ಬೆಂಗಳೂರು [ಡಿ.17]:  ಬಸವನಗುಡಿಯ ನ್ಯಾಷನಲ್‌ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಪಾಳು ಬಿದ್ದಿರುವ 8,127 ಚದರ ಅಡಿ ಖಾಲಿ ಜಾಗವನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ನಿರ್ಮಾಣಕ್ಕೆ ಐದು ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡುವಂತೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಬಿಬಿಎಂಪಿ ತಿರಸ್ಕರಿಸಿದೆ.

ಗುತ್ತಿಗೆ ಆಧಾರದ ಮೇಲೆ ನಿವೇಶನ ನೀಡುವಂತೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಣ್ಣ ಅವರು 2018ರಲ್ಲಿ ಬಿಬಿಎಂಪಿಗೆ ಮನವಿ ಮಾಡಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸುವಂತೆ ವಿವಿಧ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಬಿಬಿಎಂಪಿ ಎಂಜಿನಿಯರಿಂಗ್‌, ತೋಟಗಾರಿಕೆ ಇಲಾಖೆ, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ನಿವೇಶನ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ವರದಿ ನೀಡಿವೆ. ಆದರೂ ಬಿಬಿಎಂಪಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನಿವೇಶನ ನೀಡುವ ಪ್ರಸ್ತಾವನೆ ಕೈಬಿಟ್ಟಿದೆ.

ಬೆಂಗಳೂರು : ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ...

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಣ್ಣ, ನಿವೇಶನ ಕೇಳಿದ ಜಾಗದಲ್ಲಿ ಕೆಪಿಟಿಸಿಎಲ್‌ನ ಪ್ರಸರಣ ಘಟಕ, ಮೆಟ್ರೋ ಸ್ಟೇಷನ್‌ ಹಾಗೂ ಬಿಬಿಎಂಪಿ ನರ್ಸರಿ ಇದೆ. ಇದೆಲ್ಲದರ ಬಳಕೆಯಿಂದ ಉಳಿದಿರುವ ಖಾಲಿ ಜಾಗವನ್ನು ನಗರ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡುವಂತೆ ಮನವಿ ಮಾಡಲಾಗಿತ್ತು. ಈ ಪ್ರಸ್ತಾವನೆಯನ್ನು ಬಿಬಿಎಂಪಿ ಕಳೆದ ಮೂರು ವರ್ಷಗಳಿಂದ ಮುಂದೂಡಲಾಗಿತ್ತು. ಈಗ ಪ್ರಸ್ತಾವನೆಯನ್ನೇ ಕೈಬಿಡಲಾಗಿದೆ. ನಗರದಲ್ಲಿ ಪರಭಾಷೆಯ ಪರಿಷತ್ತುಗಳ ನಿರ್ಮಾಣಕ್ಕೆ ಜಾಗ ನೀಡುತ್ತಿರುವ ಪಾಲಿಕೆ ಕನ್ನಡದ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಪ್ರಸ್ತಾವನೆ ಕೈ ಬಿಡುವುದಕ್ಕೆ ಕೌನ್ಸಿಲ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯ ಮರು ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಾಕಷ್ಟುಸಂಘ ಸಂಸ್ಥೆಗಳು ನಿವೇಶನಕ್ಕಾಗಿ ಮನವಿ ಮಾಡಿಕೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

-ಗೌತಮ್‌ ಕುಮಾರ್‌, ಬಿಬಿಎಂಪಿ ಮೇಯರ್‌.