Asianet Suvarna News Asianet Suvarna News

ರಾಜ್ಯದಲ್ಲಿ ಗುಡುಗು ಮಳೆ ಅಬ್ಬರ : 7 ಬಲಿ

 ಮುಂಗಾರು ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ್ದು, ಸಿಡಿಲು ಬಡಿದು ಒಂದೇ ದಿನ 7 ಜನ ಸಾವನ್ನಪ್ಪಿದ ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

Karnataka Rain 7 Killed In Lightning Strikes
Author
Bengaluru, First Published Oct 16, 2018, 7:46 AM IST
  • Facebook
  • Twitter
  • Whatsapp

ಬೆಂಗಳೂರು :  ಮುಕ್ತಾಯವಾಗುವ ಹಂತದಲ್ಲಿರುವ ಮುಂಗಾರು ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ್ದು, ಸಿಡಿಲು ಬಡಿದು ಒಂದೇ ದಿನ 7 ಜನ ಸಾವನ್ನಪ್ಪಿದ ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

ದಾವಣಗೆರೆ ಜಿಲ್ಲೆಯಲ್ಲಿ ನಾಲ್ವರು, ಹಾವೇರಿ ಜಿಲ್ಲೆಯಲ್ಲಿ ಇಬ್ಬರು, ರಾಯಚೂರು ಜಿಲ್ಲೆಯಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ರಾಯಚೂರು, ಹಾವೇರಿ, ದಾವಣಗೆರೆ, ಬೆಂಗಳೂರಿನಲ್ಲಿ ಉತ್ತಮ ಮಳೆ ಸುರಿದಿದೆ.

ದಾವಣಗೆರೆಯಲ್ಲಿ ತಾಯಿ, ಮಗಳ ಸಾವು:  ಹರ​ಪ​ನ​ಹಳ್ಳಿ ತಾಲೂಕಿನ ಚೆನ್ನ​ಹಳ್ಳಿ ತಾಂಡಾದ ಲಲಿ​ತಾ ಬಾಯಿ (28 ವರ್ಷ), ಮಗಳು ಶ್ವೇತಾ ​(10), ಜಗ​ಳೂರು ತಾಲೂಕಿನ ಗೌಡಿ​ಕ​ಟ್ಟೆಯ ರೈತ ಮಹಿ​ಳೆ ಶಾಂತ​ಮ್ಮ ​(46) ಹಾಗೂ ಕಲ್ಲೇ​ನ​ಹ​ಳ್ಳಿ ಗ್ರಾಮ​ದ ರೈತ ಅಜ್ಜ​ಯ್ಯ​ (38) ಸಿಡಿ​ಲಿಗೆ ಬಲಿ​ಯಾದ ವ್ಯಕ್ತಿಗಳಾಗಿದ್ದಾರೆ.

ಚೆನ್ನ​ಹಳ್ಳಿ ತಾಂಡಾದ ಲಲಿತಾ ಬಾಯಿ ಮಗಳು ಶ್ವೇತಾ ಜತೆ ಹೊಲಕ್ಕೆ ಕೆಲ​ಸ​ಕ್ಕೆಂದು ಹೋಗಿ​ದ್ದರು. ಕೆಲಸ ಮಾಡು​ತ್ತಿ​ದ್ದ ವೇಳೆ ಜೋರಾಗಿ ಮಳೆ ಸುರಿ​ಯ​ಲಾ​ರಂಭಿ​ಸಿತು. ಹೀಗಾಗಿ ಮಳೆ​ಯಿಂದ ರಕ್ಷಿಸಿಕೊ​ಳ್ಳಲು ಕೂಲಿಗಳು ಊರಿಗೆ ವಾಪ​ಸ್ಸಾ​ಗಿ​ದ್ದಾರೆ. ಲಲಿತಾ​ಬಾಯಿ ಮತ್ತು ಮಗಳು ಶ್ವೇತಾ ಹೊಲ​ದಲ್ಲೇ ಮರ​ವೊಂದರ ಕೆಳಗೆ ತಾಡು​ಪಾಲು ಹಾಕಿಕೊಂಡು, ಊಟ ಮಾಡುತ್ತಾ ಕುಳಿ​ತಿ​ದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ತಾಯಿ, ಮಗಳು ಸ್ಥಳ​ದಲ್ಲೇ ಸಾವ​ನ್ನ​ಪ್ಪಿ​ದ್ದಾರೆ. ಇವರ ಜತೆಗಿದ್ದ ಅಜಯ್‌, ಕವನಾ ಎಂಬ ಮಕ್ಕ​ಳಿಗೆ ಸಣ್ಣ ಪುಟ್ಟಗಾಯ​ಗ​ಳಾ​ಗಿವೆ.

ಜಗ​ಳೂರು ತಾಲೂಕು ಗೌಡಿ​ಕಟ್ಟೆಗ್ರಾಮದ ಶಾಂತ​ಮ್ಮ​ ಗಿಡ್ಡಪ್ಪ (48 ವರ್ಷ) ಮೆಕ್ಕೆ​ಜೋಳ ಮುರಿ​ಯಲು ಹೊಲಕ್ಕೆ ಹೋಗಿ, ವಾಪಾ​ಸ್ಸಾ​ಗು​ತ್ತಿ​ದ್ದರು. ಆಗ ಜೋರಾಗಿ ಮಳೆ ಸುರಿ​ಯು​ತ್ತಿ​ದ್ದು​ದ​ರಿಂದ ತರಾ​ತು​ರಿ​ಯಲ್ಲಿ ಮನೆ​ಯತ್ತ ಹೆಜ್ಜೆ ಹಾಕಿದ್ದ ಶಾಂತ​ಮ್ಮ​ನಿಗೆ ಸಿಡಿಲು ಬಡಿದ ಪರಿ​ಣಾಮ ಸ್ಥಳ​ದಲ್ಲೇ ಸಾವ​ನ್ನ​ಪ್ಪಿ​ದ್ದಾರೆ. ಇದೇ ತಾಲೂಕಿನ ಕಲ್ಲೇ​ನ​ಹಳ್ಳಿ ಗ್ರಾಮದ ತನ್ನ ಹೊಲ​ದಲ್ಲಿ ಕೆಲಸ ಮಾಡು​ತ್ತಿದ್ದ ಅಜ್ಜ​ಯ್ಯ​(38 ವರ್ಷ​)​ನಿಗೆ ಸಿಡಿಲು ಬಡಿದ ಪರಿ​ಣಾಮ ಸಾವ​ನ್ನ​ಪ್ಪಿ​ದ್ದಾರೆ.

ಹಾವೇರಿಯಲ್ಲಿ ಇಬ್ಬರ ಸಾವು:  ಸವಣೂರ ತಾಲೂಕು ಕುಣಿಮೆಳ್ಳಿಹಳ್ಳಿ ಗ್ರಾಮದ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್‌ ಸಣ್ಣಭರಮಣ್ಣನವರ(22) ಹಾಗೂ ಹಾನಗಲ್‌ ತಾಲೂಕು ನರೇಗಲ್ಲ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರಪ್ಪ ಕೋತಿನ(50) ಸಿಡಿಲು ಬಡಿದು ಮೃತರಾಗಿದ್ದಾರೆ. ಶಿವಪುರದಲ್ಲಿ 9ನೇ ತರಗತಿ ವಿದ್ಯಾರ್ಥಿ ಜಾಫರ್‌ ಸಾಬ್‌ ಮಸೂತಿ(14) ಸಿಡಿಲಿನಿಂದ ಗಾಯಗೊಂಡಿದ್ದಾರೆ. ಹಾವೇರಿ, ರಾಣಿಬೆನ್ನೂರು, ಸವಣೂರು, ಹಾನಗಲ್‌, ಶಿಗ್ಗಾಂವಿಯಲ್ಲಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಆರಂಭವಾದ ಮಳೆ ಸುಮಾರು 1 ಗಂಟೆಗಳ ಕಾಲ ಸುರಿದಿದೆ.

ರಾಯಚೂರಿನಲ್ಲಿ ಒಬ್ಬರ ಸಾವು:  ಸಿರವಾರ ತಾಲೂಕಿನಲ್ಲಿ ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ. ಬ್ಯಾಗವಾಟ ಗ್ರಾಮದ ರೈತ ನಾಗಪ್ಪ ನಾಯಕ ಜಮೀನು ಕೆಲಸಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಮಳೆ ಆರಂಭವಾಗಿತ್ತು. ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಮರದ ಅಡಿಯಲ್ಲಿ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಿರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಪರೀತ ಗುಡುಗು, ಮಿಂಚು ಸಹಿತ ಮಳೆಯಾಗಿದೆ.

Follow Us:
Download App:
  • android
  • ios