Asianet Suvarna News Asianet Suvarna News

ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಣೆ ಮಾಡಿ: ಸರ್ಕಾರಕ್ಕೆ ಬಸ್‌ ಮಾಲೀಕರ ಮನವಿ

ರಾಜ್ಯದಲ್ಲಿ ಜಾರಿಗೊಳಿಸಿದ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಣೆ ಮಾಡಿ. ಸರ್ಕಾರದ ಯೋಜನೆಗೆ ನಾವೂ ಕೂಡ ಸೇವೆಯನ್ನು ಸಲ್ಲಿಸುತ್ತೇವೆ. 

Karnataka Shakti Yojana Extend to Private Buses Bus Owners Appeal to government sat
Author
First Published Jul 24, 2023, 11:55 AM IST

ಬೆಂಗಳೂರು (ಜು.24): ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಗ್ಯಾರಂಟಿಯಾಗಿ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ (ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಖಾಸಗಿ ಬಸ್‌ಗಳಿಗೆ ಭಾರಿ ಹಿನ್ನಡೆಯಾಗಿದೆ. ಆದ್ದರಿಂದ ಎಲ್ಲ ಖಾಸಗಿ ಬಸ್‌ಗಳನ್ನೂ ಕೂಡ ಶಕ್ತಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಫೆಡರೇಶನ್ ಅಧ್ಯಕ್ಷ ಸುರೇಶ್‌ ನಾಯ್ಕ್‌ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಸ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್‌ ಮಾಲೀಕರೊಂದಿಗೆ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಬಸ್‌ ಮಾಲೀಕರ ಫೆಡರೇಷನ್‌ ಅಧ್ಯಕ್ಷ ಸುರೇಶ್‌ ನಾಯ್ಕ್‌ ಅವರು, ರಾಜ್ಯದಲ್ಲಿರುವ ಎಲ್ಲ ಖಾಸಗಿ ಬಸ್‌ಗಳಲ್ಲಿಯೂ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ. ಇದರಿಂದ ಖಾಸಗಿ ಬಸ್‌ಗಳಿಗೆ ಉಂಟಾಗುವ ನಷ್ಟ ತಗ್ಗಲಿದೆ. ಎಲ್ಲ ಮಹಿಳೆಯರಿಗೂ ಶೀಘ್ರವಾಗಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಿ. ನಂತರ, ಸ್ಮಾರ್ಟ್‌ ಕಾರ್ಡ್‌ ತೋರಿಸಿದ ಮಹಿಳೆಯರಿಗೆ ನಾವು ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತೇವೆ. ಅವರ ಪ್ರಯಾಣದ ವೆಚ್ಚವನ್ನು ನಂತರ ಸರ್ಕಾರ ಭರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆ ವಿರೋಧಿಸಿ ಜು.27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಮುಷ್ಕರ: ಜಂಟಿ ಸಭೆಗೆ ಸಚಿವರಿಂದ ಆಹ್ವಾನ

ಕೆಎಸ್‌ಆರ್‌ಟಿಸಿ ಬಸ್‌ ಇಲ್ಲದ ಸ್ಥಳದಲ್ಲಿ ಖಾಸಗಿ ಬಸ್‌ ಬಳಸಿ: ಮುಂದುವರೆ, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಖಾಸಗಿ ಮಾಲೀಕತ್ವದ ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೆ ವಿಸ್ತರಣೆ ಮಾಡುವಂತೆ ಸಭೆಯಲ್ಲಿ ಆಗ್ರಹ ಮಾಡಲಾಗಿದೆ. ಕರಾವಳಿ ಸೇರಿದಂತೆ ಹಲವಡೆ  KSRTC ಬಸ್ ಸೇವೆ ಇರಲ್ಲ. ಹೀಗಾಗಿ ಖಾಸಗಿ ಬಸ್ ಗಳಿಗೆ ಇದನ್ನು ವಿಸ್ತರಿಸಿ ಅಂತಾ ಒತ್ತಾಯ ಮಾಡಿದ್ದೇವೆ. ಇಲ್ಲದಿದ್ದರೆ ಒಂದು ವರ್ಷದಲ್ಲಿ ಖಾಸಗಿ ಬಸ್ ಗಳನ್ನು ಮುಚ್ಚಬೇಕಾಗುತ್ತದೆ. ಶಕ್ತಿ ಯೋಜನೆಗೆ ಖಾಸಗಿ ಬಸ್ ಗಳನ್ನು ಒಳಪಡಿಸುವಂತೆ ಆಗ್ರಹ ಮಾಡಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್‌ ಕಾರ್ಡ್‌ ಮಾಡಿದರೆ ವಂಚನೆ ಆಗೊಲ್ಲ:  ಇನ್ನು ರಾಜ್ಯ ಸರ್ಕಾರದಿಂದ ಎಲ್ಲ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಣೆ ಮಾಡಿದಲ್ಲಿ ಖಾಸಗಿ ಬಸ್‌ಗಳ ಮಾಲೀಕರಿಂದ ವಂಚನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸ್ಮಾರ್ಟ್ ಕಾರ್ಡ್ ಮೂಲಕ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಓಡಾಡಲು ಅವಕಾಶ ಮಾಡಿಕೊಡಬೇಕು. ಶಕ್ತಿ ಯೋಜನೆ ಖಾಸಗಿ ಸಾರಿಗೆಗೂ ಅನ್ವಯವಾಗಲಿ. ಒಂದು ವೇಳೆ ನಮ್ಮ ರಕ್ಷಣೆಗೆ ಸರ್ಕಾರ ಬರದಿದ್ದರೆ ಮುಂದಿನ ಒಂದು ವರ್ಷದಲ್ಲಿ ಖಾಸಗಿ ಸಾರಿಗೆ ಮುಚ್ಚಲಿದ್ದೇವೆ. ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಸರ್ಕಾರದ ಕೆಎಸ್‌ಆರ್‌ಟಿಸ್‌ ಬಸ್ ವ್ಯವಸ್ಥೆ ಇಲ್ಲ. ಅಲ್ಲಿ ಕೆಎಸ್ ಆರ್ ಟಿಸಿ ಬಸ್ ಖರೀದಿ ಮಾಡುವ ಬದಲು ನಮಗೆ ಶಕ್ತಿ ಯೋಜನೆ ನೀಡಿ, ನಾವು ಸೇವೆ ನೀಡುತ್ತೇವೆ ಎಂದು ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.

ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ನಷ್ಟ; ಬಂದ್‌ಗೆ ಕರೆಕೊಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ!

25 ಕೋಟಿ ಮಹಿಳೆಯರಿಂದ ಪ್ರಯಾಣ: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯ ಪ್ರಯಾಣದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಿಳೆಯರ, ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಈ ಯೋಜನೆ ಭರ್ಜರಿಯಾಗಿ ಅನುಕೂಲ ಒದಗಿಸಿದೆ. ಇನ್ನು ಶಕ್ತಿ ಯೋಜನೆ ಜಾರಿಯಾದ ಜು.11ರಿಂದ ಜುಲೈ 22ರವರೆಗೆ ಒಟ್ಟು 25 ಕೋಟಿ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ. ಈ ಮೂಲಕ ಮಹಿಳಯರಿಂದ ಶಕ್ತಿ ಯೋಜನೆ ಸದುಪಯೋಗ ಆಗುತ್ತಿದೆ. ಹೀಗಿರುವಾಗ ಶಕ್ತಿ ಯೋಜನೆ ವಿರೋಧಿಸಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮತ್ತು ಖಾಸಗಿ ಬಸ್‌ಗಳ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದು, ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios