2030ಕ್ಕೆ ವಿದ್ಯುತ್‌ ಸ್ವಾವಲಂಬನೆ ಕ್ಷೇತ್ರದಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನಕ್ಕೇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೊಡ್ಡಬಳ್ಳಾಪುರ (ಆ.24): 2030ಕ್ಕೆ ವಿದ್ಯುತ್‌ ಸ್ವಾವಲಂಬನೆ ಕ್ಷೇತ್ರದಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನಕ್ಕೇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದೊಡ್ಡಬಳ್ಳಾಪುರದ ತಮ್ಮ ಶೆಟ್ಟಿಹಳ್ಳಿಯಲ್ಲಿ ಹಿಟಾಚಿ ಎನರ್ಜಿ ಇಂಡಿಯಾ ಆಯೋಜಿಸಿದ್ದ ಪವರ್‌ ಕ್ವಾಲಿಟಿ ಪ್ರಾಡಕ್ಟ್ಸ್ ಫ್ಯಾಕ್ಟರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯ ಮಹತ್ವದ ಸ್ಥಾನ ಹೊಂದಿದೆ. 

ಪ್ರಧಾನಿ ಅವರ 5 ಟ್ರಿಲಿಯನ್‌ ಆರ್ಥಿಕತೆ ಪರಿಕಲ್ಪನೆಗೆ ಕರ್ನಾಟಕ 1 ಟ್ರಿಲಿಯನ್‌ ಕೊಡುಗೆ ನೀಡುವ ಮಹತ್ತರ ಗುರಿಯನ್ನು ಹೊಂದಲಾಗಿದೆ. ಜಾಗತಿಕ ಉತ್ಪಾದನಾ ಕೇಂದ್ರವಾಗಿ ರಾಜ್ಯವನ್ನು ಅಭಿವೃದ್ಧಿಪಡಿಸಲು ಸರ್ಕಾರ ಸ್ಪಷ್ಟಗುರಿ ಹೊಂದಿದ್ದು, ದೀರ್ಘಾವಧಿ ಬದ್ಧತೆಯ ಕೈಗಾರಿಕಾ ಪಾಲುದಾರಿಕೆಗೆ ವಿಶ್ವಮಟ್ಟದ ಕಂಪನಿಗಳೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇಂದು ದೇಶದಲ್ಲಿ ಒನ್‌ ನೇಷನ್‌ ಒನ್‌ ಗ್ರಿಡ್‌ ಪರಿಕಲ್ಪನೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ವಿದ್ಯುತ್‌ ವಿನಿಮಯ ಪ್ರಕ್ರಿಯೆ ಸರಳೀಕೃತಗೊಂಡಿದ್ದು, ವಿದ್ಯುತ್‌ ಕೊರತೆ ತಪ್ಪಿದೆ ಎಂದು ಹೇಳಿದರು.

ಕೊಡಗು ಕಾಳಗ ಸದ್ಯಕ್ಕೆ ರದ್ದು: ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಪ್ರತಿಭಟನೆ ಮಾಡಲ್ಲ

ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಗೆ ಹೋಗಲ್ಲ: ಎಸಿಬಿ ರದ್ದತಿ ಬಗ್ಗೆ ಹೈಕೋರ್ಟ್‌ ನೀಡಿರುವ ಆದೇಶ ಪಾಲನೆಗೆ ಒತ್ತು ನೀಡಲಾಗಿದ್ದು, ಲೋಕಾಯುಕ್ತ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿ ರದ್ದತಿ ಪ್ರಶ್ನಿಸಿ ಖಾಸಗಿ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಚ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದಕ್ಕೂ, ಸರ್ಕಾರಕ್ಕೂ ಸಂಬಂಧವಿಲ್ಲ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಎಸಿಬಿ ರದ್ದತಿ ವಿಚಾರ ಪ್ರಸ್ತಾಪವಾಗಿತ್ತು. ಹೀಗಾಗಿ ಸರ್ಕಾರದಿಂದ ಸುಪ್ರೀಂಕೋರ್ಚ್‌ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಜನೋತ್ಸವ ಬಳಿಕ ಕೆಲವರ ಭವಿಷ್ಯ ಕರಾಳ: ರಾಜ್ಯ ಸರ್ಕಾರದ ಯಶಸ್ವಿ 3 ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬರುವ ಸೆಪ್ಟೆಂಬರ್‌ 8ರಂದು ದೊಡ್ಡಬಳ್ಳಾಪುರದಲ್ಲಿ ಮರು ನಿಗದಿಯಾಗಿರುವ ಜನೋತ್ಸವ ಕಾರ‍್ಯಕ್ರಮ ಯಶಸ್ವಿಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಕೆಲವರಿಗೆ ಕರಾಳ ದಿನಗಳೇ ಎದುರಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾಂಗ್ರೆಸ್‌ ನಾಯಕರ ಹೆಸರು ಹೇಳದೆ ಕುಟುಕಿದ ಅವರು, ಬಿಜೆಪಿಯ ಜನಸ್ನೇಹಿ ಸರ್ಕಾರದ ಯಶಸ್ಸು ಕೆಲವರಿಗೆ ಕರಾಳವಾಗಿ ಕಂಡರೆ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ವಿದ್ಯುತ್‌ ವಿನಿಮಯದಿಂದ ಪ್ರಗತಿ: ಇಂದು ದೇಶದಲ್ಲಿ ಒನ್‌ ನೇಷನ್‌ ಒನ್‌ ಗ್ರಿಡ್‌ ಪರಿಕಲ್ಪನೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ವಿದ್ಯುತ್‌ ವಿನಿಮಯ ಪ್ರಕ್ರಿಯೆ ಸರಳೀಕೃತಗೊಂಡಿದ್ದು, ವಿದ್ಯುತ್‌ ಕೊರತೆ ತಪ್ಪಿದೆ. ಇಂದು ವಿದ್ಯುತ್‌ ಶೇಖರಣೆ ಬಹುದೊಡ್ಡ ಸವಾಲಾಗಿದ್ದು, ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಸರ್ಕಾರ ಒತ್ತು ನೀಡಿದೆ. ಹಸಿರು ಇಂಧನ ಹೆಚ್ಚಿನ ಆದ್ಯತೆಯ ಕ್ಷೇತ್ರವಾಗಿದೆ. ತಾಂತ್ರಿಕ ಶಕ್ತಿಗಳು ಬೆಸೆದುಕೊಂಡರೆ ಹೊಸಯುಗದ ಅನೇಕ ಸವಾಲುಗಳಿಗೆ ಸ್ಪೂರ್ತಿಯುತವಾದ ಉತ್ತರ ನೀಡುವುದರ ಜತೆಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ದೇಗುಲಕ್ಕೆ ಹೋದ ದಿನ ಮಾಂಸ ತಿಂದಿರಲಿಲ್ಲ: ಸಿದ್ದು

ಬಂಡವಾಳ ಆಕರ್ಷಣೆಯಲ್ಲಿ ಮಂಚೂಣಿ: ಕೆ.ಸುಧಾಕರ್‌ ಮಾತನಾಡಿ, ರಾಜ್ಯ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ನಮ್ಮ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಅನೇಕ ಜಾಗತಿಕ ಉದ್ಯಮಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿವೆ. ದೊಡ್ಡಬಳ್ಳಾಪುರದಲ್ಲಿ ತಲೆ ಎತ್ತಿರುವ ಹಿಟಾಚಿ ಕಂಪೆನಿಯವರ ಹೊಸ ಕಾರ್ಖಾನೆಯಿಂದ ಅನೇಕ ಯುವಕರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದರು. ಹಿಟಾಚಿ ಎನರ್ಜಿಯ ಜಾಗತಿಕ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಕ್ಲಾಡಿಯೊ ಫಾಚಿನ್‌, ಹಿಟಾಚಿ ಎನರ್ಜಿ ಇಂಡಿಯಾದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಎನ್‌.ವೇಣು, ಕೈಗಾರಿಕಾ ಇಲಾಖೆ ಅಪರ ಕಾರ‍್ಯದರ್ಶಿ ಡಾ.ರಮಣರೆಡ್ಡಿ ಮತ್ತಿತರರು ಭಾಗವಹಿಸಿದ್ದರು.