ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಯಿತು. ಸಮೀಕ್ಷೆಯಲ್ಲಿ ಮುಸ್ಲಿಂ ಸಮುದಾಯದವರು ಧರ್ಮ, ಜಾತಿ ಮತ್ತು ಉಪಜಾತಿಯ ವಿವರಗಳನ್ನು ಹೇಗೆ ನಮೂದಿಸಬೇಕು ಮಾರ್ಗದರ್ಶನ ನೀಡಲಾಯಿತು.
ಬೆಂಗಳೂರು (ಸೆ.19): ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಚಿವರು, ಶಾಸಕರು, ಧರ್ಮಗುರುಗಳು ಮತ್ತು ಅಧಿಕಾರಿಗಳ ಸಭೆ ಇಂದು ನಡೆಯಿತು.
ಈ ಸಭೆಯಲ್ಲಿ ಸಚಿವ ರಹೀಮ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಎಂಎಲ್‌ಸಿ ಸಲೀಂ ಅಹಮದ್ ಸೇರಿದಂತೆ ಮುಸ್ಲಿಂ ಸಮುದಾಯದ ಧರ್ಮಗುರುಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಎಲ್ಲರಿಗೂ ಸೂಚನೆ ನೀಡಲಾಯಿತು. ವಿಶೇಷವಾಗಿ, ಮುಸ್ಲಿಂ ಸಮುದಾಯದ ಜನರು ಸಮೀಕ್ಷೆಯಲ್ಲಿ ತಮ್ಮ ವಿವರಗಳನ್ನು ಸರಿಯಾಗಿ ನಮೂದಿಸುವಂತೆ ಕೋರಲಾಗಿದೆ. ಈ ಸಂದರ್ಭದಲ್ಲಿ ಧರ್ಮಗುರುಗಳಿಗೆ ಶುಕ್ರವಾರದ ಮಸೀದಿ ಪ್ರಾರ್ಥನೆಯ ವೇಳೆ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಇದನ್ನೂ ಓದಿ: ಕುರುಬ ಸಮುದಾಯ ಎಸ್‌ಟಿ ಸೇರ್ಪಡೆಗೆ ವಿರೋಧ, ಪಾಲಿಟಿಕಲ್ ಫೈಟ್‌ಗೆ ಸಾಕ್ಷಿಯಾದ ವಾಲ್ಮೀಕಿ ಸಮುದಾಯದ ರಾಜ್ಯ ಮಟ್ಟದ ಸಭೆ!
ಸಭೆಯಲ್ಲಿ ನೀಡಲಾದ ಮಹತ್ವದ ಸೂಚನೆಗಳು:
- ಧರ್ಮದ ಕಲಂ: ಇಸ್ಲಾಂ ಎಂದು ನಮೂದಿಸಬೇಕು.
- ಜಾತಿಯ ಕಲಂ: ಮುಸ್ಲಿಂ ಎಂದು ಉಲ್ಲೇಖಿಸಬೇಕು.
- ಉಪಜಾತಿಯ ಕಲಂ: ತಮ್ಮ ವೃತ್ತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಈ ಸೂಚನೆಗಳನ್ನು ಅನುಸರಿಸುವ ಮೂಲಕ ಯಾವುದೇ ಗೊಂದಲವಿಲ್ಲದೆ ಸಮೀಕ್ಷೆಯಲ್ಲಿ ಭಾಗವಹಿಸಲು ಸಮುದಾಯದ ಎಲ್ಲರಿಗೂ ಕರೆ ನೀಡಲಾಗಿದೆ. ಈ ಸಮೀಕ್ಷೆಯು ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
