ನವದೆಹಲಿ[ಡಿ.28]: ಮೇಕೆದಾಟು ಯೋಜನೆ ವಿರೋಧಿಸಿ ಸಂಸತ್ತಿನ ಒಳಗೆ ತಮಿಳುನಾಡು ಸಂಸದರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈಗ ಯೋಜನೆಯನ್ನು ಬೆಂಬಲಿಸಿ ರಾಜ್ಯದ ಸರ್ವ ಪಕ್ಷಗಳ ಸಂಸದರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಗುರುವಾರ ಧರಣಿ ನಡೆಸಿದ್ದಾರೆ. ಮೇಕೆದಾಟು ಯೋಜನೆಯ ಪರ ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ರಾಜ್ಯದ ಸಂಸದರು ಪ್ರತಿಭಟನೆ ನಡೆಸುವ ಜಾಗಕ್ಕೆ ತಮಿಳುನಾಡು ಸಂಸದರು ಬಂದು ತಾವೂ ಪ್ರತಿಭಟನೆ ನಡೆಸಲು ಪ್ರಯತ್ನಿಸಿ ನಂತರ ವಾಪಸಾದರು.

ತಮಿಳುನಾಡಿನ ಸಂಸದರು ಮೇಕೆದಾಟು ಯೋಜನೆ ವಿರೋಧಿಸಿ ನಿರಂತರವಾಗಿ ಲೋಕಸಭಾ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಡಿ.20ರಂದು ರಾಜ್ಯದ ಸರ್ವಪಕ್ಷಗಳ ಸಂಸದರು ಕೇಂದ್ರ ಅಂಕಿ-ಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಅವರ ನಿವಾಸದಲ್ಲಿ ಮೇಕೆದಾಟು ಯೋಜನೆ ಪರ ಸಂಸದರ ನಡೆ ಏನಿರಬೇಕು ಎಂಬ ಬಗ್ಗೆ ಚರ್ಚಿಸಲು ಸೇರಿದ್ದರು. ಈ ಸಭೆಯಲ್ಲಿ ಡಿ.27 ರಂದು ಸಂಸತ್ತಿನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.

ಗುರುವಾರದ ಪ್ರತಿಭಟನೆಯಲ್ಲಿ ಪ್ರಹ್ಲಾದ್‌ ಜೋಶಿ, ಸುರೇಶ್‌ ಅಂಗಡಿ, ಶೋಭಾ ಕರಂದ್ಲಾಜೆ, ಸಿದ್ದೇಶ್ವರ್‌, ಗದ್ದಿಗೌಡರ್‌, ಧ್ರುವನಾರಾಯಣ, ಉಗ್ರಪ್ಪ, ಹನುಮಂತಯ್ಯ, ಡಿ.ಕೆ. ಸುರೇಶ್‌, ಮುದ್ದ ಹನುಮೇಗೌಡ ಮತ್ತಿತರರು ಪಾಲ್ಗೊಂಡಿದ್ದರು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಭಾಗವಹಿಸಿದ್ದರು.