Asianet Suvarna News Asianet Suvarna News

11 ಮಂದಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಲ್ಲಿ ಕೊಡುತ್ತಿರುವ ಆಹಾರವೇನು?

11 ಮಂದಿ ಆರೋಗ್ಯದಲ್ಲಿ ಚೇತರಿಕೆ| ನಾಲ್ಕು ಆಸ್ಪತ್ರೆಯಲ್ಲಿ ಚಿಕಿತ್ಸೆ| ಕಿಡ್ನಿ ಸಮಸ್ಯೆ ಬಳಲುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

Karnataka Out Of 14 Coronavirus Patients 11 Are Health Condition Is Improving
Author
Bangalore, First Published Mar 19, 2020, 8:00 AM IST

ಬೆಂಗಳೂರು[ಮಾ.19]: ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸೋಂಕು ದೃಢಪಟ್ಟಿರುವ 14 ಮಂದಿ ಪೈಕಿ ಹದಿಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹನ್ನೆರಡು ಮಂದಿಯ ಆರೋಗ್ಯ ಸ್ಥಿರವಾಗಿದೆ. ಒಬ್ಬ ಮಹಿಳೆ (67) ಮಾತ್ರ ಕಿಡ್ನಿ ಸಮಸ್ಯೆ (ಸಿಕೆಡಿ) ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟ14 ಮಂದಿ ಪೈಕಿ ಒಬ್ಬರು ಸಾವಿಗೀಡಾಗಿದ್ದು, 13 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ 11 ಮಂದಿ ಸೋಂಕಿತರಿದ್ದು, ಐವರು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ, ಆರು ಮಂದಿ ಕೆ.ಸಿ.ಜನರಲ್‌ ಆಸ್ಪತ್ರೆ, ಜಯನಗರ ಜನರಲ್‌ ಆಸ್ಪತ್ರೆ, ಸಿ.ವಿ.ರಾಮನ್‌ನಗರ ಜನರಲ್‌ ಆಸ್ಪತ್ರೆಯಲ್ಲಿ ಬಾಕಿ ಇಬ್ಬರು ಕಲಬುರಗಿ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟಮೊದಲ ವ್ಯಕ್ತಿ (46) ಹಾಗೂ ಸೋಂಕಿತ - 4 (50 ವಯಸ್ಸು) ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳಿವೆ. ವೈದ್ಯರು ಚಿಕಿತ್ಸೆ ಮೂಲಕ ನಿಯಂತ್ರಣದಲ್ಲಿ ಇರಿಸಿದ್ದಾರೆ. ಇತರರಿಗೆ ಕೇವಲ ಜ್ವರ, ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಯಿದೆ. ಎಲ್ಲರೂ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

15 ದಿನಗಳ ನಂತರ ಡಿಸ್ಚಾರ್ಜ್:

ಪ್ರಸ್ತುತ ಮೂರು ವ್ಯಕ್ತಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ, ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸೋಂಕಿತರ ಗಂಟಲು ದ್ರಾವಣ ಹಾಗೂ ರಕ್ತ ಮಾದರಿ ಪರೀಕ್ಷೆಗಳು ನೆಗೆಟಿವ್‌ ಬರಬೇಕು ಹಾಗೂ ಆಸ್ಪತ್ರೆ ಸೇರಿ 14 ದಿನಗಳ ಆಗಬೇಕು. ಆ ಬಳಿಕವೇ ಡಿಸ್ಚಾಜ್‌ರ್‍ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹೊರಗಡೆಯ ಊಟವೂ ತಿನ್ನಬಹುದು

ಸೋಂಕಿತ ವ್ಯಕ್ತಿಗಳಿಗೆ ಝೊಮೋಟೋ ಸೇರಿದಂತೆ ಆನ್‌ಲೈನ್‌ ಫುಡ್‌ ಡೆಲಿವರಿ ಆ್ಯಪ್‌ ಮೂಲಕ ಆಹಾರ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್‌ ಬಳಕೆ ಮಾಡಲೂ ಸಹ ಅವಕಾಶ ನೀಡಲಾಗಿದೆ. ಹೀಗಾಗಿ ಸೋಂಕಿತರು ಆಸ್ಪತ್ರೆಯಲ್ಲಿ ಆರಾಮವಾಗಿದ್ದಾರೆ.

ಆಸ್ಪತ್ರೆಯ ವತಿಯಿಂದ ಎಲ್ಲಾ ರೋಗಿಗಳಿಗೂ ನೀಡುವ ಆಹಾರ ನೀಡುತ್ತಿದ್ದು, ದಿನಕ್ಕೆ ಒಂದು ಬಾರಿ ತುಳಸಿ ದಳಗಳನ್ನು ಹಾಕಿ ಸಿದ್ಧಪಡಿಸಿದ ಜ್ಯೂಸ್‌, ಬೆಲ್ಲ ಒಳಗೊಂಡ ರಾಗಿ ಗಂಜಿ, ಹಾಲು ನೀಡಲಾಗುತ್ತಿದೆ. ಆದರೆ, ಹೊರಗಡೆಯಿಂದಲೂ ಸಹ ಮಾಂಸಾಹಾರ ತರಿಸಿಕೊಂಡು ಸೇವಿಸದಂತೆ ಸೂಚಿಸಿದ್ದು ಶಾಖಾಹಾರವನ್ನು ಪರಿಶೀಲಿಸಿ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ನೀಡುತ್ತಿರುವ ಆಹಾರ

*ಬೆಳಗ್ಗೆ ಉಪಹಾರ- ಇಡ್ಲಿ, ಪೊಂಗಲ್‌, ಬಿಸಿಬೇಳೆ ಬಾತ್‌, ಉಪ್ಪಿಟ್ಟು, ರವಾ ಇಡ್ಲಿ, ಬ್ರೆಡ್‌.

*ಮಧ್ಯಾಹ್ನ ಊಟ- ಎರಡು ಮೊಟ್ಟೆ, ರಾಗಿ ಮುದ್ದೆ, ಅನ್ನ, ತರಕಾರಿ ಸಾಂಬಾರ್‌, ಮೊಸರು ಮತ್ತು ಹಣ್ಣು.

*ರಾತ್ರಿ ಊಟ- ಅನ್ನ, ಎರಡು ಚಪಾತಿ, ತರಕಾರಿ ಪಲ್ಯ, ತರಕಾರಿ ಸಾಂಬಾರ್‌.

*ದಿನಕ್ಕೆ ಒಂದು ಬಾರಿ ತುಳಸಿ ದಳಗಳನ್ನು ಹಾಕಿ ಸಿದ್ಧಪಡಿಸಿದ ಜ್ಯೂಸ್‌, ಬೆಲ್ಲ ಒಳಗೊಂಡ ರಾಗಿ ಗಂಜಿ, ಹಾಲು.

Follow Us:
Download App:
  • android
  • ios