Asianet Suvarna News Asianet Suvarna News

ಮುಜರಾಯಿ ದೇಗುಲಗಳಲ್ಲಿ ಅರ್ಚಕರಿಗೆ ಮೊಬೈಲ್‌ ನಿಷೇಧ?: ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ

ರಾಜ್ಯದ ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಅರ್ಚಕರ ಮೊಬೈಲ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೆಲ ದೀಕ್ಷಿತರು (ಪುರೋಹಿತರು), ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಮಾಡಿದ್ದಾರೆ. ತಜ್ಞರ ಜತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜೊಲ್ಲೆ ತಿಳಿಸಿದ್ದಾರೆ. 

Karnataka priest association Meets Minister Shashikala jolle And Requests ban mobile use in temple gvd
Author
First Published Dec 18, 2022, 2:40 AM IST

ಬೆಂಗಳೂರು (ಡಿ.18): ರಾಜ್ಯದ ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಅರ್ಚಕರ ಮೊಬೈಲ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೆಲ ದೀಕ್ಷಿತರು (ಪುರೋಹಿತರು), ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಮಾಡಿದ್ದಾರೆ. ತಜ್ಞರ ಜತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜೊಲ್ಲೆ ತಿಳಿಸಿದ್ದಾರೆ. ಶನಿವಾರ ವಿಕಾಸಸೌಧದಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ದೇವಸ್ಥಾನದಲ್ಲಿ ಅರ್ಚಕರು, ಪುರೋಹಿತರು ಮೊಬೈಲ್‌ ಬಳಕೆ ಪ್ರಸ್ತಾಪಿಸಿ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ‘ದೀಕ್ಷಿತರು’ ಕೋರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ, ‘ಅರ್ಚಕರು ದೇವಸ್ಥಾನದಲ್ಲಿ ಪೂಜೆ ಮಾಡುವ ಹಿನ್ನಲೆ ಭಕ್ತಿಭಾವದಿಂದ ಪೂಜೆ ಮಾಡುವುದಕ್ಕೆ ಅಡಚಣೆಯಾಗಬಹುದು. ತಜ್ಞರ ಜೊತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ಎಂದು ತಿಳಿಸಿದ್ದಾರೆ. ಪೂಜಾ ಕಾರ್ಯ ಮಧ್ಯೆ ಅನಗತ್ಯ ಕಿರಿಕಿರಿ ತಪ್ಪಿಸುವ ದೇವಸ್ಥಾನದ ಗಾಂಭೀರ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ದೇವಸ್ಥಾನ ಕಮಿಟಿಗಳೇ ಅರ್ಚಕರು, ಪುರೋಹಿತರು ಸೇರಿದಂತೆ ಗರ್ಭಗುಡಿ, ದೇವರ ಸೇವಾ ಕಾರ್ಯದಲ್ಲಿ ಮೊಬೈಲ್‌ ಬಳಸದಂತೆ ನಿಯಮ ಜಾರಿಗೊಳಿಸಿವೆ. ಇದೇ ಮಾದರಿಯನ್ನು ಮುಜರಾಯಿ ಇಲಾಖೆ ತಮ್ಮ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಗೊಳಿಸಬೇಕು ಎಂಬ ಅಭಿಪ್ರಾಯ ಕೆಲ ದೀಕ್ಷಿತರಿಂದ ಕೇಳಿಬಂದಿದೆ.

ಸರ್ಕಾರ ಅಭಿವೃದ್ಧಿ ಪರವಾಗಿದ್ದರೆ ಹೆಚ್ಚು ಅನುದಾನ: ವಿಧಾನಸಭಾಧ್ಯಕ್ಷ ಕಾಗೇರಿ

ಧರ್ಮರಾಯ ದೇಗುಲ ಜಮೀನು ಒತ್ತುವರಿ ತೆರವು ಶೀಘ್ರ: ನಗರ ತಿಗಳರಪೇಟೆಯಲ್ಲಿರುವ ಐತಿಹಾಸಿಕ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನು ಒತ್ತುವರಿ ತೆರವು ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಶನಿವಾರ ದೇವಾಲಯಕ್ಕೆ ಸೇರಿದ ವಿವೇಕ ನಗರದಲ್ಲಿರುವ ನೀಲಸಂದ್ರ ಗ್ರಾಮದ ಸರ್ವೇ ನಂ 79 ರಲ್ಲಿ 15 ಎಕರೆ 12 ಗುಂಟೆ ಜಮೀನಿನ ಒತ್ತುವರಿಯ ಬಗ್ಗೆ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು. ‘ಬೆಂಗಳೂರು ನಗರದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ ಆಸ್ತಿಗಳು ಒತ್ತುವರಿ ಆಗಿರುವ ಬಗ್ಗೆ ಸಾಕಷ್ಟುಚರ್ಚೆಗಳು ಆಗಿವೆ.

1965 ರಿಂದಲೂ ಈ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಸಾಕಷ್ಟುದಾವೆಗಳು ನಡೆದಿವೆ. ಈ ಎಲ್ಲಾ ದಾವೆಗಳಲ್ಲೂ ನಮ್ಮ ಪರ ಆದೇಶ ಬಂದಿದೆ. ಆದರೂ ಕೂಡಾ ಇದುವರೆಗೂ ದೇವಸ್ಥಾನಕ್ಕೆ ಸೇರಿದ ಜಮೀನನ್ನ ಸರ್ಕಾರ ತನ್ನ ವಶಕ್ಕೆ ತಗೆದುಕೊಳ್ಳಲು ಸಾಧ್ಯವಾಗಿಲ್ಲ. ಈಗ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತಗೆದುಕೊಂಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಒತ್ತುವರಿ ತೆರವುಗೊಳಿಸಲಾಗುವುದು ಎಂದರು. ಈ ದೇವಸ್ಥಾನದ ಜಮೀನು ಒತ್ತುವರಿ ತೆರವಿಗೆ ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಪೊಲೀಸ್‌, ಕಂದಾಯ ಹೀಗೆ ಹಲವಾರು ಇಲಾಖೆಗಳ ಸಮನ್ವಯದ ಅಗತ್ಯತೆ ಇದೆ. ಸಮನ್ವಯಕ್ಕಾಗಿ ಇಲಾಖಾ ಮುಖ್ಯಸ್ಥರುಗಳ ಸಮಿತಿಯನ್ನು ರಚಿಸುವ ಬಗ್ಗೆ ಚಿಂತಿಸಲಾಗುವುದು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ರೈತರಿಗೆ 223 ಕೋಟಿ ಬೆಳೆ ಪರಿಹಾರ: ಸಚಿವ ಬಿ.ಸಿ.ಪಾಟೀಲ್‌

ಶೀಘ್ರದಲ್ಲಿ ಖಾಲಿ ಜಮೀನಿಗೆ ಕಾಂಪೌಂಡ್‌: ಎಂ.ಮುನಿಸ್ವಾಮಿ ಎಂಬುವವರು ಕಳೆದ ಹಲವಾರು ದಶಕಗಳಿಂದ ಈ ಭೂಮಿಯ ಬಗ್ಗೆ ಹಲವಾರು ನ್ಯಾಯಾಲಯಗಳಲ್ಲಿ ದೂರಗಳನ್ನ ದಾಲಿಸಿದ್ದಾರೆ. ಸುಮಾರು 7 ಬಾರಿ ವಿವಿಧ ನ್ಯಾಯಾಲಯ ಈ ಜಮೀನು ದೇವಸ್ಥಾನಕ್ಕೆ ಸೇರಿದ್ದು ಎಂಬ ಆದೇಶಗಳು ಸಿಕ್ಕಿವೆ. ಆದರೆ, ಮತ್ತೆ ಇನ್ನೊಂದು ದಾವೆಯನ್ನ ಹೂಡುವ ಮೂಲಕ ಈ ವಿಷಯವನ್ನು ಮತ್ತಷ್ಟುಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಖಾಲಿ ಇರುವ ಜಮೀನಿಗೆ ಕಾಂಪೌಂಡ್‌ ನಿರ್ಮಿಸಲು ಕ್ರಮಗಳನ್ನು ತಗೆದುಕೊಳ್ಳಲಾಗುವುದು ಎಂದರು.

Follow Us:
Download App:
  • android
  • ios