Asianet Suvarna News Asianet Suvarna News

Karnataka Rain Updates: ಕರಾವಳಿ ಜಿಲ್ಲೆಗೆ ರೆಡ್‌ ಅಲರ್ಟ್, ಮಹಾಮಳೆಗೆ ತತ್ತರಿಸಿದ ರಾಜ್ಯದ 7 ಜಿಲ್ಲೆ!

  •  ದ.ಕ., ಉಡುಪಿ ಜಿಲ್ಲೆಯಲ್ಲಿ ಇಂದು ಭಾರೀ ಮಳೆ,  20 ಸೆಂಮೀ ಮೀರುವ ಭೀತಿ
  • ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ 7 ಜಿಲ್ಲೆಯಲ್ಲಿ ವಿಪರೀತ ಮಳೆ
  • ಹಾಸನದಲ್ಲಿ 25 ಕುಟುಂಬ ಅಪಾಯದಲ್ಲಿ

 

Karnataka Rain Updates Coastal red alert several districts in Karnataka heavy rainfall gow
Author
Bengaluru, First Published Jul 7, 2022, 1:55 PM IST

ಬೆಂಗಳೂರು (ಜು.7): ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿದ್ದರೂ ನಿರಂತರ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುವಾರ ರೆಡ್‌ ಅಲರ್ಚ್‌ ಘೋಷಣೆ ಮಾಡಲಾಗಿದ್ದು ಉತ್ತರ ಕನ್ನಡದಲ್ಲೂ ಆರೆಂಜ್‌ ಅಲರ್ಚ್‌ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೂರೂ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಏತನ್ಮಧ್ಯೆ ಭಾರೀ ಮಳೆಗೆ ಭೂಕುಸಿತವುಂಟಾಗಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡದ ಬಂಟ್ವಾಳದಿಂದ ವರದಿಯಾಗಿದೆ.

ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲೂ ಭಾರೀ ಮಳೆ ಮುಂದುವರಿದಿದ್ದು ಕೊಡಗಿನ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸ, ಎನ್‌.ಆರ್‌.ಪುರ, ಮೂಡಿಗೆರೆ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೂ 4 ದಿನಗಳ ಕಾಲ ಗಾಳಿಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, 20.45 ಸೆಂ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಗೆ 8 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, 4 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 81 ವಿದ್ಯುತ್‌ ಕಂಬಗಳು ಮುರಿದಿವೆ. ಜೊತೆಗೆ ಉಳ್ಳಾಲದ ಉಚ್ಚಿಲ ಸೀಗ್ರೌಂಡಿನಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಅನೇಕ ಮನೆಗಳು ಅಪಾಯದ ಅಂಚಿನಲ್ಲಿವೆ.

ಕರಾವಳಿಯಲ್ಲಿ ಮಳೆ ಆರ್ಭಟ, ಶಾಲಾ ಕಾಲೇಜುಗಳಿಗೆ ರಜೆ, ನದಿ ತೀರದ ಜನರಿಗೆ ಎಚ್ಚರಿಕೆ

ಧಾರಾಕಾರ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪಂಜಿಕಲ್ಲು ಸಮೀಪ ನೇಲ್ಯಪಲ್ಕೆ ಸಮೀಪ ಕಜೆಬೈಲು ಎಂಬಲ್ಲಿ ಶೆಡ್‌ ಮನೆಯ ಮೇಲೆ ಧರೆಕುಸಿದು ಕೇರಳ ಮೂಲದ ನಾಲ್ವರು ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕರು ಅದರಡಿ ಸಿಲುಕಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಪೈಕಿ ಮೂವರನ್ನು ರಕ್ಷಿಸಲಾಗಿದ್ದು, ಒಬ್ಬ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ಬುಧವಾರವೂ ನೀರಿನ ಹರಿವು ಕಡಿಮೆಯಾಗಿರಲಿಲ್ಲ. ಕೋಟ ಸಮೀಪದ ಹತ್ತಾರು ಮನೆಗಳು ಜಲಾವೃತವಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಣಾ ಕಾರ್ಯ ನಡೆಸಿ, ಅಲ್ಲಿನ ಜನರನ್ನು ಸ್ಥಳಾಂತರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ಧಾಪುರ, ಕುಮಟಾ, ಭಟ್ಕಳಗಳಲ್ಲಿ ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಗಂಗಾವಳಿ ನದಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಬೋಟ್‌ನಿಂದ ಐವರನ್ನು ರಕ್ಷಿಸಲಾಗಿದೆ. ಯಲ್ಲಾಪುರದಲ್ಲಿ ಭಾರಿ ಮಳೆಗೆ ಶಾಲಾ ಆವರಣ ಗೋಡೆ ಕುಸಿದಿದೆ. ಯಲ್ಲಾಪುರ ಹಾಗೂ ಸಿದ್ಧಾಪುರದಲ್ಲಿ ಮಳೆ ಮುಂದುವರಿದಲ್ಲಿ ಗಂಗಾವಳಿ ಹಾಗೂ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟಏರಲಿದೆ.

ಇನ್ನು ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡನಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹಠಾತ್ತನೆ ಹಿಡಿದ ಮಳೆಯಿಂದಾಗಿ ಭತ್ತದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಮನೆಯಲ್ಲಿದ್ದ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏತನ್ಮಧ್ಯೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಬುಧವಾರವೂ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿಯೂ ಮಳೆ ಮುಂದುವರೆದಿರುವುದರಿಂದ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಆದರೆ ಎಲ್ಲಿಯೂ ಪ್ರವಾಹ ಉಂಟಾಗಿಲ್ಲ. ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಮಂಗಳವಾರ ತೀವ್ರವಾಗಿದ್ದ ಮಳೆಯ ಪ್ರಮಾಣ ಬುಧವಾರ ತೀರಾ ಇಳಿಮುಖವಾಗಿದೆ.

ಮೇಘಸ್ಫೋಟಕ್ಕೆ ಹಿಮಾಚಲದಲ್ಲಿ 3 ಬಲಿ, ಹಲವು ಮಂದಿ ನೀರುಪಾಲು!

ಹೆದ್ದಾರಿ ಟೆಂಟ್‌ಗಳಲ್ಲಿರುವ 25 ಕುಟುಂಬ ಅಪಾಯದಲ್ಲಿ : ಹಾಸನ ಜಿಲ್ಲೆಯ ಪೈಕಿ ಸಕಲೇಶಪುರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಿಂದ ನೂರಾರು ಕಾರ್ಮಿಕರು ಬಂದಿದ್ದಾರೆ. ಆದರೆ, ಇವರಿಗೆಲ್ಲಾ ಉಳಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ಸಕಲೇಶಪುರ ತಾಲೂಕಿನ ದೋಣಿಗಾಲ್‌ ಬಳಿ ರಸ್ತೆಬದಿಯಲ್ಲಿ ಟೆಂಟ್‌ ಹಾಕಿಕೊಂಡಿದ್ದಾರೆ. ಗುತ್ತಿಗೆದಾರರು ಕಾರ್ಮಿಕರು ತಂಗಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ಸುಮಾರು 80 ಮಂದಿ ಗುಡ್ಡದ ಕೆಳಗೆ ಟೆಂಟ್‌ ಹಾಕಿಕೊಂಡು ಪ್ರಾಣ ಭಯದಲ್ಲೇ ದಿನ ದೂಡುತ್ತಿದ್ದಾರೆ. ಒಂದು ವೇಳೆ ಗುಡ್ಡವೇನಾದರು ಕುಸಿದಲ್ಲಿ ಭಾರೀ ಅನಾಹುತ ಸಂಭವಿಸಲಿದೆ.

ಮಂಗಳೂರು-ಮಡಿಕೇರಿ ಹೆದ್ದಾರಿಗೆ ಮತ್ತೆ ಬರೆ ಕುಸಿತ:   ಕೊಡಗು ಜಿಲ್ಲೆಯಲ್ಲೂ ಮಳೆ ಅನಾಹುತ ಮುಂದುವರಿದಿದ್ದು ಮಡಿಕೇರಿ- ಮಂಗಳೂರು ರಾಷ್ಟ್ರೀಯ ರಸ್ತೆಯಲ್ಲಿ ಮತ್ತೆ ಬರೆ ಕುಸಿತ ಉಂಟಾಗಿದೆ. ಹೆದ್ದಾರಿಯ ಕರ್ತೋಜಿ ಎಂಬಲ್ಲಿ ಭಾರಿ ಗಾತ್ರದ ಮಣ್ಣು ಕುಸಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಇದರಿಂದಾಗಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುವಂತಾಗಿದೆ. ಮಳೆ ಹೆಚ್ಚಾದರೆ ಮತ್ತಷ್ಟುಮಣ್ಣು ಕುಸಿದು ಸಂಚಾರ ಬಂದ್‌ ಆಗುವ ಸಾಧ್ಯತೆ ಕಂಡುಬರುತ್ತಿದೆ.

Follow Us:
Download App:
  • android
  • ios