Asianet Suvarna News Asianet Suvarna News

ರಾಜ್ಯದಲ್ಲಿ ಈ ವರ್ಷ 220 ಸಲ ಸ್ಯಾಟಲೈಟ್ ಫೋನ್ ಬಳಸಿ ಕರೆ!

* ರಾಜ್ಯದಲ್ಲಿ 9 ತಿಂಗಳಲ್ಲಿ 220 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್‌ ಕರೆ

* ವಿಧಾನಸಭೆಗೆ ಗೃಹ ಮಂತ್ರಿ ಆಘಾತಕಾರಿ ಮಾಹಿತಿ

* ಕಳೆದ ವರ್ಷ 256 ಬಾರಿ ಉಪಗ್ರಹ ಫೋನ್‌ ಬಳಕೆ

Karnataka Police in touch with intelligence agencies over satellite phone calls pod
Author
Bangalore, First Published Sep 22, 2021, 7:41 AM IST
  • Facebook
  • Twitter
  • Whatsapp

ವಿಧಾನಸಭೆ(ಸೆ.22): ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 220 ಬಾರಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಬಹಿರಂಗಪಡಿಸಿದರು.

ಮಂಗಳವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಯು.ಟಿ.ಖಾದರ್‌, ಉಡುಪಿ ಹಾಗೂ ದಕ್ಷಿಣ ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ಆಗಾಗ್ಗೆ ಸ್ಯಾಟ್‌ಲೈಟ್‌ ಫೋನ್‌ ಬಳಕೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತದೆ. ಇದರಿಂದ ಜನರು ಗೊಂದಲ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಸತ್ಯವಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ಸುಳ್ಳಾಗಿದ್ದರೆ ಜನರಿಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 2011ರ ಮುಂಬೈ ದಾಳಿ ನಂತರ ಸ್ಯಾಟ್‌ಲೈಟ್‌ ಫೋನ್‌ ಬಳಕೆ ನಿಷೇಧಿಸಲಾಗಿದೆ. ಆದರೆ, 2020ರಲ್ಲಿ 256 ಮತ್ತು 2021ರಲ್ಲಿ 220 ಬಾರಿ ರಾಜ್ಯದಲ್ಲಿ ಸ್ಯಾಟ್‌ಲೈಟ್‌ ಫೋನ್‌ ಬಳಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಇದು ದೇಶದ ಭದ್ರತೆ ವಿಚಾರ ಆಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಸಂಶೋಧನೆ ಮತ್ತು ವಿಶ್ಲೇಷಣೆ ದಳ (ರಾ), ಗುಪ್ತಚರ ದಳದಂತಹ (ಐಬಿ) ಸಂಸ್ಥೆಗಳು ನೀಡುವ ಮಾಹಿತಿ ಅವಲೋಕಿಸಿ ಸ್ಥಳೀಯ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ. ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಈ ಬಗ್ಗೆ ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದರು.

ಕೇಂದ್ರ ಗುಪ್ತದಳದ ಆತಂಕ:

ಇತ್ತೀಚೆಗೆ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಕಾಡುಗಳು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿರುವ ಬಗ್ಗೆ ಕೇಂದ್ರ ಗುಪ್ತದಳ ಆತಂಕ ವ್ಯಕ್ತಪಡಿಸಿತ್ತು. ಒಂದು ವಾರದ ಅವಧಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಯಾದಗಿರಿ ಜಿಲ್ಲೆಗಳ ನಾಲ್ಕು ಕಡೆಗಳಲ್ಲಿ ಇಂತಹ ಫೋನ್‌ ಕರೆಗಳ ಲೊಕೇಶನ್‌ ಪತ್ತೆಯಾಗಿದ್ದು, ವಿದೇಶಕ್ಕೆ ಅವುಗಳು ಸಂಪರ್ಕ ಹೊಂದಿರುವುದು ತೀವ್ರ ಭೀತಿಗೆ ಕಾರಣವಾಗಿತ್ತು.

ಇದಕ್ಕೂ ಮುನ್ನ ಶ್ರೀಲಂಕಾದಿಂದ ಜಾಗತಿಕ ಮಟ್ಟದ ರಕ್ತಪಿಪಾಸು ಉಗ್ರ ಸಂಘಟನೆ ಐಸಿಸ್‌ನ ಶಂಕಿತ 12 ಮಂದಿ ಉಗ್ರರು ಭಾರತದ ಕರಾವಳಿಗೆ ನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ ಬಂದಿತ್ತು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ತೀರದ ಪ್ರದೇಶದಲ್ಲಿ ಭದ್ರತಾ ಪಡೆಗಳು ನಿಗಾವಹಿಸಿದ್ದವು. ಹೀಗಾಗಿ ಸ್ಯಾಟ್‌ಲೈಟ್‌ ಪೋನ್‌ ಬಳಕೆ ವಿಚಾರವು ಹೆಚ್ಚಿನ ಭೀತಿಗೆ ಕಾರಣವಾಗಿತ್ತು.

Follow Us:
Download App:
  • android
  • ios