ತೆರಿಗೆ ಹೆಸರಲ್ಲಿ ಕಲೆಕ್ಷನ್ಗೆ ಕುಂತ ಸರ್ಕಾರ, ಬಡವರ ಬದುಕು ನಾಳೆಯಿಂದ ದುರ್ಬರ!
ಹಾಲಿನ ಬೆಲೆ, ತರಕಾರಿಗಳ ಬೆಲೆ, ಹೋಟೆಲ್ ತಿಂಡಿಗಳ ಬೆಲೆ ಮುಂದಿನ ತಿಂಗಳಿನಿಂದ ದುಬಾರಿಯಾಗೋದು ನಿಶ್ಚಿತವಾಗಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳಾದ ಹಾಲು, ದಿನಸಿ, ತರಕಾರಿಗಳ ಬೆಲೆ ಗಗನಕ್ಕೆ ಏರಿದ್ದರೆ, ಬಡವನ ಜೀವನ ಪಾತಾಳಕ್ಕೆ ಇಳಿದಿದೆ.
ಬೆಂಗಳೂರು (ಜು.31): ಆಗಸ್ಟ್ ತಿಂಗಳಿನಿಂದ ನೀವು ದುಡಿಯೋ ಸಂಬಳ ಸಾಲೋದಿಲ್ಲ. ಒಂದಷ್ಟು ಹೆಚ್ಚು ದುಡಿಯಲೇಬೇಕು. ಅದಕ್ಕೆ ಕಾರಣ ದುಬಾರಿ ದುನಿಯಾ. ಸಿದ್ಧರಾಮಯ್ಯ ಮಂಡಿಸಿದ್ದ ಬಜೆಟ್‌ನ ಸಮಯದಲ್ಲಿ ಈಗಾಗಲೇ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಬಕಾರಿ ಇಲಾಖೆಯಲ್ಲಿ ದರ ಏರಿಕೆಯನ್ನು ಸಿದ್ಧರಾಮಯ್ಯ ಸರ್ಕಾರ ಖಚಿತಪಡಿಸಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್, ಗೃಹಬಳಕೆಯ ಗ್ಯಾಸ್ ದರವನ್ನು ಇಳಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಮಾಂಸದ ರೇಟ್ ಜಾಸ್ತಿ ಅಂದ್ಕೊಂಡು ತರಕಾರಿ ತಿನ್ನೋಕೆ ಹೋದ್ರೆ, ಟೊಮ್ಯಾಟೋ ಬದಲು ಹುಣಸೆ ಹಣ್ಣು ಹಾಕಿ ಅಡುಗೆ ಮಾಡೋ ಪರಿಸ್ಥಿತಿ ಬಂದಿದೆ. ಇನ್ನು ಹಣ್ಣುಗಳ ದರಗಳನ್ನು ಕೇಳೋದೇ ಬೇಡ. ನೆಮ್ಮದಿಯಾಗಿ ಮನೆಯಲ್ಲೇ ಟೀ-ಕಾಫಿ ಕುಡಿಯೋಣ ಎಂದರೆ ನಾಳೆಯಿಂದ ಅದೂ ಕೂಡ ದುಬಾರಿ. ಹಾಲಿನ ದರ ಲೀಟರ್‌ಗೆ ಮೂರು ರೂಪಾಯಿ ಏರಿಕೆ ನಾಳೆಯಿಂದ ಜಾರಿಗೆ ಬರಲಿದೆ. ಹಾಲಿನ ದರ ಏರಿಕೆಯಾಗಿದ್ದೇ, ಸಿಕ್ಕಿದ್ದೇ ಚಾನ್ಸ್ ಎಂದುಕೊಂಡಿರುವ ಹೋಟೆಲ್ ಮಾಲೀಕರ ಸಂಘ ಹೋಟೆಲ್ ತಿಂಡಿಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆ ಮಾಡಿದೆ. ಹಾಲಿನ ದರ ಏರಿಕೆ ಆದರೆ, ಹಾಲಿನಿಂದ ಮಾಡುವ ಉತ್ಪನ್ನಗಳ ದರ ಏರಿಕೆ ಮಾಡಬೇಕು. ಆದರೆ, ಹೋಟೆಲ್‌ಗಳು ಎಲ್ಲಾ ತಿಂಡಿಗಳಿಗೂ ಏಕರೂಪವಾಗಿ ಶೇ.10ರಷ್ಟು ಬೆಲೆ ಏರಿಕೆ ಮಾಡಿದೆ.
ಇನ್ನು ಕೆಲವೇ ದಿನಗಳಲ್ಲಿ ಸೇವಾ ವಲಯಕ್ಕೆ ಬರುವ ವ್ಯಕ್ತಿಗಳು ತಮ್ಮ ಶುಲ್ಕವನ್ನು ಏರಿಕೆ ಮಾಡಲಿದ್ದಾರೆ. ಅಂದರೆ, ಮನೆಗೆಲಸದವರು, ಎಲೆಕ್ಟ್ರಿಶಿಯನ್‌ಗಳು, ಪ್ಲಂಬರ್‌ಗಳ ಸೇವಾ ಶುಲ್ಕ ಏರಿಕೆಯಾಗಲಿದೆ. ಇಲ್ಲಿಯವರೆಗೂ 600-700 ರೂಪಾಯಿ ದಿನಗೂಲಿ ಪಡೆಯುತ್ತಿದ್ದ ಇವರುಗಳನ್ನು ಇದನ್ನೀಗ 1100ಕ್ಕೆ ಏರಿಸುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ದುಬಾರಿ ದುನಿಯಾ, ಪುಣ್ಯಕ್ಕೆ ಬಡವ ಉಸಿರಾಡೋ ಗಾಳಿಗೆ ದುಡ್ಡು ಜಾಸ್ತಿಯಾಗಿಲ್ಲ!
1. ಹಾಲಿನ ದರ 3 ರೂಪಾಯಿ ಏರಿಕೆ: ಹೊಸ ಸರ್ಕಾರ ಇನ್ನೇನು ಅಧಿಕಾರ ವಹಿಸಿಕೊಂಡಿತ್ತು ಎನ್ನುವಾಗಲೇ, ಕೆಎಂಎಫ್ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾಪ ಇಟ್ಟಿತ್ತು. ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವ ನಿರ್ಧಾರ ಮಾಡಿದ್ದ ಕೆಎಂಎಫ್, ಸರ್ಕಾರದ ಜೊತೆಗಿನ ಚರ್ಚೆಯ ಬಳಿಕ 3 ರೂಪಾಯಿ ಏರಿಕೆಗೆ ನಿರ್ಧಾರ ಮಾಡಿದೆ. ಆಗಸ್ಟ್ 1 ರಿಂದ ಇದು ಜಾರಿಯಾಗಲಿದೆ.
2. ಹೋಟೆಲ್ ಕಾಫಿ ತಿಂಡಿಗಳ ಬೆಲೆ ಏರಿಕೆ: ಹಾಲಿನ ದರ ಏರಿಕೆ ಬೆನ್ನಲ್ಲಿಯೇ ಹೋಟೆಲ್ ಮಾಲೀಕರ ಸಂಘ, ಕಾಫಿ ತಿಂಡಿಗಳ ಬೆಲೆ ಏರಿಕೆ ಮಾಡಿದೆ. ನಾಳೆಯಿಂದ ಹೋಟೆಲ್‌ಗಳಲ್ಲಿ ಒಂದು ಪುಟ್ಟ ಕಾಫಿ ತೆಗೆದುಕೊಂಡರೆ, 18 ರೂಪಾಯಿ ಕೊಡಬೇಕು. ಇನ್ನು ಮಿನಿ ಮೀಲ್ಸ್ ತಿನ್ನೋ ಹಣದಲ್ಲಿ ಬೆಂಗಳೂರಿನಿಂದ-ಮೈಸೂರಿಗೆ ನೀವು ಪ್ರಯಾಣ ಮಾಡಿ ಬರಬಹುದು.
3. ತರಕಾರಿಗಳ ಬೆಲೆ ಕೇಳೋದೇ ಬೇಡ: ರಾಜ್ಯದಲ್ಲಿ ಟೊಮ್ಯಾಟೋ ಬೆಲೆ 200 ರೂಪಾಯಿ ದಾಟಿದೆ. ಅದಕ್ಕೆ ಏನೇ ಕಾರಣವಿರಲಿ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ತರಕಾರಿಗಳನ್ನ ವಿತರಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿಲ್ಲ. ಟೊಮ್ಯಾಟೋ ಜೊತೆ ಇತರ ತರಕಾರಿಗಳಾ ಬೀನ್ಸ್, ಹಸಿಮೆಣಸಿನಕಾಯಿ, ಸೌತೇಕಾಯಿ, ಸೋರೆಕಾಯಿ ಸೇರಿದಂತೆ ಬಹುತೇಕ ಎಲ್ಲದರ ಬೆಲೆಯಲ್ಲೂ ಏರಿಕೆಯಾಗಿದೆ. ರಾಜ್ಯ ಸರ್ಕಾರ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
4. ವಿದ್ಯುತ್ ಬಿಲ್ ದುಪ್ಪಟ್ಟು: ಇಂಧನ ವೆಚ್ಚದ ನೆಪ ಇಟ್ಟುಕೊಂಡು ರಾಜ್ಯ ಸರ್ಕಾರ ವಿದ್ಯುತ್ ಬಿಲ್ ದರ ಏರಿಕೆ ಮಾಡಿದೆ. ಸಾಮಾನ್ಯ ಜನರು ಗೃಹಜ್ಯೋತಿಯ ಉಚಿತ 200 ಯುನಿಟ್ ಲಾಭ ಪಡೆದರೂ, ಕಮರ್ಷಿಯಲ್ ವಿದ್ಯುತ್ ಮೀಟರ್‌ಗಳ ಬೆಲೆ ದುಬಾರಿಯಾಗಿದೆ. ವಿದ್ಯುತ್ ಬಿಲ್ ಏರಿಕೆ ಈಗಾಗಲೇ ಜಾರಿಗೆ ಬಂದಿದೆ.
5. ಪ್ಲಂಬರ್, ಎಲೆಕ್ಟ್ರಿಶಿಯನ್, ಮನೆಗೆಲಸದವರ ಶುಲ್ಕ ಏರಿಕೆ: ಎಲ್ಲಾ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲಿಯೇ ಪ್ಲಂಬರ್‌ಗಳು, ಎಲೆಕ್ಟ್ರಿಶಿಯನ್ ಹಾಗೂ ಮನೆಗೆಲಸದವರ ಶುಲ್ಕ ಕೂಡ ಏರಿಕೆಯಾಗಲಿದೆ. ಈವರೆಗೂ 700-800 ರೂಪಾಯಿಗೆ ಸಿಗುತ್ತಿದೆ. ಇನ್ನು ಮುಂದೆ ಇವರ ಶುಲ್ಕ 1100ಕ್ಕೆ ಏರಿಕೆಯಾಗುವ ಲಕ್ಷಣವಿದೆ.
6. ಮದ್ಯದ ಬೆಲೆಯಲ್ಲಿ ಏರಿಕೆ: ಸರ್ಕಾರದ ಐದು ಗ್ಯಾರಂಟಿ ಜಾರಿಗೆ ಹಣಕಾಸು ಹೊಂದಿಕೆ ಮಾಡುವ ಕಾರಣಕ್ಕೆ ಸರ್ಕಾರ ಬಂದ ಬೆನ್ನಲ್ಲಿಯೇ ಮದ್ಯದ ದರಗಳಲ್ಲಿ ಭಾರೀ ಏರಿಕೆ ಮಡಿದೆ. ಬಿಯರ್, ವಿಸ್ಕಿ, ಬ್ರ್ಯಾಂಡಿ ಎಲ್ಲವುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಈಗಾಗಲೇ ಇದು ಜಾರಿಗೆ ಬಂದಿದೆ.
7. ನೋಂದಣಿ ಮತ್ತು ಮುದ್ರಾಂಕ ಇಲಾಖೆ: ಭೂಮಿಯ ನೋಂದಣಿ, ಜಾಗ ಖರೀದಿ, ಮನೆ ಮಾಡಿಕೊಳ್ಳುವುದು ಕೂಡ ಕಷ್ಟವಾಗಲಿದ್ದು, ಸರ್ಕಾರ ಈಗಾಗಲೇ ಇವುಗಳ ನೋಂದಣಿಗಳ ಬೆಲೆಯಲ್ಲಿ ಏರಿಕೆ ಮಾಡಿದೆ.
8. ಗಣಿ ಮತ್ತು ಭೂಜ್ಞಾನ ಇಲಾಖೆ: ಈ ಇಲಾಖೆಯ ರಾಜಸ್ವ ಸಂಗ್ರಹ ಏರಿಕೆಯ ಗುರಿ ನೀಡಲಾಗಿದೆ. ಇದರಿಂದಾಗಿ ಮನೆ ನಿರ್ಮಾಣದ ವಸ್ತುಗಳಾದ ಜಲ್ಲಿ, ಮರಳು, ಎಂಸ್ಯಾಂಡ್, ಗ್ರ್ಯಾನೈಟ್ ಇವೆಲ್ಲವುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆ ಭಾಗ್ಯವನ್ನು ಸರ್ಕಾರ ಕರುಣಿಸಿದೆ: ಹೆಚ್‌ಡಿಕೆ
9. ಮೋಟಾರ್ ವೆಹಿಕಲ್ ಟ್ಯಾಕ್ಸ್ ಏರಿಕೆ: ಶಾಲೆ-ಕಾಲೇಜು ವಾಹನ, ಕ್ಯಾಬ್, ಟ್ರಕ್‍ಗಳ ಮೇಲೆ ವಿಧಿಸುವ ತೆರಿಗೆಯನ್ನು ಸರ್ಕಾರ ಹೆಚ್ಚಿಸಿದೆ. 15 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್‍ಗಳಿಗೆ ಆ ವಾಹನದ 15% ರಷ್ಟು ತೆರಿಗೆ, 10 ಲಕ್ಷ ರೂ. ನಿಂದ 15 ಲಕ್ಷ ರೂ. ಬೆಲೆಯ ಕ್ಯಾಬ್‍ಗಳಿಗೆ ಅದರ ಮೌಲ್ಯದ 9% ರಷ್ಟು ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಹೆಚ್ಚಳದಿಂದ 472 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ತರಕಾರಿ ಬಳಿಕ ನಾನ್ ವೆಜ್ ಪ್ರಿಯರಿಗೆ ಶಾಕ್: ಮೀನುಗಳ ಬೆಲೆ ಏರಿಕೆ
10. ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ: ಒಪ್ಪಂದದ ಆಧಾರದಲ್ಲಿ ನಿರ್ವಹಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ದರಗಳನ್ನು ಏರಿಕೆ ಮಾಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗೆ ನೀಡುವ ಸಾಂದರ್ಭಿಕ ಒಪ್ಪಂದದ ಬಸ್‌ಗಳ ಪ್ರಯಾಣ ದರ ಏರಿಸಿದ ಕೆಎಸ್‌ಆರ್‌ಟಿಸಿ.ಪ್ರತಿ ಕಿ.ಮೀ ಗೆ 2 ರೂ.ನಿಂದ 5 ರೂ.ವರೆಗೆ ದರ ಏರಿಕೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾಡಿದೆ. ಪರಿಷ್ಕೃತ ದರವು ಇದೇ ಆಗಸ್ಟ್ 1ರಿಂದಲೇ ಜಾರಿಯಾಗಲಿದೆ.