ನೇಕಾರ ಸಮ್ಮಾನ್‌ ನೆರವನ್ನು 5 ಸಾವಿರ ರೂಪಾಯಿಗೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.  ಅದರೊಂದಿಗೆ 46,000 ನೇಕಾರ ಮಕ್ಕಳಿಗೆ ಶೀಘ್ರ ವಿದ್ಯಾನಿಧಿ ಯೋಜನೆ ಪ್ರಾಪ್ತವಾಗಲಿದೆ. ಅದರೊಂದಿಗೆ ವಿದ್ಯುತ್‌ ಮಗ್ಗ ನೇಕಾರರಿಗೂ ನೆರವು ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಬೆಂಗಳೂರು (ಡಿ.17): ಕೈಮಗ್ಗ ನೇಕಾರರಿಗೆ ರಾಜ್ಯ ಸರ್ಕಾರವು ಬಂಪರ್‌ ಕೊಡುಗೆ ನೀಡಿದ್ದು, ನೋಂದಾಯಿತ ಕೈಮಗ್ಗ ನೇಕಾರರಿಗೆ ‘ನೇಕಾರ ಸಮ್ಮಾನ್‌’ ಅಡಿ ನೀಡುವ ಆರ್ಥಿಕ ನೆರವು ಪರಿಷ್ಕರಣೆಯ ಜತೆಗೆ ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಸೌಲಭ್ಯ ನೀಡಲು ಮುಂದಾಗಿದೆ. ಇದಲ್ಲದೆ, ನೇಕಾರರಿಗೆ ತಲಾ 50 ಸಾವಿರ ರು.ವರೆಗೆ ಧನಸಹಾಯ ನೀಡುವ ‘ಕಾಯಕ’ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಜೊತೆಗೆ ಕೈಮಗ್ಗ ನೇಕಾರರಿಗೆ ನೆರವು ನೀಡಿದಂತೆಯೇ ವಿದ್ಯುತ್‌ ಮಗ್ಗದವರಿಗೂ ನೆರವು ನೀಡಲು ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಕಾರರಿಗೆ ನೀಡುವ ಆರ್ಥಿಕ ನೆರವು ಪರಿಷ್ಕರಿಸಲಾದ ‘ನೇಕಾರ ಸಮ್ಮಾನ್‌’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕೈಮಗ್ಗ ನೇಕಾರರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವಾರ್ಷಿಕ ತಲಾ 5000 ರು.ನಂತೆ 23.43 ಕೋಟಿ ರು. ವರ್ಗಾವಣೆಗೆ ನಿಶಾನೆ ನೀಡಿದರು.
ಕೈಮಗ್ಗ ನೇಕಾರರ ಶ್ರಮವನ್ನು ಪರಿಗಣಿಸಿ ಮತ್ತು ಕೋವಿಡ್‌ ಮಹಾಮಾರಿ ಹಾಗೂ ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21ನೇ ಸಾಲಿನಿಂದ ಅನ್ವಯವಾಗುವಂತೆ ‘ನೇಕಾರ ಸಮ್ಮಾನ್‌’ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು.

2021-22ನೇ ಸಾಲಿನಲ್ಲಿ ನೇಕಾರ ಸಮ್ಮಾನ್‌ ಯೋಜನೆಯಡಿಯಲ್ಲಿ 49,544 ನೇಕಾರರಿಗೆ ಡಿಬಿಟಿ ಮೂಲಕ 9.90 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. 2022-23ನೇ ಸಾಲಿನ ಬಜೆಟ್‌ ಅನ್ವಯ ನೋಂದಾಯಿತ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವನ್ನು ಎರಡು ಸಾವಿರ ರು.ನಿಂದ ಐದು ಸಾವಿರ ರು.ಗೆ ಹೆಚ್ಚಿಸಲಾಗಿದೆ. ಈವರೆಗೆ 46,864 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೇಕಾರರ ಕಾಳಜಿ ವಹಿಸುವುದು ಸರ್ಕಾರ ಕರ್ತವ್ಯ. ಆದ್ದರಿಂದ ಸರ್ಕಾರವು ನೇಕಾರ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವನ್ನು ಎರಡು ಸಾವಿರ ರು.ನಿಂದ ಐದು ಸಾವಿರ ರು.ಗೆ ಹೆಚ್ಚಿಸಿದೆ. ಅಲ್ಲದೇ, ನೇಕಾರರಿಗೆ ತಲಾ 50 ಸಾವಿರ ರು. ವರೆಗೆ ಧನಸಹಾಯ ನೀಡುವ ‘ಕಾಯಕ’ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರ ಲಾಭವನ್ನು ನೇಕಾರರು ಪಡೆದುಕೊಳ್ಳಬೇಕು ಎಂದು ಹೇಳಿದರು.

‘ನೇಕಾರರ ಮಕ್ಕಳ ವಿದ್ಯಾನಿಧಿ’ ಯೋಜನೆಗೆ 46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು. ನೇಕಾರ ಕುಟುಂಬದ ವಿದ್ಯಾರ್ಥಿಗಳ ದಾಖಲೆಗಳನ್ನು 15 ದಿನದೊಳಗೆ ಪಡೆದು ಪಟ್ಟಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳಿಂದ ಯಾವುದೇ ರೀತಿಯ ಅರ್ಜಿಯನ್ನು ಪಡೆಯುವುದಿಲ್ಲ, ವಿದ್ಯಾನಿಧಿ ಮಕ್ಕಳ ಹಕ್ಕು ಎಂದರು.

Bagalkot : 15 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರಿಂದ ಬೆಳಗಾವಿಗೆ ಪಾದಯಾತ್ರೆ

ನೇಕಾರರ ಕಸುಬನ್ನು ಉನ್ನತೀಕರಿಸಿ ಉಳಿಸುವುದು ಬಹಳ ಮುಖ್ಯ. ಬಹಳ ಗಂಟೆಗಳ ಕಾಲ ಹತ್ತಿಯ ಮಧ್ಯೆಯೇ ಕೆಲಸ ಮಾಡಬೇಕಾಗುವುದರಿಂದ ನೇಕಾರರಿಗೆ ಅಸ್ತಮಾ, ಟಿಬಿಯಂತಹ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ಕೈಮಗ್ಗ ನೇಕಾರರ ಕಾಳಜಿ ವಹಿಸಲು ನೇಕಾರರ ಸಮ್ಮಾನ್‌ ಯೋಜನೆಯಡಿ ಎರಡು ಸಾವಿರ ರು.ಗಳ ಆರ್ಥಿಕ ನೆರವನ್ನು ಐದು ಸಾವಿರ ರು.ಗೆ ಹೆಚ್ಚಿಸಲಾಗಿದೆ. ಅವರ ಇತರೆ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಶನಿವಾರ ಇಂಧನ ಇಲಾಖೆ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಲಾಗುವುದು. ಕೈಮಗ್ಗ ನೇಕಾರರಿಗೆ ಸಾಲ ಮತ್ತು ಬಡ್ಡಿ ಮನ್ನಾ ಯೋಜನೆಗಳು ಜಾರಿಯಲ್ಲಿದ್ದು, ನೇಕಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕಾಯಕ ಯೋಜನೆಯಡಿ ಪ್ರತಿ ಕುಶಲಕರ್ಮಿಗೆ 50 ಸಾವಿರ ರು.ವರೆಗೆ ಧನಸಹಾಯ ನೀಡಲಾಗುತ್ತಿದೆ ಎಂದು ಹೇಳಿದರು.

ಗಣೇಶ ಪ್ರತಿಷ್ಠಾಪನೆ ಮರುದಿನ ನೇಕಾರರು ಆಚರಿಸುವ 'ಇಲಿವಾರದ ದಿನ' ವಿಶೇಷ ಆಚರಣೆ

ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಮಾತನಾಡಿ, ಕೈಮಗ್ಗ ನೇಕಾರರಿಗೆ ನೆರವು ನೀಡಿದಂತೆಯೇ ವಿದ್ಯುತ್‌ ಮಗ್ಗದವರಿಗೂ ನೆರವು ನೀಡಲು ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. ನೇಕಾರರ ಅಭಿವೃದ್ಧಿ, ಸಮಸ್ಯೆ ಕುರಿತು ಚರ್ಚಿಸಿ ಅವರಿಗೆ ಮತ್ತಷ್ಟುಬಲ ತುಂಬುವ ನಿಟ್ಟಿನಲ್ಲಿ ಶನಿವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ನೇಕಾರರ ಪ್ರತಿನಿಧಿಗಳು, ಶಾಸಕರು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ನೇಕಾರ ಸಮ್ಮಾನ್‌ ಮೊತ್ತವನ್ನು ಹೆಚ್ಚಿಸಬೇಕು ಎಂಬುದು ನೇಕಾರರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳು ಒಳ್ಳೆಯ ನಿರ್ಣಯ ಕೈಗೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕಿ ಪೂರ್ಣಿಮಾ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.