Asianet Suvarna News Asianet Suvarna News

ಗಣೇಶ ಪ್ರತಿಷ್ಠಾಪನೆ ಮರುದಿನ ನೇಕಾರರು ಆಚರಿಸುವ 'ಇಲಿವಾರದ ದಿನ' ವಿಶೇಷ ಆಚರಣೆ

ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮರುದಿನ ನೇಕಾರರು ಆಚರಿಸುವ  ಇಲಿವಾರದ ದಿನದ" ವಿಶೇಷ ಆಚರಣೆ.
ನೇಕಾರಿಕೆ ಮಾಡುವಾಗ ವರ್ಷವಿಡಿ ವಿಘ್ನವಾಗದೇ ತಮ್ಮನ್ನು & ತಮ್ಮ ಉದ್ಯೋಗವನ್ನು ಕಾಪಾಡಲೆಂದು ಮೂಷಕವಾಹನಿಗೆ ಮೊರೆ.

nekars Celebrates mouse day In Bagalakot rbj
Author
First Published Sep 1, 2022, 2:18 PM IST

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
 

ಬಾಗಲಕೋಟೆ, (ಸೆಪ್ಟೆಂಬರ್. 01): ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬ ಸುಭಿಕ್ಷೆಗಾಗಿ ಮತ್ತು ತಮ್ಮ ತಮ್ಮ ಉದ್ಯೋಗದ ಶ್ರೇಯಸ್ಸಿಗಾಗಿ ದೇವರ ಮೊರೆ ಹೋಗಿ ಒಂದಿಲ್ಲೊಂದು ವಿಶೇಷ ಆಚರಣೆ ಮೂಲಕ ದೇವರ ಮೊರೆ ಹೋಗೋದನ್ನು ನೋಡಿದ್ದೇವೆ. ಆದರೆ ನೇಕಾರರು ಸಹ ಇದರಂತೆ ದೇವರಿಗೆ ಮೊರೆ ಹೋಗುವುದರ ಜೊತೆಗೆ ಗಣೇಶನ ಸಾರಥಿ ಮೂಷಕ ವಾಹನನಿಗೆ ಮೊರೆ ಹೋಗುವ ಮೂಲಕ ಇಲಿವಾರದ ವಿಶೇಷ ದಿನವನ್ನ ಆಚರಿಸುತ್ತಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಕೆರೂರು, ಗುಳೇದಗುಡ್ಡ, ಅಮೀನಗಡ, ಇಲಕಲ್, ರಬಕವಿ ಬನಹಟ್ಟಿ, ಮಹಾಲಿಂಗಪೂರ ಪಟ್ಟಣಗಳಲ್ಲಿ ಹೀಗೆ ನೇಕಾರರ ಕುಟುಂಬದ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆಯಾದ ಗಣೇಶನ ಪಕ್ಕದಲ್ಲಿಯೇ ಇರುವ ಮೂಷಕವಾಹನ ಅಂದರೆ ಇಲಿರಾಯನಿಗೆ ವಿಶೇಷ ಆರಾಧನೆ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಪ್ರತಿ ವರ್ಷ ಗಣೇಶ ಚೌತಿ ಬಂದರೆ ಸಾಕು ಗಣೇಶನಷ್ಟೇ ಮಹತ್ವ ಆತನ ಸಾರಥಿ ಇಲಿರಾಯನಿಗೂ ಸಹ ನೇಕಾರರ ಕುಟುಂಬದಲ್ಲಿ ಸಿಗುತ್ತೆ. ಹೀಗಾಗಿ ನೇಕಾರರ ಪ್ರತಿಯೊಬ್ಬರ ಮನೆಯಲ್ಲೂ ಇಲಿರಾಯನ ಪ್ರತಿಷ್ಠಾಪನೆ ಫಿಕ್ಸ್ ಆಗಿ ಕಂಡು ಬರುತ್ತೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲಿವಾರದ ದಿನ ಇಲಿರಾಯನನ್ನ ಆರಾಧಿಸೋದು ಯಾಕೆ?
ಸಾಮಾನ್ಯವಾಗಿ ನಾಡಿನ ತುಂಬೆಲ್ಲಾ ಇರುವ ನೇಕಾರರು ಗಣೇಶ ಪ್ರತಿಷ್ಠಾಪನೆಯಾದ ಬಳಿಕ ಅಂದರೆ ಎರಡನೇ ದಿನವನ್ನು ಇಲಿವಾರದ ದಿನವನ್ನಾಗಿ ಆಚರಿಸುತ್ತಾರೆ. ಯಾಕೆಂದರೆ ಇಲಿರಾಯ ತಮ್ಮ ಉದ್ಯೋಗಕ್ಕೆ ಎಂದೂ ಸಹ ವಿಘ್ನವಾಗದೇ ಇರಲಿ ಎನ್ನುವ ಕಾರಣಕ್ಕೆ. ಸಾಮಾನ್ಯವಾಗಿ ನೇಕಾರರು ಅಂದರೆ ಸಾಕು ಮನೆಯಲ್ಲಿ ಪ್ರತಿನಿತ್ಯ ನೇಕಾರಿಕೆ ಉದ್ಯೋಗ ನಡೆಯುತ್ತೆ. ಅದರಲ್ಲೂ ಮುಖ್ಯವಾಗಿ ರೇಷ್ಮೆ, ಚಮಕ ಸೇರಿದಂತೆ ಬೇರೆ ಬೇರೆ ತೆರನಾದ ವಸ್ತುಗಳ ದಿನಬಳಕೆಯಲ್ಲಿ ಇರುತ್ತವೆ. 

ಸಾಲದ್ದಕ್ಕೆ ನಿತ್ಯ ತಯಾರಾಗುವ ಸೀರೆಗಳನ್ನೂ ಸಹ ನೇಕಾರರು ತಮ್ಮ ಮನೆಗಳಲ್ಲಿಯೇ ಒಂದು ವಾರಗಳ ಕಾಲ ತಯಾರಾಗುವ ಸೀರೆಗಳನ್ನ ತಮ್ಮಲ್ಲಿ ಇರಿಸಿಕೊಂಡು ನಂತರ ಮಾರಾಟಕ್ಕೆ ಕೊಡುತ್ತಾರೆ. ಇಂತಹ ಅವಧಿಯಲ್ಲಿ ತಾವಿಟ್ಟುಕೊಂಡಿದ್ದ ರೇಷ್ಮೆ, ಚಮಕ, ಸೀರೆ ಇಂತಹ ಎಲ್ಲ ವಸ್ತುಗಳಿಗೆ ಇಲಿಗಳಿಂದಾಗಿ ಯಾವುದೇ ಭಾಧೆ ಬರದಿರಲಿ ಎಂದು ಪ್ರಾರ್ಥಿಸುತ್ತಾರೆ. ಹೀಗಾಗಿ ಇಲಿರಾಯನಿಗೆ ನೇಕಾರರ ಮನೆಯಲ್ಲಿ ಇನ್ನಿಲ್ಲದ ಅರಾಧನೆ ಸಹ ನಡೆಯುತ್ತೇ. ನೇಕಾರರು ತಮ್ಮ ಹಿರಿಯರ ಕಾಲದಿಂದಲೂ ಸಹ ಈ ಇಲಿವಾರದ ದಿನ ಆಚರಣೆ  ಮಾಡಿಕೊಂಡು ಬಂದಿದ್ದು, ಇಂದಿನ ಆಧುನಿಕತೆಯ ಯುಗದಲ್ಲೂ ಸಹ ಗಣೇಶ ಪ್ರತಿಷ್ಠಾಪನೆ ಆದ ಮರುದಿನ ಇಲಿವಾರದ ಆಚರಣೆ ಮುಂದುವರೆದುಕೊಂಡು ಬಂದಿದ್ದಾರೆ ಎಂದು ಹೇಳುತ್ತಾರೆ ಕೆರೂರ ಪಟ್ಟಣದ ಯುವ ನೇಕಾರ ಭರತೇಶ ಧಡಿ.

ನೇಕಾರರ ಜಗುಲಿಯ ಮೇಲೆ ಮೂಷಕವಾಹನ.
ಇನ್ನು ಇಲಿವಾರದ ದಿನ ಇಲಿರಾಯನಿಗೆ ವಿಶೇಷ ನೈವೇದ್ಯ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ನೇಕಾರರ ಮನೆಯೊಳಗೆ ಜಗುಲಿಯ ಮೇಲೆ ಅಂದು ಇಲಿರಾಯ ರಾರಾಜಿಸುತ್ತಾನೆ. ಅಂದ್ರೆ ಸಿಹಿಯಾದ ಬೆಲ್ಲದ ಹೂರಣದಿಂದ ಅಂದು ಅಡುಗೆ ಮಾಡಲಾಗುತ್ತದೆ, ಅದಕ್ಕೂ ಮುನ್ನ ಬೆಲ್ಲದ ಹೂರಣದಿಂದಲೇ ಮಾದರಿಯಾಗಿ ಇಲಿರಾಯನನ್ನ ರೂಪಿಸಿ ಅದನ್ನೇ ಜಗುಲಿಯ ಮೇಲಿಟ್ಟು ಕುಂಕುಮ ಹಚ್ಚಿ, ಮನೆಯಲ್ಲಿ ಮಾಡಿದ ಹೂರಣದ ಕಡುಬುಗಳನ್ನೇ ನೈವೇದ್ಯವಾಗಿ ನೀಡಲಾಗುತ್ತದೆ. ನಂತರ ಮನೆಮಂದಿಯೆಲ್ಲಾ ನಿಂತು ಇಲಿರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ವರ್ಷವಿಡಿ ತಮಗೆ ಭಾಧೆಯಾಗದಂತೆ ಕಾಪಾಡು ಇಲಿದೇವ ಎಂದು ಮೂಷಕವಾಹನನಿಗೆ ನೇಕಾರರು ಮೊರೆ ಹೋಗುತ್ತಾರೆ.

ಇಲಿವಾರದ ದಿನ ವಿಶೇಷ ಪೂಜೆ, ಆರಾಧನೆ
ಇನ್ನು ನೇಕಾರರ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಆದ ಮರುದಿನ ಅಂದರೆ ಎರಡನೇ ದಿನವನ್ನ ಇಲಿವಾರ ಅಂತ ಪೂಜೆ ಮಾಡುವ ವೇಳೆ ನೇಕಾರರ ಮನೆಯಲ್ಲಿನ ಮಗ್ಗಗಳು, ನೂಲು ಸುತ್ತುವ ರಾಠಿಗಳು ಸೇರಿದಂತೆ ನೇಕಾರಿಕೆಗೆ ಅಗತ್ಯವಾಗಿರುವ ಎಲ್ಲ ವಸ್ತುಗಳನ್ನೂ ಸಹ ಸ್ವಚ್ಚವಾಗಿ ತೊಳೆದು  ನಂತರ ಅವುಗಳಿಗೆ ಹೂಗಳಿಂದ ಅಲಂಕರಿಸಿ, ಪರಿಕರಗಳ ಮುಂದೆ ದೀಪ ಹಚ್ಚಿ,  ಆರತಿ ಬೆಳಗಿ ಪೂಜೆ ಸಲ್ಲಿಸುವುದರ ಮೂಲಕ ಇಲಿವಾರದ ದಿನವನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯ ರೂಢಿ ನೇಕಾರರ ಕುಟುಂಬಗಳಲ್ಲಿದೆ.

ಬಂಧುಗಳಿಗೆ & ತಮ್ಮ ಮಿತ್ರರಿಗೆ ಊಟೋಪಚಾರ
ಗಣೇಶನ ಹಬ್ಬದಲ್ಲಿ ನೇಕಾರರ ಮನೆಗಳಲ್ಲಿ ಗಣೇಶನಷ್ಟೇ ಪ್ರಾಮುಖ್ಯತೆ ಇಲಿರಾಯನಿಗೂ ಸಿಗುವುದು ವಿಶೇಷ. ಹೀಗಾಗಿ ಇಲಿವಾರದ ದಿನವನ್ನೂ ಒಂದು ಹಬ್ಬವಾಗಿ ನೇಕಾರರು ಆಚರಿಸೋದು ವಿಶೇಷ. ಇನ್ನು ವರ್ಷವಿಡಿ ನೇಕಾರಿಕೆ ವೃತ್ತಿಗೆ ಸಹಕಾರಿಯಾದವರಿಗೂ ಸಹ ನೇಕಾರರು ಊಟಕ್ಕೆ ಕರೆಯೋದು  ಮತ್ತು ಅದರೊಂದಿಗೆ ತಮ್ಮ ತಮ್ಮ  ಆತ್ಮೀಯರನ್ನೂ ಸಹ ಮನೆ ಮನೆಗೆ ಆಹ್ವಾನಿಸಿ ಊಟಕ್ಕೆ ಬಡಿಸೋದು ಇಲ್ಲಿನ ವಾಡಿಕೆ. ಹೀಗಾಗಿ ವಿಶೇಷ ಭೋಜನ ತಯಾರಿಸಿ ಅಂದು ಇಲಿರಾಯನಿಗೆ ಮೊದಲು ನೈವೇದ್ಯ ಮಾಡಿ ನಂತರ ಆಹ್ವಾನಿಸಿದ ಅತಿಥಿಗಳಿಗೆ ಊಟ ಮಾಡಿಸಿ ಕಳಿಸುವ ಸಂಪ್ರದಾಯ ರೂಢಿಯಲ್ಲಿದೆ.

ಒಟ್ಟಿನಲ್ಲಿ ನಾಡಿನಾದ್ಯಂತ ಕಳೆಗಟ್ಟಿರುವ ಗಣೇಶೋತ್ಸವದ ಮಧ್ಯೆ ನೇಕಾರರ ಕುಟುಂಬಗಳಲ್ಲಿ ಮೂಷಕವಾಹನನಿಗಾಗಿ ಇಲಿವಾರದ ದಿನದ ವಿಶೇಷ ಆಚರಣೆ ನಡೆಯೋದು ಹೆಮ್ಮೆಯ ಸಂಗತಿಯೇ ಸರಿ.

Follow Us:
Download App:
  • android
  • ios