* ಈ ತಿಂಗಳ 21ರಿಂದ ಕೋವಿಡ್‌ ಸೆಮಿ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ * 21ರಿಂದ ಇನ್ನಷ್ಟು ಅನ್ಲಾಕ್‌* 2 ದಿನದಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟ ಸಾಧ್ಯತೆ

ಬೆಂಗಳೂರು(ಜೂ.16): ಈ ತಿಂಗಳ 21ರಿಂದ ಕೋವಿಡ್‌ ಸೆಮಿ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಇನ್ನಷ್ಟುಸಡಿಲಿಕೆ ಮಾಡುವ ಸಾಧ್ಯತೆಯಿದ್ದು, ಇದರ ಸಂಬಂಧ ಶುಕ್ರವಾರ ಅಥವಾ ಶನಿವಾರದ ಹೊತ್ತಿಗೆ ಸರ್ಕಾರದ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

ಎರಡನೇ ಹಂತದಲ್ಲಿ ನಿರ್ಬಂಧ ಸಡಿಲಿಕೆ ಮಾಡುವ ವಿಚಾರ ಕುರಿತಂತೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ನಿಯಂತ್ರಣಕ್ಕೆ ಬಂದಿರುವ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳ ಬಳಿ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗುವುದು. ಎರಡನೇ ಹಂತದಲ್ಲಿ ಯಾವುದಕ್ಕೆ ಎಲ್ಲಾ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಈಗಾಗಲೇ ಮೊದಲ ಹಂತದಲ್ಲಿ 19 ಜಿಲ್ಲೆಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಇನ್ನುಳಿದ 11 ಜಿಲ್ಲೆಗಳಲ್ಲಿ ಸೆಮಿ ಲಾಕ್‌ಡೌನ್‌ ಯಥಾರೀತಿ ಮುಂದುವರೆದಿದೆ. ಹೀಗಾಗಿ, ಈ ತಿಂಗಳ 21ರಿಂದ ಸಡಿಲಿಕೆ ವ್ಯಾಪ್ತಿಗೆ ಈಗಿರುವ 19 ಜಿಲ್ಲೆಗಳ ಜೊತೆಗೆ ಇನ್ನಷ್ಟುಜಿಲ್ಲೆಗಳು ಸೇರ್ಪಡೆಯಾಗುವ ಸಂಭವವಿದೆ. ಆ ಜಿಲ್ಲೆಗಳ ಕೋವಿಡ್‌ ಪಾಸಿಟಿವಿಟಿ ದರ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದ ಸಡಿಲಿಕೆ ಸೋಮವಾರದಿಂದ ಆರಂಭಗೊಂಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಹಿಂದೆ ಇದ್ದ ಸಮಯವನ್ನು ವಿಸ್ತರಿಸಲಾಗಿದೆ. ಬೆಳಗ್ಗೆ 6ರಿಂದ 10ಗಂಟೆವರೆಗೆ ಇದ್ದ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಲಾಗಿತ್ತು. ಎರಡನೇ ಹಂತದಲ್ಲಿ ಈ ಅವಧಿಯನ್ನು ಸಂಜೆವರೆಗೆ ವಿಸ್ತರಿಸುವ ನಿರೀಕ್ಷೆಯಿದೆ. ಅಗತ್ಯ ವಸ್ತುಗಳ ಜತೆಗೆ ಇತರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸುವುದು ಬಹುತೇಕ ನಿಶ್ಚಿತವಾಗಿದೆ. ಹೋಟೆಲ್‌ಗಳಲ್ಲಿ ಈಗಿರುವ ಪಾರ್ಸೆಲ್‌ ವ್ಯವಸ್ಥೆ ಜತೆಗೆ ಅಲ್ಲೇ ಶೇ.50ರಷ್ಟುಆಸನಗಳಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸವೀರ್‍ಸ್‌ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಸಮೂಹ ಸಾರಿಗೆ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಮೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇನ್ನು ರಾತ್ರಿ ಕಫä್ರ್ಯ, ವಾರಾಂತ್ಯದ ಕಫä್ರ್ಯ ಯಥಾರೀತಿ ಮುಂದುವರಿಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಏನೇನು ಅನ್ಲಾಕ್‌?

- ಅಗತ್ಯ ವಸ್ತು ಜತೆಗೆ ಇತರ ಅಂಗಡಿ ತೆರೆಯಲು ಅವಕಾಶ ಸಂಭವ

- ಮಧ್ಯಾಹ್ನ 2 ಗಂಟೆವರೆಗಿನ ವಹಿವಾಟು ಸಂಜೆವರೆಗೂ ವಿಸ್ತರಣೆ

- ಸದ್ಯ ಲಾಕ್‌ಡೌನ್‌ ಇರುವ 11 ಜಿಲ್ಲೆಗಳಲ್ಲಿ ಅನ್‌ಲಾಕ್‌ ಸಾಧ್ಯತೆ

- ಹೋಟೆಲ್‌ಗಳಲ್ಲಿ 50% ಜನರಿಗೆ ಸೇವೆ ನೀಡಲು ಅನುಮತಿ ಸಂಭವ