ಬೆಂಗಳೂರು[ಜ.29]: ರಾಜ್ಯ ಸಚಿವ ಸಂಪುಟದ ವಿಸ್ತರಣೆಯ ಬಿಕ್ಕಟ್ಟು ಇದೇ ತಿಂಗಳಾಂತ್ಯಕ್ಕೆ ನಡೆಯಬೇಕಿರುವ ನೂತನ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಆಯ್ಕೆಯನ್ನು ಕೂಡಾ ಕಗ್ಗಂಟುಗೊಳಿಸಿದೆ.

ವಿದೇಶ ಪ್ರವಾಸ ಮುಗಿಸಿ ಮರಳಿದ ಮುಖ್ಯಮಂತ್ರಿಗಳ ಜೊತೆ ಖಾಸಗಿ ಭೇಟಿಗೆ ಡಿಜಿಪಿ ಹುದ್ದೆ ಆಕಾಂಕ್ಷಿಗಳು ತೀವ್ರವಾಗಿ ಯತ್ನಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳಾಗಲಿ ಅಥವಾ ಗೃಹ ಸಚಿವರಾಗಲಿ ಡಿಜಿ-ಐಜಿಪಿ ಆಯ್ಕೆ ಸಂಬಂಧ ಸಮಾಲೋಚನೆಗೆ ಸಮಯ ನೀಡುತ್ತಿಲ್ಲ. ಇದರಿಂದ ನಿರ್ಗಮಿತ ಡಿಜಿಪಿ ನೀಲಮಣಿ ಎನ್‌.ರಾಜು ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಪೊಲೀಸ್‌ ಇಲಾಖೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಹೀಗಾಗಿ ಮಹಾ ದಂಡನಾಯಕನ ಪದವಿ ಮೇಲೆ ಕಣ್ಣಿಟ್ಟಿರುವ ಸಿಐಡಿ ಡಿಜಿಪಿ ಪ್ರವೀಣ್‌ ಸೂದ್‌ ಹಾಗೂ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್‌ ಅವರು ಸರ್ಕಾರದ ಮಟ್ಟದಲ್ಲಿ ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಯಾರು ಹಿತವರು ಇಬ್ಬರಲ್ಲಿ:

ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರು ಜನವರಿ 31ರಂದು ಶುಕ್ರವಾರ ನಿವೃತ್ತರಾಗಲಿದ್ದಾರೆ. ಈ ಹುದ್ದೆಗೆ ಸೇವಾ ಹಿರಿತನ ಆಧಾರದ ಮೇರೆಗೆ 1985 ಬ್ಯಾಚ್‌ನ ಅಶಿತ್‌ ಮೋಹನ್‌ ಪ್ರಸಾದ್‌, 1986ರ ಸಾಲಿನ ಪ್ರವೀಣ್‌ ಸೂದ್‌ ಹಾಗೂ ಪಿ.ಕೆ.ಗರ್ಗ್‌ ಅರ್ಹತೆ ಹೊಂದಿದ್ದಾರೆ.

ಈ ಮೂವರ ಪೈಕಿ ಪ್ರಸಾದ್‌ ಅವರು 9 ತಿಂಗಳ ಸೇವಾವಧಿ ಹೊಂದಿದ್ದು, ಇದೇ ವರ್ಷದ ಅಕ್ಟೋಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಸೂದ್‌ ಅವರಿಗೆ 4 ವರ್ಷಗಳ ಸೇವಾವಧಿ ಇದೆ. ಹೀಗಾಗಿ ಡಿಜಿಪಿ ಹುದ್ದೆಗೆ ಈ ಇಬ್ಬರ ಹೆಸರುಗಳು ಮುಂಚೂಣಿಯಲ್ಲಿವೆ. ಸರ್ಕಾರದ ಮಟ್ಟದಲ್ಲಿ ಅಷ್ಟೇನೂ ಪ್ರಭಾವ ಹೊಂದಿಲ್ಲದ ಕಾರಣಕ್ಕೆ ಗರ್ಗ್‌ ಅವರು ತಾವಾಗಿಯೇ ರೇಸ್‌ನಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ:

ಡಿಜಿ-ಐಜಿಪಿ ಆಯ್ಕೆ ಜೊತೆಗೆ ರಾಜ್ಯ ಪೊಲೀಸ್‌ ಇಲಾಖೆಗೂ ಸರ್ಕಾರ ಮೇಜರ್‌ ಸರ್ಜರಿ ನಡೆಸಲು ಸಿದ್ಧತೆ ನಡೆಸಿದ್ದು, ಬಹುತೇಕ ಐಪಿಎಸ್‌ ಅಧಿಕಾರಿಗಳ ಸ್ಥಾನಪಲ್ಲಟವಾಗಲಿದೆ ಎಂ ತಿಳಿದು ಬಂದಿದೆ. ಬಹುಪಾಲು ಜಿಲ್ಲೆಗಳಿಗೆ ಎಸ್ಪಿಗಳು ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡವರಾಗಿದ್ದು, ಅವರೆಲ್ಲಾ ಎತ್ತಂಗಡಿ ಆಗುವ ಸಾಧ್ಯತೆಗಳಿವೆ. ಅದೇ ರೀತಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ಹೊರತುಪಡಿಸಿದರೆ ಇನ್ನುಳಿದ ಕಲುಬರಗಿ, ಬೆಳಗಾವಿ ಹಾಗೂ ಮೈಸೂರು ನಗರ ಆಯುಕ್ತರ ಬದಲಾವಣೆ ಸಾಧ್ಯತೆಗಳಿವೆ.

ನೀಲಮಣಿ ಅವರೊಂದಿಗೆ ಅಗ್ನಿಶಾಮಕ ದಳ ಡಿಜಿಪಿ ಎಂ.ಎನ್‌.ರೆಡ್ಡಿ ಹಾಗೂ ಪೊಲೀಸ್‌ ಗೃಹ ಮಂಡಳಿಯ ಡಿಜಿಪಿ ರಾಘವೇಂದ್ರ ಎಚ್‌.ಔರಾದ್ಕರ್‌ ಸಹ ನಿವೃತ್ತರಾಗಲಿದ್ದಾರೆ. ಹೀಗೆ ಅವರಿಂದ ತೆರವಾಗುವ ಮೂರು ಡಿಜಿಪಿ ಹುದ್ದೆಗಳಿಗೆ ಸೇವಾ ಹಿರಿತನದಲ್ಲಿ ಎಡಿಜಿಪಿಗಳಾದ ಎನ್‌.ಎಸ್‌.ಮೇಘರಿಕ್‌, ಆರ್‌.ಪಿ.ಶರ್ಮಾ ಹಾಗೂ ಅಲೋಕ್‌ ಮೋಹನ್‌ ಮುಂಬಡ್ತಿ ಹೊಂದಲಿದ್ದಾರೆ. ಈ ಮೂವರ ಎಡಿಜಿಪಿ ಹುದ್ದೆಗಳಿಗೆ ಬೆಂಗಳೂರಿನ ಹೆಚ್ಚುವರಿ ಆಯುಕ್ತ ಉಮೇಶ್‌ ಕುಮಾರ್‌, ಪಶ್ಚಿಮ ವಲಯದ ಐಜಿಪಿ ಅರುಣ್‌ ಚಕ್ರವರ್ತಿ ಹಾಗೂ ದಾವಣೆಗೆರೆ ವಲಯದ ಅಮೃತ್‌ ಪಾಲ್‌ ಅಲಂಕರಿಸಲಿದ್ದಾರೆ. ಈ ಐಜಿಪಿ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯಲಿದ್ದು, ಈಗಾಗಲೇ ಲಾಬಿ ಸಹ ಶುರುವಾಗಿದೆ ಎನ್ನಲಾಗಿದೆ.

ಉಮೇಶ್‌ ಕುಮಾರ್‌ ಅವರಿಂದ ತೆರವಾಗಲಿರುವ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸ್ಥಾನಕ್ಕೆ ಎಸಿಬಿ ಮುಖ್ಯಸ್ಥ ಚಂದ್ರಶೇಖರ್‌, ಆಡಳಿತ ವಿಭಾಗದ ಐಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಹಾಗೂ ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ ಚಂದ್ರ ಹೆಸರು ಕೇಳಿ ಬಂದಿದೆ. ಇನ್ನು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌, ಸಂಚಾರ ವಿಭಾಗದ ಜಗದೀಶ್‌ ಸೇರಿದಂತೆ ಐವರು ಡಿಸಿಪಿಗಳು ಸಹ ಎತ್ತಂಗಡಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.