Corona Update ಕರ್ನಾಟಕದಲ್ಲಿ ಕೈ ಮೀರಿತು ಪರಿಸ್ಥಿತಿ, ಒಂದೇ ದಿನ 20 ಸಾವಿರ ಗಡಿದಾಟಿದ ಹೊಸ ಕೇಸ್
* ಕರ್ನಾಟಕದಲ್ಲಿ ಕೈ ಮೀರಿತು ಕೊರೋನಾ ಪರಿಸ್ಥಿತಿ
* ಕಠಿಣ ರೂಲ್ಸ್ ಜಾರಿಗೆ ತಂದ್ರೂ ನಿಯಂತ್ರಣಕ್ಕೆ ಬಾರದ ಕೊರೋನಾ
* ಕಳೆದ 24 ಗಂಟೆಗಳಲ್ಲಿ 20 ಸಾವಿರ ಗಡಿದಾಟಿದ ಹೊಸ ಕೇಸ್
ಬೆಂಗಳೂರು, (ಜ.12): ವೀಕೆಂಡ್ ಕರ್ಫ್ಯೂ ಸೇರಿದಂತೆ ಇತರೆ ಕಠಿಣ ನಿಯಮ ಜಾರಿಗೆ ತಂದರೂ ಸಹ ಕರ್ನಾಟಕದಲ್ಲಿ (Karnataka) ಕೊರೋನಾ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆಯಾಗುತ್ತಿದೆ,
ಅದರಲ್ಲೂ ಇಂದು(ಜ.12) ಒಂದೇ ದಿನದ ಕರ್ನಾಟಕದಲ್ಲಿ ಕೋವಿಡ್ ಹೊಸ ಕೇಸ್ (Coronavirus Cases) 20 ಸಾವಿರದ ಗಡಿದಾಟಿದ್ದು, ಬೆಚ್ಚಿಬೀಳಿಸಿದೆ.
ಹೌದು...ಕಳೆದ 24 ಗಂಟೆಗಳಲ್ಲಿ 21,390 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ರೆ, ಈ ಪೈಕಿ ಬೆಂಗಳೂರು ನಗರದಲ್ಲಿಯೇ 15,617 ಕೇಸ್ ದೃಢಪಟ್ಟಿವೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 3099519ಕ್ಕೇರಿದ್ರೆ, ಬೆಂಗಳೂರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1334957. ಇದುವರೆಗೂ ನಗರದಲ್ಲಿ 16433 ಜನರು ಮೃತಪಟ್ಟಿದ್ದಾರೆ.
Covid 19 Third Wave: ಸತತ 3ನೇ ದಿನ 1.50 ಲಕ್ಷ ಕೇಸು: 227 ಜನ ಕೊರೋನಾಗೆ ಬಲಿ!
ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 93,009ಕ್ಕೆ ಏರಿಯಾಗಿದ್ರೆ, ಬೆಂಗಳೂರಿನಲ್ಲಿ ನಗರದಲ್ಲಿಯೇ 73 ಸಾವಿರ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ 24 ಗಂಟೆಯಲ್ಲಿ 1,95,047 ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇ 10.96ಕ್ಕೆ ಏರಿಕೆಯಾಗಿದೆ. ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ ಆಯ್ತಾ?
ವೀಕೆಂಡ್ ಕರ್ಫ್ಯೂ, 50:50 ಸೇರಿದಂತೆ ಕಠಿಣ ನಿಯಮಗಳನ್ನ ಜಾರಿಗೆ ತಂದರೂ ಸಹ ರಾಜ್ಯದಲ್ಲಿ ಕೊರೋನಾ ಅಬ್ಬರವನ್ನು ತಡೆಯಲಾಗುತ್ತಿಲ್ಲ. ಬದಲಿಗೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯವಾ ಎನ್ನುವ ಪಶ್ನೆ ಉದ್ಭವಿಸಿದೆ.
ಹೀಗೆ ಹೆಚ್ಚುತ್ತಲೇ ಇದ್ರೆ ಮುಂದೆ ಕರ್ನಾಟಕ ಸಂಪೂರ್ಣ ಲಾಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಜನರು ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧರಾಗಿರಬೇಕು.
ಜ.13ರಂದು ಲಾಕ್‌ಡೌನ್ ಭವಿಷ್ಯ ನಿರ್ಧಾರ?
ಕೋವಿಡ್ ಹೊಸ ರೂಪಾಂತರಿ ಒಮಿಕ್ರೋನ್‌ನಿಂದಾಗಿ (Omicron)ದೇಶಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ ಅಂದ್ರೆ ಜನವರಿ 13ರಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜಧಾನಿ ಬೆಂಗಳೂರಿಗೆ (Bengaluru) ಪ್ರತ್ಯೇಕ ಗೈಡ್‌ಲೈನ್ಸ್ (Guidelines) ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಈಗಾಗಲೇ 50:50 ರೂಲ್ಸ್ ಅನ್ವಯವಾಗಲಿದೆ. ನಾಳೆಯ ಸಭೆಯಲ್ಲಿ ಲಾಕ್‌ಡೌನ್, ಟಫ್‌ರೂಲ್ಸ್ ಬಗ್ಗೆ ಚರ್ಚೆಯಾಗಲಿದೆ.
ಕೇಂದ್ರ ಸರ್ಕಾರ, ಎರಡು ದಿನಗಳ ಹಿಂದೆ ರಾಜ್ಯಗಳಿಗೆ ಪತ್ರ ಬರೆದು, ಆಸ್ಪತ್ರೆ ದಾಖಲಾತಿ ಈಗ ಕಡಿಮೆ ಇರಬಹುದು. ಆದರೆ ಯಾವುದೇ ಸಮಯದಲ್ಲಿ ಪರಿಸ್ಥಿತಿ ಬದಲಾಗಬಹುದು. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಮೂಲಸೌಕರ್ಯ ವ್ಯವಸ್ಥೆ ಸಿದ್ದ ಮಾಡಿಟ್ಟುಕೊಳ್ಳಿ ಎಂದು ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಇದೀಗ ಮೋದಿ, ಸಿಎಂಗಳ ಜೊತೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕ ಸೇರಿದಂತೆ 8 ರಾಜ್ಯಗಳ ಸ್ಥಿತಿ ಕಳವಳಕಾರಿ
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತ್ ರಾಜ್ಯದ ಕೋವಿಡ್ ಪರಿಸ್ಥಿತಿ ಕಳವಳಕಾರಿಯಾಗಿದೆ. ಭಾರತದ 300 ಜಿಲ್ಲೆಗಳಲ್ಲಿ ವಾರಕ್ಕೆ ಶೇಕಡಾ 5 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ದಾಖಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಇಂದು(ಬುಧವಾರ) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಭಾರತದಲ್ಲಿ ಕೊರೋನಾ ಸೋಂಕುಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಡಿಸೆಂಬರ್ 30 ರಂದು ಶೇಕಡಾ 1.1 % ಇದ್ದ ಪಾಸಿಟಿವಿಟಿ ರೇಟ್ ಜನವರಿ 12ಕ್ಕೆ 11.05% ಗೆ ಏರಿದೆ. ಈ ಸಮಯದಲ್ಲಿ, ಕೋವಿಡ್ ಪ್ರಕರಣಗಳು ಜಾಗತಿಕವಾಗಿ ಏರಿಕೆಯಾಗುತ್ತಿದ್ದು, ಜನವರಿ 10 ರಂದು ಈವರೆಗಿನ ದಾಖಲೆ ಏರಿಕೆ ಅಂದರೆ ಒಂದು ದಿನದಲ್ಲಿ ವಿಶ್ವಾದ್ಯಂತ 31.59 ಲಕ್ಷ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ, ಭಾರತದಲ್ಲಿನ 300 ಜಿಲ್ಲೆಗಳ ವಾರದ ಪಾಸಿಟಿವಿಟಿ ದರ, 5 % ಗಿಂತ ಹೆಚ್ಚು ವರದಿ ಆಗುತ್ತಿದೆ. 19 ರಾಜ್ಯಗಳಲ್ಲಿ 10,000 ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತ್ ನಲ್ಲಿ ಆಗುತ್ತಿರೊ ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ಇವುಗಳನ್ನ ಸ್ಟೇಟ್ಸ್ ಆಫ್ ಕನ್ಸರ್ನ್ ಎಂದು ಪರಿಗಣಿಸಲಾಗಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.