Asianet Suvarna News Asianet Suvarna News

ಖಾಸಗಿ ಬಸ್‌ 6000 ಸುಲಿಗೆಗೆ, 2000 ದಂಡ! ಕಾಟಾಚಾರಕ್ಕೆ ದಂಡ ವಿಧಿಸುತ್ತಿರುವ ಸಾರಿಗೆ ಇಲಾಖೆ

ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಮೂರು, ನಾಲ್ಕು, ಐದು ಪಟ್ಟು ಹೆಚ್ಚಿಸಿರುವ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಬೇಕಿರುವ ಸಾರಿಗೆ ಇಲಾಖೆಯು ಕಾಟಾಚಾರದ ಕ್ರಮ ಕೈಗೊಳ್ಳುತ್ತಿದೆ.

karnataka Private bus 6000 fare 2000 penalty, the transport department not taking serious action gow
Author
First Published Oct 23, 2022, 2:35 PM IST

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಅ.23): ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿರುವ ಖಾಸಗಿ ಬಸ್‌ಗಳಿಗೆ ಸಾರಿಗೆ ಇಲಾಖೆಯಿಂದ ಹಾಕುತ್ತಿರುವ ದಂಡ ಹೆಚ್ಚು ಕಡಿಮೆ ಆ ಬಸ್‌ನ ಒಂದು ಸೀಟ್‌ನ ಟಿಕೆಟ್‌ ದರದಷ್ಟು ಮಾತ್ರ!. ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಮೂರು, ನಾಲ್ಕು, ಐದು ಪಟ್ಟು ಹೆಚ್ಚಿಸಿರುವ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಬೇಕಿರುವ ಸಾರಿಗೆ ಇಲಾಖೆಯು ಕಾಟಾಚಾರದ ಕ್ರಮ ಕೈಗೊಳ್ಳುತ್ತಿದೆ. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಮಾರ್ಗದಲ್ಲಿ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಕನಿಷ್ಠ .2000ದಿಂದ ಗರಿಷ್ಠ .6000 ರವರೆಗೂ ಪಡೆಯುತ್ತಿವೆ. ಅಂತಹ ಬಸ್‌ಗಳಿಗೆ ಸಾರಿಗೆ ಇಲಾಖೆ ವಿಧಿಸುತ್ತಿರುವ ದಂಡವು .2000ರಿಂದ 5000 ಮಾತ್ರ. ಈ ಮೂಲಕ ಖಾಸಗಿ ಬಸ್‌ಗಳು ಒಬ್ಬ ಪ್ರಯಾಣಿಕರ ಟಿಕೆಟ್‌ ಮೊತ್ತವನ್ನು ಸಾರಿಗೆ ಇಲಾಖೆಗೆ ದಂಡದ ರೂಪದಲ್ಲಿ ಪಾವತಿಸಿದರೆ ಸಾಕು ಆ ದಿನವಿಡೀ ಪ್ರಯಾಣಿಕರ ಸುಲಿಗೆಯನ್ನು ಮಾಡಬಹುದಾಗಿದೆ. ‘ಗುರುವಾರ ಮತ್ತು ಶುಕ್ರವಾರ ಸೇರಿ 300ಕ್ಕೂ ಅಧಿಕ ಬಸ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲ ಬಾರಿ .2 ಸಾವಿರ ದಂಡ ಹಾಕಲಾಗುವುದು. ಆ ಬಳಿಕ ಮತ್ತೆ ಪುನಾರಾವರ್ತನೆಯಾದರೆ ದಂಡ ಮೊತ್ತ ಹೆಚ್ಚಿಸಲಾಗುತ್ತದೆ’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಂಡ ಮೊತ್ತವು ಅತ್ಯಂತ ಕಡಿಮೆ ಇರುವುದರಿಂದ ಒಂದು ಅಥವಾ ಎರಡು ಸೀಟ್‌ನ ಮೊತ್ತ ದಂಡವಾಗಲಿ ಹೋಗಲಿ, ಉಳಿದ 30-35 ಸೀಟ್‌ ಮೊತ್ತ ಲಾಭವಾಗುತ್ತದೆ ಎಂದುಕೊಂಡು ಬಹುತೇಕ ಖಾಸಗಿ ಬಸ್‌ ಕಂಪನಿಗಳು ಸುಲಿಗೆಯನ್ನು ಮುಂದುವರೆಸುತ್ತಿವೆ.

ದಂಡ ಕಟ್ಟಿದ ರಸೀದಿಯೇ ಸುಲಿಗೆ ರಹದಾರಿ: ಸಾರಿಗೆ ಇಲಾಖೆಯು ದಿನಕ್ಕೆ ಒಂದು ಬಾರಿ ದಂಡ ಹಾಕಬಹುದಾಗಿದೆ. ಒಮ್ಮೆ ದಂಡ ಕಟ್ಟಿದರೆ ಮುಂದಿನ 24 ಗಂಟೆವರೆಗೂ ದಂಡ ವಿಧಿಸುವಂತಿಲ್ಲ. ಈ ನಿಯಮವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು ಒಮ್ಮೆ ಪ್ರಯಾಣ ದರ ಹೆಚ್ಚು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸಿ ದಿನಪೂರ್ತಿ ಪ್ರಯಾಣಿಕರಿಂದ ಮೂರುಪಟ್ಟು ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ಉದಾಹರಣೆಗೆ, ಬೆಂಗಳೂರಿನಿಂದ ಬೆಳಗಾವಿಗೆ ತೆರಳುವ ಖಾಸಗಿ ಬಸ್‌ ಅದೇ ದಿನ ರಾತ್ರಿ ಬೆಳಗಾವಿಯಿಂದ ಬೆಂಗಳೂರಿಗೆ ಹಿಂದಿರುಗುತ್ತದೆ. ಒಮ್ಮೆ ದಂಡ ಪಾವತಿಸಿದ .2000 ರಸೀದಿ ಪಡೆದುಕೊಂಡು ಒಂದು ಸೀಟ್‌ಗೆ ಟಿಕೆಟ್‌ ದರ ಕನಿಷ್ಠ .2000 ಪಡೆಯುತ್ತಿವೆ.

ದುಬಾರಿ ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು: ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ಎಚ್ಚರಿಕೆ

ಪ್ರಯಾಣಿಕರ ನಿರೀಕ್ಷೆ ಹುಸಿ: ಸಾರಿಗೆ ಸಚಿವರು ಖಾಸಗಿ ಬಸ್‌ ಮಾಲಿಕರಿಗೆ ಕಠಿಣ ಸೂಚನೆ ನೀಡಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ಕೆಲ ಬಸ್‌ಗಳ ಮೇಲೆ ದಾಳಿ ನಡೆಸಿ ದಂಡಪ್ರಯೋಗ ಮಾಡುತ್ತಿದ್ದಾರೆ. ಈ ಕ್ರಮಗಳಿಂದ ಖಾಸಗಿ ಬಸ್‌ ಕಂಪನಿಗಳು ಎಚ್ಚೆತ್ತುಕೊಂಡು ದರ ಏರಿಕೆಯಿಂದ ಹಿಂದೆ ಸರಿಯಬಹುದು ಪ್ರಯಾಣಿಕರ ನಿರೀಕ್ಷೆ ಹುಸಿಯಾಗಿದೆ. ಕನಿಷ್ಠ ಪ್ರಮಾಣದ ದಂಡ ಕಟ್ಟಿಬಹುತೇಕ ಖಾಸಗಿ ಬಸ್‌ ಪ್ರಯಾಣಿಕರ ಸುಲಿಗೆ ಮಾಡುತ್ತಿವೆ.

 

ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್‌ಗಳಿಂದ ದುಪ್ಪಟ್ಟ ದರ ವಸೂಲಿ, ಸಾರಿಗೆ ಇಲಾಖೆ ಅಧಿಕಾರಿಗಳ ದಾಳಿ!

ಹಬ್ಬದ ಬೋನಸ್‌ ಬಸ್‌ ಟಿಕೆಟ್‌ಗೆ ಸುರಿಯಬೇಕು: ದೂರದ ಊರುಗಳಿಂದ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದೇವೆ. ಹಬ್ಬಕ್ಕೆ ಕುಟುಂಬ ಸಮೇತ ಊರಿಗೆ ಹೋಗುತ್ತೇವೆ. ದೀಪಾವಳಿ ಹಿನ್ನೆಲೆಯಲ್ಲಿ ಕಂಪನಿಗಳಲ್ಲಿ ಐದು-ಹತ್ತು ಸಾವಿರ ರು. ಬೋನಸ್‌ ನೀಡುತ್ತಾರೆ. ಸದ್ಯ ಟಿಕೆಟ್‌ ದರ ಸಾಮಾನ್ಯ ದಿನಕ್ಕಿಂತ ಮೂರುಪಟ್ಟು ಹೆಚ್ಚಿದೆ. ಬೋನಸ್‌ ಹಣವನ್ನೆಲ್ಲಾ ಬಸ್‌ ಟಿಕೆಟ್‌ಗೆ ಸುರಿಯಬೇಕಾದ ಅನಿವಾರ್ಯತೆ ಇದೆ ಎಂದು ಟಿಕೆಟ್‌ ದರ ಏರಿಕೆ ಕುರಿತು ಖಾಸಗಿ ಕಂಪನಿ ಉದ್ಯೋಗಿ ನಾಗರಾಜ ಬೇಸರ ವ್ಯಕ್ತಪಡಿಸಿದರು.

Follow Us:
Download App:
  • android
  • ios