ಬೆಂಗಳೂರು(ಏ.13): ರಾಜ್ಯದಲ್ಲಿ ಭಾನುವಾರ 2 ವರ್ಷದ ಪುಟ್ಟಕಂದಮ್ಮ ಸೇರಿದಂತೆ ಬರೋಬ್ಬರಿ 17 ಮಂದಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ರಾಜ್ಯದಲ್ಲಿ ಒಂದೇ ದಿನ ವರದಿಯಾದ ಅತಿ ಹೆಚ್ಚು ಪ್ರಕರಣಗಳು ಭಾನುವಾರ ದಾಖಲಾದಂತಾಗಿದ್ದು, ಸೋಂಕು ಪ್ರಮಾಣ ಹೆಚ್ಚಾಗುತ್ತಿರುವ ಆತಂಕ ಸೃಷ್ಟಿಯಾಗಿದೆ.

ಈ ಹಿಂದೆ ಏ.9 ರಂದು ರಾಜ್ಯದಲ್ಲಿ 16 ಸೋಂಕು ಪ್ರಕರಣ ದೃಡಪಟ್ಟಿದ್ದು ವರದಿಯಾಗಿತ್ತು. ಏ.12ರ ಭಾನುವಾರ 17 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೂ ಸೋಂಕು ವಿಸ್ತರಿಸಿದೆ. ವಿಜಯಪುರದ ಸೇರ್ಪಡೆಯೊಂದಿಗೆ ಸೋಂಕಿತ ಜಿಲ್ಲೆಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

15ಕ್ಕೆ ಲಾಕ್‌ಡೌನ್‌ ಕೊಂಚ ಸಡಿ​ಲ?

ಭಾನುವಾರದ 17 ಪ್ರಕರಣಗಳ ಪೈಕಿ ವಿಜಯಪುರ 6, ಬೆಳಗಾವಿ 4, ಕಲಬುರಗಿ 3, ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಮೈಸೂರಿನಲ್ಲಿ 1 ಪ್ರಕರಣ ವರದಿಯಾಗಿದೆ.

ಇಷ್ಟರ ನಡುವೆ ಸಮಾಧಾನದ ವಿಚಾರವೆಂದರೆ ಭಾನುವಾರ 15 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಇದರಿಂದಾಗಿ ಈವರೆಗೆ 54 ಮಂದಿ ಸೋಂಕುಮುಕ್ತರಾಗಿ ಬಿಡುಗಡೆ ಹೊಂದಿದಂತಾಗಿದೆ.

ಸೋಂಕಿನ ಮೂಲ ಗೊತ್ತಾಗದೇ ಆತಂಕ:

ಆತಂಕಕಾರಿ ಸಂಗತಿಯೆಂದರೆ, ವಿಜಯಪುರದಲ್ಲಿ ವರದಿಯಾದ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. 60 ವರ್ಷದ ಮಹಿಳೆಗೆ ತೀವ್ರ ಉಸಿರಾಟ ತೊಂದರೆ (ಎಸ್‌ಎಆರ್‌ಐ) ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಲಕ್ಷಣಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರೆ ಈ ವೇಳೆ ಸೋಂಕು ದೃಢಪಟ್ಟಿದೆ. ಇದೆ ಜಿಲ್ಲೆಯ ಇನ್ನೂ ಐದು ಮಂದಿಗೆ ( 49 ವರ್ಷದ ವ್ಯಕ್ತಿ, 20 ವರ್ಷದ ಯುವತಿ, 12 ಹಾಗೂ 13 ವರ್ಷದ ಬಾಲಕಿಯರು ಹಾಗೂ 10 ವರ್ಷದ ಬಾಲಕನಿಗೆ) ಸೋಂಕು ದೃಢಪಟ್ಟಿದೆ.

ಈ ಆರು ಮಂದಿಗೆ ಸೋಂಕು ತಗುಲಿದ್ದು ಎಲ್ಲಿಂದ ಎಂಬ ಮೂಲ ಈವರೆಗೂ ಪತ್ತೆಯಾಗಿಲ್ಲ. ಇವರ ಪ್ರಯಾಣದ ಹಿನ್ನೆಲೆ ಬಗ್ಗೆ ತನಿಖೆ ನಡೆಸುತ್ತಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಗುರುತಿಸಿ ಕ್ವಾರಂಟೈನ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನಲ್ಲಿ ನಂಜನಗೂಡು ಔಷಧ ಕಾರ್ಖಾನೆಯ ನೌಕರನ ಸಂಪರ್ಕದಿಂದ 32 ವರ್ಷದ ಮೈಸೂರಿನ ವ್ಯಕ್ತಿಗೆ ಸೋಂಕು ತಗುಲಿದೆ. ಈ ಮೂಲಕ ನಂಜನಗೂಡು ಸೋಂಕು ಕ್ಲಸ್ಟರ್‌ನಿಂದ ಸೋಂಕಿತರಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದ್ದು, ಒಟ್ಟು ಮೈಸೂರಿನ ಸೋಂಕು ಪ್ರಕರಣ ಅರ್ಧಶತಕದ (48) ಗಡಿ ಮುಟ್ಟಿದೆ.

ಲಾಕ್‌ಡೌನ್‌: ದಿನಸಿಗೆ ಜನರ ಪರದಾಟ, ಸಂಕಷ್ಟದಲ್ಲಿ ಗ್ರಾಮೀಣ ಭಾಗದ ಮಂದಿ!

ತಬ್ಲೀಘಿಗಳಿಂದ ಮತ್ತೆ 4 ಸೋಂಕು:

ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ ಜಮಾತ್‌ಗೆ ತೆರಳಿದ್ದ 150ನೇ ಸೋಂಕಿತ ಮಹಿಳೆಯಿಂದ (41) ಬೆಳಗಾವಿಯ ಮೂರು ಮಂದಿಗೆ ಸೋಂಕು ಹರಡಿದೆ. 19 ವರ್ಷದ ಯುವಕ, 25 ವರ್ಷದ ಯುವಕ ಹಾಗೂ 55 ವರ್ಷದ ವ್ಯಕ್ತಿಗೆ ಇವರಿಂದ ಸೋಂಕು ತಗುಲಿದೆ. ಅಲ್ಲದೆ, ಜಬ್ಲೀಘಿ ಜಮಾತ್‌ನಿಂದ ಸೋಂಕಿತನಾಗಿದ್ದ 128ನೇ ವ್ಯಕ್ತಿಯಿಂದ 38 ವರ್ಷದ ಬೆಳಗಾವಿಯ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡಿದೆ.

ಉಳಿದಂತೆ ಬಿಬಿಎಂಪಿ ವಾಪ್ತಿಯಲ್ಲಿ ಮಾ.21 ರಂದು ಇಂಡೋನೇಷ್ಯಾದಿಂದ ದೇಶಕ್ಕೆ ವಾಪಸಾಗಿದ್ದ 58 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇನ್ನು ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 75 ವರ್ಷದ ಮಹಿಳೆ ಹಾಗೂ 76 ವರ್ಷದ ವೃದ್ಧನಿಗೂ ಸೋಂಕು ತಗುಲಿದೆ.

ಶತಕ ದಾಟಿದ ವಿದೇಶ ಸಂಪರ್ಕದ ಸೋಂಕು

ಇಂಡೋನೇಷ್ಯಾದ ಪ್ರವಾಸ ಹಿನ್ನೆಲೆ ಹೊಂದಿರುವ 58 ವರ್ಷದ ವ್ಯಕ್ತಿಗೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ವಿದೇಶಿ ಪ್ರಯಾಣಿಕರು, ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತರಿಗೆ ಒಟ್ಟು 100 ಮಂದಿಗೆ ರಾಜ್ಯದಲ್ಲಿ ಸೋಂಕು ಹರಡಿದಂತಾಗಿದೆ. ಈ ಪೈಕಿ 33 ಮಂದಿ ವಿದೇಶಿಯರು, 13 ಮಂದಿ ಸಂಪರ್ಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ದೇಶದಲ್ಲಿ 9000 ದಾಟಿದ ಕೊರೋನಾ ಸೋಂಕು, ಮೃತರ ಸಂಖ್ಯೆ 327ಕ್ಕೆ!

2 ವರ್ಷದ ಮಗುವಿಗೆ ಸೋಂಕು ದೃಢ

ಭಾನು​ವಾರ ಕಲ​ಬು​ರ​ಗಿಯ 2 ವರ್ಷದ ಮಗು​ವಿಗೂ ಕೊರೋನಾ ಸೋಂಕು ತಗು​ಲಿದೆ. ತೀರ್ವ ಉಸಿ​ರಾಟ ಸಮಸ್ಯೆಯಿಂದ ಬಳ​ಲು​ತ್ತಿದ್ದ ಮಗು​ವನ್ನು ಪರೀಕ್ಷೆ ಮಾಡಿ​ದಾಗ ಸೋಂಕು ದೃಢ​ಪ​ಟ್ಟಿದೆ. ಇವರ ಮನೆ​ಯಲ್ಲಿ ಯಾರಿಗೂ ಸೋಂಕಿಲ್ಲ. ಆದರೂ ಸೋಂಕು ಬಂದಿದ್ದು ಹೇಗೆ ಎಂದು ಪರಿ​ಶೀ​ಲಿ​ಸ​ಲಾ​ಗು​ತ್ತಿದೆ.

ಕಲಬುರ​ಗಿಯಲ್ಲಿ 177ನೇ ಸೋಂಕಿತನ 24 ವರ್ಷದ ಸೊಸೆಗೂ ಸೋಂಕು ಹರಡಿದೆ. ಇದೇ ರೋಗಿಯ ಸಂಪರ್ಕದಿಂದ 38 ವರ್ಷದ ಮಹಿಳೆಗೆ ಸೋಂಕು ಹರಡಿದೆ.