ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಬೆಂಗಳೂರು (ಜು.06) ರಾಜ್ಯದಲ್ಲಿ ಮತ್ತೆ ಮಳೆ ಚುರುಕಾಗಿದೆ. ಮಳೆ ಕಾಣದೇ ಸೊರಗಿದ್ದ ಬೆಂಗಳೂರಿನಲ್ಲೂ ತುಂತುರು ಮಳೆಯಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದೀಗ ಭಾರಿ ಮಳೆಯಾಗುತ್ತಿರುವ ಕೊಡಗು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ (ಜು.07) ರಜೆ ಘೋಷಿಸಲಾಗಿದೆ. ಕೊಡುಗು ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಲಾಗಿದೆ. ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ರಜೆ ಘೋಷಿಸಿದ್ದಾರೆ.

ಕೊಡುಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನಾಳೆ (ಜಲೈ 07) ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆ ಒಂದು ದಿನದ ಮಟ್ಟಿಗೆ ರಜೆ ನೀಡಲಾಗಿದೆ. ಭಾರಿ ಮಳೆಯಿಂದ ಮುನ್ನಚ್ಚರಿಕಾ ಕ್ರಮವಾಗಿ ರಜೆ ನೀಡಲಾಗಿದೆ. ಕೊಡಗಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇತ್ತ ಕೆಲ ಪ್ರದೇಶಗಳು ಜಲಾವೃತಗೊಂಡಿದೆ.

ನಾಳೆ ರಾಜ್ಯದಲ್ಲಿ ಮಳೆ ಮುಂದುವರಿಕೆ

ನಾಳೆ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇತ್ತ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ. ಉಳಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳಯಾಗಲಿದೆ ಎಂದಿದೆ.

ಮಳೆಗೆ ಕುಸಿದ ಕೊಟ್ಟಿಗೆ

ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ಕೊಟ್ಟಿಗೆ ಕುಸಿದಿದೆ ಬಿದ್ದಿದೆ. ಲೋಕೇಶ್ ಎಂಬುವವರ ಕೊಟ್ಟಿಗೆ ತೀವ್ರ ಗಾಳಿ ಮಳೆಗೆ ಕುಸಿದು ಬಿದ್ದಿದೆ.

ಕುಸಿದು ಬಿದ್ದ ಮನೆ

ಉತ್ತರ ಕನ್ನಡದ ಶಿರಸಿ ತಾಲೂಕಿನ ಮರಾಠಿಕೊಪ್ಪದ ಜೋಡುಕಟ್ಟೆ ನಿವಾಸಿಯೊಬ್ಬರ ಮನೆ ಭಾರಿ ಮಳೆಗೆ ಕುಸಿದು ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮನೆಯ ಹಿಂಬದಿ ಮಣ್ಣು ಕುಸಿದು ಗೋಡೆಯಲ್ಲಿ ಬಿರುಕು ಮೂಡಿತ್ತು. ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರು. ಅಪಾಯ ಅರಿತ ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದ್ದರು. ಸಂಜೆ ವೇಳೆಗೆ ಮನೆ ಕುಸಿದು ಬಿದ್ದಿದೆ.