಕೆ(India) 90ರ ದಶಕದಲ್ಲಿ ಬಂದ ಜಾಗತೀಕರಣ(Globalization), ಖಾಸಗೀಕರಣ(Privatization), ಉದಾರೀಕರಣದಿಂದ(Liberalization) ಅಂತಃಕರಣವನ್ನು ಮರೆಯಬೇಕಾಯಿತು ಎಂದು ಹೇಳಿದರು.

ಮಾರುಕಟ್ಟೆ ವ್ಯವಹಾರದಲ್ಲಿ ಅಂತಃಕರಣ ಇರುವುದಿಲ್ಲ. ಕೇವಲ ಲಾಭ, ನಷ್ಟಮಾತ್ರ ಇರುತ್ತದೆ. ನಾನು ವಿದ್ಯಾರ್ಥಿಯಾಗಿ ಆರ್ಥಿಕ, ತತ್ವಶಾಸ್ತ್ರದ ಕುರಿತು ಓದುತ್ತೇನೆ. ಆಧ್ಯಾತ್ಮ ಮತ್ತು ತತ್ವಶಾಸ್ತ್ರದಲ್ಲಿ ಪಾಪ, ಪುಣ್ಯ ಇರುತ್ತದೆ. ಆದರೆ, ಆರ್ಥಿಕತೆಯಲ್ಲಿ ಲಾಭ- ನಷ್ಟ ಇರುತ್ತದೆ. ಇದರ ಒಳಹೊಕ್ಕು ನೋಡಿದರೆ ಪಾಪ- ಪುಣ್ಯದ ಬಗ್ಗೆ ಯೋಚಿಸದೇ ಕೇವಲ ಲಾಭ- ನಷ್ಟಕ್ಕೆ ದುಡಿಯುವರೇ ಹೆಚ್ಚು. ಸಪ್ನ ಬುಕ್‌ ಹೌಸ್‌ ಇದರ ಹೊರತಾಗಿದೆ ಎಂದರು.

ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ(Dr HS Venkateshamurthy) ಮಾತನಾಡಿ, ಕಳೆದ ಮೂರು ವರ್ಷದಲ್ಲಿ ಕೋವಿಡ್‌ ನಮಗೆ ಕ್ಷಣಿಕತೆಯ ಅನುಭವದ ಮಹಾ ದರ್ಶನ ಮಾಡಿಸಿದೆ. ಬದುಕಿನಲ್ಲಿ ಎಲ್ಲವೂ ನಶ್ವರ ಎಂಬುದನ್ನು ಅನುಭವಗತ ಮಾಡಿದೆ. ನಿರಂತರವಾದ ಸಾವು, ನೋವುಗಳಿಂದ ನಲುಗಿದ ಜೀವ, ಜೀವನ ನಮ್ಮದು. ಇಂತಹ ಹೊತ್ತಿನಲ್ಲಿಯೇ ಸಾಹಿತ್ಯ, ಕಲೆಯ ಪುಸ್ತಕಗಳು ನಿಜವಾದ ಜೀವಂತಿಕೆ ಸಾರ್ಥಕತೆಯ ಅನುಭವ ಒದಗಿಸಿವೆ ಎಂದರು.

Kannada Book: ಎಂಜಿನಿಯರಿಂಗ್‌, ವೈದ್ಯಕೀಯ ಪಠ್ಯ ಕನ್ನಡದಲ್ಲೇ ಸಿದ್ಧಪಡಿಸಿ: ಜ್ಞಾನೇಂದ್ರ

‘ಕನ್ನಡಪ್ರಭ’(Kannada Prabha) ದಿನಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ(Ravi Hegde) ಅವರು ಮಾತನಾಡಿ, ‘ಸಪ್ನ ಬುಕ್‌ಹೌಸ್‌ ಮಾಲೀಕರು ಪುಸ್ತಕದಲ್ಲಿ ಹೂಡುವ ಬಂಡವಾಳವನ್ನು ಇತರೆ ಕ್ಷೇತ್ರದಲ್ಲಿ ಹೂಡಿದ್ದರೆ ಇನ್ನೂ ಹೆಚ್ಚಿನ ಲಾಭ ಗಳಿಸಬಹುದಿತ್ತು. ಆದರೆ, ಲಾಭದ ಹಿಂದೆ ಬೀಳದೆ, ನಿತಿನ್‌ ಷಾ ಅವರು ಕನ್ನಡದ ಕೆಲಸಕ್ಕಾಗಿ ದುಡಿಯುತ್ತಿದ್ದು, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಅವರಿಗೆ ಸಿಗಲಿ’ ಎಂದರು.

ಸಪ್ನ ಬುಕ್‌ ಹೌಸ್‌ ಕನ್ನಡ ವಿಭಾಗವನ್ನು 1988ರಲ್ಲಿ ಎಸ್‌.ಆರ್‌. ಬೊಮ್ಮಾಯಿ(SR Bommai) ಅವರು ಉದ್ಘಾಟಿಸಿದ್ದನ್ನು ಕನ್ನಡ ಪುಸ್ತಕ ವಿಭಾಗದ ಮುಖ್ಯಸ್ಥ ದೊಡ್ಡೇಗೌಡ ಸ್ಮರಿಸಿದರು. ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ನಾಡೋಜ ಕಮಲಾ ಹಂಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ಸ್ವಾಗತಿಸಿ, ವಂದಿಸಿದರು. ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. ಈ ವೇಳೆ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜೋಗಿ, ಕವಿ ಬಿ.ಆರ್‌.ಲಕ್ಷ್ಮಣರಾವ್‌ ಸೇರಿದಂತೆ ಒಟ್ಟು 66 ಲೇಖಕರ ಕೃತಿಗಳು ಬಿಡುಗಡೆಗೊಂಡವು.
 

Follow Us:
Download App:
  • android
  • ios