ಇದೆಂಥಾ ವಿಚಿತ್ರ: ಎಲೆಕ್ಟ್ರಿಕ್ ಕಾರನ್ನು ಎಳೆದೊಯ್ದು ಗ್ಯಾರೇಜ್‌ಗೆ ಬಿಟ್ಟ ಜೋಡೆತ್ತುಗಳು!
ದುಬಾರಿ ಎಲೆಕ್ಟ್ರಿಕ್ ಕಾರನ್ನು ಜೋಡೆತ್ತುಗಳು ಎಳೆದುಕೊಂಡು ಹೋಗುವ ದೃಶ್ಯವು ಸ್ಥಳೀಯರಿಗೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.
ರಾಜಸ್ಥಾನ (ಡಿ.31): ಲಕ್ಷ ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ ದುಬಾರಿ ಎಲೆಕ್ಟ್ರಿಕ್ ಕಾರನ್ನು ಜೋಡೆತ್ತುಗಳು ಎಳೆದುಕೊಂಡು ಹೋಗುವ ದೃಶ್ಯವು ಸ್ಥಳೀಯರಿಗೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ರಾಜಸ್ಥಾನದ ಮುನಿಸಿಪಲ್ ವಿರೋಧ ಪಕ್ಷದ ನಾಯಕರ ಹೈಟೆಕ್ ಎಲೆಕ್ಟ್ರಿಕ್ ಕಾರು ಪ್ರಯಾಣದ ವೇಳೆ ಬ್ರೇಕ್ ಡೌನ್ ಆಯಿತು. ಕೊನೆಗೆ ಎತ್ತುಗಳನ್ನು ಬಳಸಿ ಕಾರನ್ನು ಸರ್ವಿಸ್ ಸೆಂಟರ್‌ಗೆ ಎಳೆದುಕೊಂಡು ಹೋಗಬೇಕಾಯಿತು. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಾಗ ಟ್ರೋಲ್‌ಗಳ ಮಹಾಪೂರವೇ ಹರಿದುಬಂತು. ಅದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಚರ್ಚೆಗಳು ನಡೆದವು. ರಾಜಸ್ಥಾನದ ದೀದ್ವಾನ ಜಿಲ್ಲೆಯ ಕುಚಾಮನ್ ನಗರ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅನಿಲ್ ಸಿಂಗ್ ಮೆಡ್ತಿಯ ಅವರ ಎಲೆಕ್ಟ್ರಿಕ್ ಕಾರಿಗೆ ಈ ಗತಿ ಬಂದಿತು.
ಅನಿಲ್ ಸಿಂಗ್ ಮೆಡ್ತಿಯ ನಗರದ ಮೂಲಕ ಹೋಗುತ್ತಿದ್ದಾಗ ಎಲೆಕ್ಟ್ರಿಕ್ ಕಾರು ಇದ್ದಕ್ಕಿದ್ದಂತೆ ನಿಂತುಹೋಯಿತು. ರಸ್ತೆಯ ಮಧ್ಯದಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡಿ ನಿಂತ ಕಾರು ಇತರ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಆಗ ಸ್ಥಳೀಯ ರೈತರು ಅನಿಲ್ ಸಿಂಗ್ ಮೆಡ್ತಿಯ ಅವರಿಗೆ ಸಹಾಯ ಮಾಡಲು ಮುಂದಾದರು. ರೈತರು ತಮ್ಮ ಎತ್ತುಗಳನ್ನು ಬಳಸಿ ಕಾರನ್ನು ಎಳೆದುಕೊಂಡು ಹೋಗಿ ಸರ್ವಿಸ್ ಸೆಂಟರ್‌ಗೆ ತಲುಪಿಸಿದರು. ಎತ್ತುಗಳು ದುಬಾರಿ ಎಲೆಕ್ಟ್ರಿಕ್ ಕಾರನ್ನು ಎಳೆದುಕೊಂಡು ಹೋಗುವ ದೃಶ್ಯವು ದಾರಿಹೋಕರಿಗೆ ತಮಾಷೆಯಾಗಿ ಕಂಡಿತು. ಅವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು.
ಇದನ್ನೂ ಓದಿ: Viral Video: ಚಿಂದಿ ಆಯುವವರಿಗೆ ಸಿಕ್ತು ಮೂಟೆಗಟ್ಟಲೆ 500 ರೂ. ನೋಟುಗಳು, ಆರ್‌ಬಿಐಗೆ ಮನವಿ ಸಲ್ಲಿಸಿದ ನೆಟ್ಟಿಗರು!
ತನ್ನ ಎಲೆಕ್ಟ್ರಿಕ್ ಕಾರು ನಿರಂತರವಾಗಿ ಸಮಸ್ಯೆ ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಒಂದು ವರ್ಷದಲ್ಲಿ 16 ಬಾರಿ ಕಾರನ್ನು ವಿವಿಧ ಸಮಸ್ಯೆಗಳಿಂದಾಗಿ ಸರ್ವಿಸ್ ಸೆಂಟರ್‌ಗೆ ಕೊಂಡೊಯ್ದಿದ್ದಾರೆ. ಜಾಹೀರಾತಿನಲ್ಲಿ ಹೇಳಿದಂತೆ ಕಾರಿಗೆ ಮೈಲೇಜ್ ಇಲ್ಲ ಮತ್ತು ಅದರ ಕಾರ್ಯಕ್ಷಮತೆ ಕಳಪೆ ಎಂದು ಅವರು ಹೇಳಿದರು. ಪೂರ್ಣ ಚಾರ್ಜ್ ಇದ್ದರೂ ಕಾರು ಹೇಗೆ ಆಫ್ ಆಯಿತು ಎಂದು ತಿಳಿದಿಲ್ಲ, ಮತ್ತು ಕಂಪನಿ ಈ ಬಗ್ಗೆ ಪ್ರತಿಕ್ರಿಯಿಸಲು ಸಿದ್ಧವಿಲ್ಲ ಎಂದು ಅನಿಲ್ ಸಿಂಗ್ ಮೆಡ್ತಿಯ ಹೇಳಿದ್ದಾರೆ. ಆಧುನಿಕತೆ ಮತ್ತು ಪಾರಂಪರಿಕತೆ ಇಲ್ಲಿ ಸಮ್ಮಿಲನಗೊಂಡಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ: ಮದುವೆ ಮಂಟಪದಲ್ಲಿ ವರನಿಗೆ ಕಾಲಿನಿಂದ ಜಾಡಿಸಿ ಒದ್ದ ಮಾಜಿ ಗೆಳತಿ; ವಿಡಿಯೋ ವೈರಲ್