ಬೆಂಗಳೂರು(ಡಿ.14): ಕಳೆದ 3 ದಿನದಿಂದ ನಡೆಯುತ್ತಿರುವ ಸಾರಿಗೆ ಮುಷ್ಕರ ಹಿಂಪಡೆಯುವಂತೆ ವಿವಿಧ ಸರ್ಕಾರಿ ಸಾರಿಗೆ ನೌಕರ ಒಕ್ಕೂಟಗಳೊಂದಿಗೆ ಸರ್ಕಾರ ಭಾನುವಾರ ನಡೆಸಿದ ಮ್ಯಾರಥಾನ್‌ ಸಂಧಾನ ಸಭೆ ಇನ್ನೇನು ಯಶಸ್ವಿಯಾಯಿತು ಎನ್ನುವಾಗಲೇ ಸಂಪೂರ್ಣ ವಿಫಲಗೊಂಡಿದೆ. ನೌಕರರ ಮುಷ್ಕರ ಮುಂದುವರೆದಿದ್ದು, ಸೋಮವಾರವೂ ರಾಜ್ಯಾದ್ಯಂತ ಬಸ್‌ ಸಂಚಾರ ವ್ಯತ್ಯಯವಾಗುವುದು ಖಾತರಿಯಾಗಿದೆ.

ಇದಕ್ಕೆ ಮುಖ್ಯ ಕಾರಣ, ‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರು’ ಎಂದು ಪರಿಗಣಿಸಬೇಕು ಎಂಬ ತಮ್ಮ ಬೇಡಿಕೆಗೆ ಹೋರಾಟದ ಮುಂದಾಳತ್ವ ವಹಿಸಿರುವ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ ಪಟ್ಟು ಹಿಡಿದಿರುವುದು. ಪ್ರಮುಖವಾಗಿ ಈ ಬೇಡಿಕೆ ಹೊರತುಪಡಿಸಿ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿತ್ತು. ಇದಕ್ಕೆ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದ ಕೋಡಿಹಳ್ಳಿ ನೇತೃತ್ವದ ಒಕ್ಕೂಟದ ಪದಾಧಿಕಾರಿಗಳು ‘ಗೋಣು’ ಆಡಿಸಿದ್ದರು.

ಇದರ ಬೆನ್ನಲ್ಲೇ ‘ಮುಷ್ಕರ ಅಂತ್ಯಗೊಂಡಿದೆ’ ಎಂದು ಬಿಂಬಿತವಾಗಿ ರಾಜ್ಯಾದ್ಯಂತ ಬಸ್‌ ಸಂಚಾರ ಕೂಡ ಆರಂಭವಾಗಿತ್ತು. ಇದನ್ನು ನಂಬಿದ ಪ್ರಯಾಣಿಕರು ನಿಲ್ದಾಣಗಳತ್ತ ಸಾಗಿದರು. ಆದರೆ, ಸಂಧಾನ ಸಭೆಯಿಂದ ಹೊರ ನಡೆದ ಪದಾಧಿಕಾರಿಗಳು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಂಜೆ ಕೋಡಿಹಳ್ಳಿ ಚಂದ್ರಶೇಖರ್‌ ಜತೆ ನಡೆಸಿದರು. ಈ ಮಾತುಕತೆಯು ಸಂಪೂರ್ಣ ಚಿತ್ರಣವನ್ನು ಬದಲಿಸಿತು. ತಮ್ಮ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರನ್ನಾಗಿಸುವ ಆಗ್ರಹ ಈಡೇರುವವರೆಗೆ ಮುಷ್ಕರ ಮುಂದುವರೆಸುವ ಘೋಷಣೆಯನ್ನು ಒಕ್ಕೂಟ ಮಾಡಿತು.

ಅಷ್ಟೇ ಅಲ್ಲ, ‘ಸೋಮವಾರ ಬಸ್‌ ಸಂಚಾರಕ್ಕೆ ಬಿಡಬೇಡಿ. ಖಾಸಗಿ ಬಸ್‌ಗಳೂ ಸಂಚರಿಸುವುದಿಲ್ಲ’ ಎಂದು ಕೋಡಿಹಳ್ಳಿ ಘೋಷಿಸಿದ್ದಾರೆ. ತನ್ಮೂಲಕ ಸಾರಿಗೆ ಸಂಕಷ್ಟಮತ್ತಷ್ಟುತೀವ್ರಗೊಂಡಿದೆ. ಒಕ್ಕೂಟದ ಈ ಬಿಗಿಪಟ್ಟಿಗೆ ಬದಲಾಗಿ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಈಗ ದಟ್ಟವಾಗಿದೆ. ಎಸ್ಮಾವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ಸಚಿವರ ದಂಡೇ ರಂಗಕ್ಕಿಳಿದರೂ ವಿಫಲ:

ಮೊದಲ 2 ದಿನ ಸಾರಿಗೆ ಸಚಿವರಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯಿಂದ ನೌಕರರ ಒಕ್ಕೂಟ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌, ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಅವರನ್ನೂ ಸಂಧಾನದ ಕಣಕ್ಕಿಳಿಸಿದ್ದರು.

ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೆ ಆರ್‌. ಅಶೋಕ್‌ ನಿವಾಸದಲ್ಲಿ ಸತತ 6 ಸಭೆ ನಡೆದವು. ಬಳಿಕ ನಂದೀಶ್‌ ರೆಡ್ಡಿ ಅವರು ಮಾನ್ಯತೆ ಹೊಂದಿರುವ ನಾಲ್ಕು ಒಕ್ಕೂಟಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಇದೇ ವೇಳೆ, ಇನ್ನೊಂದೆಡೆ ಭಾನುವಾರ ಬೆಳಗ್ಗೆ ಲಕ್ಷ್ಮಣ ಸವದಿ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಅಧಿಕೃತ ಸಭೆ ನಡೆಸಿದರೂ ಫಲ ಕಾಣಲಿಲ್ಲ.

ಬಳಿಕ ಒಕ್ಕೂಟಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದ ಲಕ್ಷ್ಮಣ ಸವದಿ, ಭಾನುವಾರ ಸಂಜೆ ವಿಕಾಸಸೌಧದಲ್ಲಿ ನಾಲ್ಕು ನೋಂದಾಯಿತ ಒಕ್ಕೂಟಗಳ ಜೊತೆಗೆ ಕೋಡಿಹಳ್ಳಿ ಚಂದ್ರಶೇಖರ್‌ ಬೆಂಬಲ ನೀಡಿರುವ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಪ್ರತಿನಿಧಿಗಳನ್ನೂ ಕರೆಸಿ ಸಭೆ ನಡೆಸಿದರು.

ಕೊನೆಯ ಸಭೆಯ ಅಂತ್ಯದ ಬಳಿಕ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್‌ ಸರ್ಕಾರದ ಭರವಸೆಗಳಿಗೆ ಸಮ್ಮತಿಸಿದಂತೆ ಪ್ರತಿಕ್ರಿಯೆ ನೀಡಿದರೂ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ನಿರತರೊಂದಿಗಿನ ಸಭೆ ಬಳಿಕ ಉಲ್ಟಾಹೊಡೆದರು. ಒಕ್ಕೂಟದ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಜೊತೆ ಚರ್ಚಿಸಿದ ಚಂದ್ರಶೇಖರ್‌, ಮುಷ್ಕರ ಮುಂದುವರೆಯುವುದಾಗಿ ಸ್ಪಷ್ಟವಾಗಿ ಘೋಷಿಸಿದರು.

ಸರ್ಕಾರದಿಂದ ಕಾನೂನು ಅಸ್ತ್ರ?:

ಇನ್ನು ಸರ್ಕಾರದೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಒಕ್ಕೂಟದ ಪ್ರತಿನಿಧಿಗಳು ಸರ್ಕಾರದ ಭರವಸೆಗಳಿಗೆ ಬಹುತೇಕ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಆರ್‌. ಅಶೋಕ್‌, ‘ಸಂಧಾನ ಯಶಸ್ವಿಯಾಗಿದ್ದು ಇಂದು ರಾತ್ರಿಯಿಂದಲೇ ಬಸ್ಸುಗಳು ಚಾಲನೆಗೊಳ್ಳಲಿವೆ’ ಎಂದು ಘೋಷಿಸಿದ್ದರು. ಇದರಿಂದ ಬಸ್ಸುಗಳೂ ರಸ್ತೆಗಳಿದಿದ್ದವು. ಬಳಿಕ ಒಕ್ಕೂಟದ ಪ್ರತಿನಿಧಿಗಳು ಉಲ್ಟಾಹೊಡೆದಿರುವುದರಿಂದ ಕಾನೂನು ಅಸ್ತ್ರ ಪ್ರಯೋಗಿಸಲು ಚಿಂತನೆ ನಡೆಸಿದೆ. ಸೋಮವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ‘ಎಸ್ಮಾ’ ಜಾರಿಗೆ ಸಿದ್ಧತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ನೋಂದಾಯಿತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಕೋಡಿಹಳ್ಳಿ ವಿರುದ್ಧ ಸಿಎಂ ಬಿಎಸ್‌ವೈ ಗರಂ

ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರದ ಭರವಸೆಗಳನ್ನು ಸಾರಿಗೆ ನೌಕರರ ಸಂಘದ ಮುಖಂಡರು ಸಭೆಯಲ್ಲಿ ಒಪ್ಪಿಕೊಂಡಿದ್ದರು. ಆದರೆ, ಕೋಡಿಹಳ್ಳಿ ಚಂದ್ರಶೇಖರ್‌ ಅವರು ಅನಗತ್ಯವಾಗಿ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಅವರ ದುರುದ್ದೇಶಪೂರಿತ ನಡೆ ಖಂಡನೀಯ. ಮುಷ್ಕರದಿಂದ ಜನರಿಗೆ ತೊಂದರೆ ಆಗಿದೆ, ನೌಕರರಿಗೂ ಸಮಸ್ಯೆ ಆಗುತ್ತದೆ. ನೌಕರರು ಮುಷ್ಕರ ಕೈಬಿಡಬೇಕು.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಸರ್ಕಾರದ ಭರವಸೆ

1. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮೆ

2. ಕೊರೋನಾದಿಂದ ಮೃತರ ಕುಟುಂಬಕ್ಕೆ .30 ಲಕ್ಷ

3. ಅಂತರ್‌ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ

4. ನೌಕರರ ತರಬೇತಿ ಅವಧಿ 2 ವರ್ಷದಿಂದ 1ಕ್ಕಿಳಿಕೆ

5. ನಿಗಮದಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿ

6. ಕರ್ತವ್ಯನಿರ್ವಹಿಸಿದ ಸಿಬ್ಬಂದಿಗೆ ಭತ್ಯೆ (ಬಾಟಾ)

7. ಕಿರುಕುಳ ತಪ್ಪಿಸಲು ಸಮಿತಿ, ತಪ್ಪಿತಸ್ಥರ ಮೇಲೆ ಕ್ರಮ

8. ವೇತನ ಪರಿಷ್ಕರಣೆ ವೇಳೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಬಗ್ಗೆ ಆರ್ಥಿಕ ಅಂಕಿ-ಅಂಶ ಪರಿಗಣಿಸಿ ತೀರ್ಮಾನ

ಈಡೇರದ ಭರವಸೆ

1. ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸರ್ಕಾರ ನಕಾರ

2. 6ನೇ ವೇತನ ಆಯೋಗದ ಶಿಫಾರಸು ಜಾರಿ ಬಗ್ಗೆ ಸರ್ಕಾರದ ಸ್ಪಷ್ಟನಿರ್ಧಾರ ಇಲ್ಲ

3. ನೌಕರರ ವೈದ್ಯಕೀಯ ಶುಲ್ಕ ಮರು ಪಾವತಿ ಮಾಡಬೇಕು ಎಂಬ ಬೇಡಿಕೆಗೆ ನಕಾರ